ಬೆಂಗಳೂರು: ಹಣ ದ್ವಿಗುಣಗೊಳಿಸುವುದಾಗಿ ಯುವಕನನ್ನು ನಂಬಿಸಿದ ಸೈಬರ್ ಕಳ್ಳರು ಹಂತ-ಹಂತವಾಗಿ ಬರೋಬ್ಬರಿ 8.30 ಲಕ್ಷ ರೂ. ಲಪಟಾಯಿಸಿದ್ದಾರೆ.
ಕೋಣನಕುಂಟೆ ನಿವಾಸಿ ರೋಹಿತ್ ಬಸವರಾಜ್ (33) ವಂಚನೆಗೊಳಗಾದವರು.
ಇತ್ತೀಚೆಗೆ ಬಸವರಾಜ್‌ಗೆ ಕರೆ ಮಾಡಿದ ಅಪರಿಚಿತರು ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿದ್ದರು. ಮೊದಲು ಸಾವಿರ ರೂ. ಹಾಕಿದರೆ 1,300 ರೂ. ಸಿಗುವುದಾಗಿ ಹೇಳಿದ್ದರು. ಅದರಂತೆ ಬಸವರಾಜ್ 1000 ರೂ. ಹಣ ಜಮೆ ಮಾಡಿದ್ದರು. ಇದಾದ ಕೆಲ ಹೊತ್ತಿನಲ್ಲೇ ಇವರ ಖಾತೆಗೆ 1,300 ರೂ. ಬಂದಿತ್ತು. ಅಪರಿಚಿತರ ಸೂಚನೆಯಂತೆ ಬಸವರಾಜ್ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿದ್ದರು.
5 ಲಕ್ಷ ರೂ.ನ್ನು ನಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದರೆ ದೊಡ್ಡ ಮೊತ್ತದ ಲಾಭಾಂಶದ ಜೊತೆಗೆ ಅಸಲು ಹಣವನ್ನೂ ಹಿಂತಿರುಗಿಸಲಾಗುವುದು ಎಂದು ಹೇಳಿದ್ದರು. ಅಪರಿಚಿತರ ಮಾತಿನ ಮೋಡಿಗೆ ಮರುಳಾದ ಬಸವರಾಜ್ 5 ಲಕ್ಷ ರೂ. ಅನ್ನು ಜಮೆ ಮಾಡಿದ್ದರು. ಇದಾದ ಬಳಿಕ ಆರೋಪಿಗಳು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಒಟ್ಟು ಆರೋಪಿಗಳ ಬ್ಯಾಂಕ್ ಖಾತೆಗೆ ಒಟ್ಟು 8.30 ಲಕ್ಷ ರೂ. ಜಮೆ ಮಾಡಿದ ಬಸವರಾಜ್, ನ್ಯಾಯಕ್ಕಾಗಿ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ.