ಕುಮಟಾ: ಮನೆಯ ಕಷ್ಟಗಳನ್ನು ದೂರ ಮಾಡುತ್ತೇವೆ. ನನ್ನ ಮೈ ಮೇಲೆ ದೇವರು ಬರುತ್ತಾಳೆ. ಸಿಟ್ಟು ಬಂದರೆ ಮನೆ ಸರ್ವನಾಶವಾಗಲಿ ಎಂದು ಶಾಪ ಹಾಕುತ್ತೇನೆ ಎಂದು ಬೆದರಿಸುವ ದೇವರ ಪಲ್ಲಕ್ಕಿ ತರುವ ನಕಲಿ ತಂಡವೊಂದು ಓರ್ವರ ಮನೆಯ ಗಾಜುಗಳನ್ನು ಮತ್ತು ಮನೆಯ ತುಳಸಿಕಟ್ಟೆ ಒಡೆದು ಹಾಕಿ ರಂಪಾಟ ಮಾಡಿದ ಘಟನೆ ತಾಲೂಕಿನ ಕರ್ಕಿಮಕ್ಕಿಯಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದೆ.
ಈ ನಕಲಿ ತಂಡದ ಮೇಲೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮೂಲತಃ ಹೆಗಡೆ ನಿವಾಸಿ ಸುನೀಲ ಅಶೋಕಬರ್ಕುಂಬಿ, ಮಾಸೂರಿನ ರವಿಂದ್ರ ಅಂಬಿಗ, ದೀಪಕ ಕುಪ್ಪಯ್ಯ ಪಟಗಾರ, ಶಿರಸಿ ಗಾಂಧಿನಗರದ ನಿವಾಸಿ ಶ್ರುತಿ, ಹಾಗೂ ಹೆಗಡೆಯ ಸುವರ್ಣ ಸೇರಿದಂತೆ 7 ಜನರ ತಂಡ ಮಾರಿಕಾಂಬಾ ದೇವಿ, ಹನುಮಂತ ದೇವರ ಪಲ್ಲಕ್ಕಿ ಹಿಡಿದುಕೊಂಡು ತಾಲೂಕಿನ ಕೆಲ ಊರುಗಳಿಗೆ ತೆರಳಿ, ಹೀಗೆ ಜನರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ.
ಚಂದಾವರದ ಆಂಜನೇಯನಷ್ಟೇ ಪ್ರಭಾವ ಈ ಪಲ್ಲಕ್ಕಿ ದೇವರು ಹೊಂದಿದೆ ಎಂದು ಜನರನ್ನು ನಂಬಿಸಿ ತಾಲೂಕಿನ ಮೂರೂರಿನ ಕರ್ಕಿಮಕ್ಕಿ ನಿವಾಸಿ ಮಾಸ್ತಪ್ಪ ನಾಯ್ಕರ ಮನೆಗೆ ಬಂದು ಮನೆಯ ಗಾಜುಗಳನ್ನು ಒಡೆದು ಹಾಕಿದ್ದಾನೆ. ನಂತರ ಪಕ್ಕದ ಮನೆಯ ಆನಂದ ನಾಯ್ಕರ ಮನೆ ಎದುರಿನ ತುಳಸಿ ಕಟ್ಟೆಯಲ್ಲಿ ದೋಷವಿದೆ. ಅದನ್ನು ಸರಿಪಡಿಸಲು ತುಳಸಿ ಕಟ್ಟೆಯನ್ನು ಧ್ವಂಸ ಮಾಡಿದ್ದಾರೆ. ತಂಡದಲ್ಲಿದ್ದ ಮಹಿಳೆಯೊಬ್ಬಳು ನನ್ನ ಮೈಮೇಲೆ ದೇವಿ ಬರುತ್ತಾಳೆ. ನಾನು ಕೊಪಗೊಂಡರೆ ನಿಮಗೆ ಶಾಪ ಹಾಕುತ್ತೇನೆ ಎಂದೆಲ್ಲ ಹೇಳಿ, ಅವಾಚ್ಯ ಶಬ್ದಗಳಿಂದ ಕುಟುಂಬದ ಸದಸ್ಯರಿಗೆ ನಿಂದಿಸಿ, ನಿಮಗೆ ಶಾಪ ನೀಡುತ್ತೇನೆ ಎಂದು ಹೇಳಿ, ಇದನ್ನು ಗಮನಿಸಿದ ಸ್ಥಳೀಯರು ಸಂಶಯದಿಂದ ವಿಚಾರಿಸಿದಾಗ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ
