Advertisement

ಬಿಜೆಪಿಯಿಂದ ಹಣದ ಹೊಳೆ: ಡಿಕೆಶಿ

06:12 PM Apr 15, 2021 | Team Udayavani |

ಸಿಂಧನೂರು: ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಜಾತಿವಾರು ಸಭೆಗಳನ್ನು ನಡೆಸಿದ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ವಿರುದ್ಧ ಚುನಾವನಾ ಆಯೋಗ ಮೊಕದ್ದಮೆ ದಾಖಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆಗ್ರಹಿಸಿದರು.

Advertisement

ನಗರದ ಹೆಲಿಪ್ಯಾಡ್‌ನ‌ಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಚುನಾವಣೆಗಳ ಸಂದರ್ಭದಲ್ಲಿ ಜಾತಿ, ಧರ್ಮವಾರು ಸಭೆಗಳನ್ನು ಆಯೋಜಿಸುವ ಕ್ರಮ ಸಂವಿಧಾನ ವಿರೋಧಿಯಾಗುತ್ತದೆ. ಸ್ವತಃ ಮುಖ್ಯಮಂತ್ರಿ ಇದನ್ನು ಉಲ್ಲಂಘಿಸಿ ಮಸ್ಕಿ ಉಪಚುನಾವಣೆಗೆ ಸಂಬಂಧಿಸಿ ಮುದಗಲ್‌ನಲ್ಲಿ ಜಾತಿವಾರು ಸಭೆಗಳನ್ನು ಆಯೋಜಿಸಿದ್ದಾರೆ. ಈ ವಿಷಯ ಆಯೋಗದ ಗಮನಕ್ಕೂ ಇರುವುದರಿಂದ ನೇರವಾಗಿ ದೂರು ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಬಿಜೆಪಿಯಿಂದ ಹಣ ಹೊಳೆ: ಇಡೀ ರಾಜ್ಯ ಸರಕಾರವೇ ಬಂದು ಮಸ್ಕಿಯಲ್ಲಿ ಕುಳಿತಿದೆ. ಅ ಧಿಕಾರಿಗಳು ಒಬ್ಬರಿಗೊಂದು, ಮತ್ತೂಬ್ಬರಿಗೊಂದು ಎಂಬಂತೆ ನಿಯಮಗಳನ್ನು ಜಾರಿಗೊಳಿಸುತ್ತಿದ್ದಾರೆ. ಸಿಎಂ ಬಂದಾಗ ಹೆಲಿಪ್ಯಾಡ್‌ಗೆ ಎಲ್ಲರನ್ನು ಸ್ವಾಗತಿಸಲು ಬಿಟ್ಟಿದ್ದಾರೆ. ಆದರೆ, ನಾನು ಬಂದ ಸಂದರ್ಭದಲ್ಲಿ ಶಾಸಕರನ್ನೂ ಸಹ ಬಿಡದೇ ತಡೆ ಹಿಡಿದಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಈ ಉಪಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆ ಹರಿಸುತ್ತಿದೆ. ಮಸ್ಕಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ತಲಾ 200 ರೂ., 300 ರೂ.ಗಳಂತೆ ಹಣ ಹಂಚಿರುವ ವಿಡಿಯೋಗಳು ಹೊರಬಿದ್ದಿದೆ. ಈಗ ಒಬ್ಬರಿಗೆ ಸಾವಿರ ರೂ.ನಂತೆ ಮತ್ತೂಂದು ಸುತ್ತಿನಲ್ಲಿ ಹಣ ಹಂಚುತ್ತಿದ್ದಾರೆ. ಹಣದ ಹೊಳೆಯನ್ನೇ ಹರಿಸುವ ಮೂಲಕ ಮತದಾರರನ್ನು ಖರೀದಿ ಮಾಡಲು ಹೊರಟಿರುವ ಬಿಜೆಪಿಗೆ ಜನ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದರು.

ಅಭ್ಯರ್ಥಿಯನ್ನು ಅನರ್ಹಗೊಳಿಸಿ: ಮಸ್ಕಿ ಕ್ಷೇತ್ರದಲ್ಲಿ ಹಣ ಹಂಚಿಕೆ ಮಾಡುತ್ತಿರುವ ವಿಡಿಯೋಗಳು ಹರಿದಾಡಿರುವುದರಿಂದ ಆಯೋಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು. ಬಿಜೆಪಿಯ ನಂದೀಶರೆಡ್ಡಿ ಹಣ ಹಂಚುತ್ತಿರುವ ಕುರಿತು ದೂರು ನೀಡಲಾಗಿದೆ. ಹಣ ಹಂಚಿಕೆ ಮಾತ್ರವಲ್ಲ; ಅವರಿಗೆ ಬೆಂಬಲವಾಗಿ ನಿಂತಿರುವ ಮುಖಂಡರ ಮೇಲೂ ಕ್ರಮ ಕೈಗೊಳ್ಳಬೇಕು. ಬಿಜೆಪಿ ಕಾರ್ಯಕರ್ತರು ಬಹಿರಂಗವಾಗಿಯೇ ಹಣ ಹಂಚುತ್ತಿರುವದರಿಂದ ಬಿಜೆಪಿ ಅಭ್ಯರ್ಥಿಯನ್ನು ಚುನಾವಣಾ ಕಣದಿಂದಲೇ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದರು.