ಈ ಕುರಿತು ಕುಮಟಾ ಠಾಣೆಗೆ ಮಾಹಿತಿ ನೀಡಿದಾಗ ಸ್ಥಳಕ್ಕಾಗಮಿಸಿದ ಪೊಲೀಸರು ತಂಡದ ಸದಸ್ಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರತಿ ಮನೆಯಿಂದ 3 ಸಾವಿರ ವಸೂಲಿ: ದೇವರ ಪಲ್ಲಕ್ಕಿ ಮನೆಗೆ ತೆರಳಿದರೆ ಕನಿಷ್ಠ 3 ಸಾವಿರ ರೂ. ನೀಡಲೇಬೇಕು. ಇಲ್ಲವಾದಲ್ಲಿ ಮನೆಯ ಸದಸ್ಯರ ಕುರಿತು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಈ ಮೊದಲು ಕುಮಟಾ ಪಟ್ಟಣ, ಹೆಗಡೆ, ಅಳವಳ್ಳಿ ಮುಂತಾದ ಪ್ರದೇಶಗಳಿಗೆ ತೆರಳಿ ಜನರಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡಿದ್ದಾರೆ. ನಂತರ ಕರ್ಕಿಮಕ್ಕಿ ಗ್ರಾಮದ ಮನೆಯಗೆ ಬಂದಾಗ ಸತ್ಯಾಸತ್ಯತೆ ಹೊರಬಂದಿದೆ.
ನಕಲಿ ಪೂಜಾರಿ: ತಾಲೂಕಿನ ಹೆಗಡೆ ನಿವಾಸಿ ಕಂಪ್ಯೂಟರ್ ತರಗತಿ ನಡೆಸುತ್ತಿರುವ ಸುನೀಲ್ ಎಂಬಾತ ತನ್ನ ಮನೆಯಲ್ಲಿ ನಕಲಿ ದೇವರ ಪಲ್ಲಕ್ಕಿ ತಯಾರಿಸಿ, ಹೀಗೆ ಊರೂರಿಗೆ ತೆರಳಿ ಜನರಿಂದ ಹಣ ವಸೂಲಿ ದಂಧೆ ನಡೆಸುತ್ತಿದ್ದ ಬಗ್ಗೆ ಪೊಲೀಸರು ಲಾಠಿ ರುಚಿ ತೋರಿಸದ ನಂತರ ಎಲ್ಲ ವಿಷಯಗಳು ಹೊರ ಬಂದಿದೆ.
ಮುಚ್ಚಳಿಕೆ: ನಕಲಿ ಪಲ್ಲಕ್ಕಿಯಿಂದ ಜನರಿಗೆ ಸುಳ್ಳು ಹೇಳಿ ಹಣ ಪಡೆಯುತ್ತಿದ್ದ ತಂಡದ 7 ಸದಸ್ಯರನ್ನು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿ, ಎಲ್ಲ ವಿಷಯಗಳನ್ನು ಸಂಗ್ರಹಿಸಿದ ಪೊಲೀಸರು, ಹಾನಿಯ ನಷ್ಟವನ್ನು ಮನೆಯವರಿಗೆ ಭರಿಸಿಕೊಡಬೇಕೆಂದು ಈ ನಕಲಿ ತಂಡಕ್ಕೆ ಸೂಚನೆ ನೀಡಿದ್ದಾರೆ. ನಂತರ ಎಲ್ಲರನ್ನು ಬಿಡುಗಡೆಗೊಳಿಸಲಾಯಿತು.