ಸ್ಪಂದನೆಯಿಲ್ಲ: ರಾಜ್ಯ ಬಿಜೆಪಿ ಸರಕಾರ ಸಾರಿಗೆ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಹುನ್ನಾರದಲ್ಲಿದೆ. ನೌಕರರ ಬೇಡಿಕೆಗಳಿಗೆ ಸ್ಪಂದಿಸಿದ್ದರೆ ಅವರು ಕುಟುಂಬಗಳು ಬೀದಿಗೆ ಬರುತ್ತವೆ. ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಬಗ್ಗೆ ಸರಕಾರ ಗಂಭೀರವಾಗಿ ಚಿಂತನೆ ಮಾಡಬೇಕು ಎಂದು ಒತ್ತಾಯಿಸಿದರು. ಕೊರೊನಾ ನಿಯಂತ್ರಣ ಮಾಡುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ದಿನಕ್ಕೊಂದು ನಿಯಮ
ಮಾಡಿ ಜಾರಿಗೆ ತರುತ್ತಿದ್ದಾರೆ. ಉಪಚುನಾವಣೆ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. 18 ಮುಖ್ಯಮಂತ್ರಿಗಳ ಸರ್ವಪಕ್ಷ ಸಭೆ ಕರೆದಿದ್ದರು. ಆದರೆ, ಮೊದಲು ಪ್ರತಿಪಕ್ಷದವರೊಂದಿಗೆ ಚರ್ಚಿಸಿಲ್ಲ. ಈಗ ಪ್ರತಿಪಕ್ಷದವರನ್ನು ಆಹ್ವಾನಿಸಿದ್ದು, ಭಾಗವಹಿಸುವ ಕುರಿತು ಚರ್ಚೆ ನಡೆಸಲಾಗುವುದು ಎಂದರು.

Advertisement

ಶಾಸಕರಾದ ಅಮರೇಗೌಡ ಬಯ್ನಾಪುರ, ರಾಘವೇಂದ್ರ ಹಿಟ್ನಾಳ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಪ್ರದೇಶ ಯುವ ಕಾಂಗ್ರೆಸ್‌ ಅಧ್ಯಕ್ಷ ಬಸನಗೌಡ ಬಾದರ್ಲಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ, ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಎ.ವಸಂತಕುಮಾರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಖಾಜಿ ಮಲಿಕ್‌, ಪ್ರಧಾನ ಕಾರ್ಯದರ್ಶಿ ವೈ. ಅನಿಲಕುಮಾರ, ನಗರಸಭೆ ಮಾಜಿ ಸದಸ್ಯ ಎನ್‌. ಅಮರೇಶ, ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಖಾಜಾ ರೌಡಕುಂದಾ ಇತರರು ಇದ್ದರು.

ಅಧಿಕಾರಿಗಳೊಂದಿಗೆ ವಾಗ್ವಾದ
ಡಿ.ಕೆ. ಶಿವಕುಮಾರ್‌ ಆಗಮನದ ಹಿನ್ನೆಲೆಯಲ್ಲಿ ಅವರನ್ನು ಸ್ವಾಗತಿಸಿಕೊಳ್ಳಲು ಹೆಲಿಪ್ಯಾಡ್‌ಗೆ ಹೋಗಲು ತಡೆದಿದ್ದರಿಂದ ಶಾಸಕರು ಹಾಗೂ ಅ ಧಿಕಾರಿಗಳ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ತಹಶೀಲ್ದಾರ್‌ ಹಾಗೂ ಡಿವೈಎಸ್ಪಿಯ ವಿರುದ್ಧ ಶಾಸಕರಾದ ಅಮರೇಗೌಡ ಬಯ್ನಾಪೂರ, ರಾಘವೇಂದ್ರ ಹಿಟ್ನಾಳ್‌ ಹರಿಹಾಯ್ದರು. ನಮ್ಮ ನಾಯಕರು ಬಂದಾಗ ಸ್ವಾಗತಿಸಿಕೊಳ್ಳಲು ಯಾಕೆ ಅವಕಾಶ ನೀಡುತ್ತಿಲ್ಲವೆಂದು ಆಕ್ಷೇಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next