ಕೆ.ಆರ್.ಪೇಟೆ: ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ವಾಹನ ನಿಲುಗಡೆಗೆ ಹಣ ವಸೂಲಿ ಮಾಡಲು ಅವಕಾಶ ನೀಡಿರುವ ಕೆ.ಆರ್.ಪೇಟೆ ತಹಶೀಲ್ದಾರರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸರ್ವೆಇಲಾಖೆ, ಆಹಾರ ಇಲಾಖೆ, ರೇಷ್ಮೆ ಇಲಾಖೆ ಸೇರಿದಂತೆ ಹಲವು ಸಾರ್ವಜನಿಕ ಇಲಾಖೆಗಳಿವೆ. ನಿತ್ಯ ತಾಲೂಕಿನ ವಿವಿಧ ಭಾಗಗಳಿಂದ ನೂರಾರು ರೈತರು ತಮ್ಮ ವ್ಯವಹಾರಗಳಿಗಾಗಿ ಮಿನಿ ಧಾನಸೌಧಕ್ಕೆ ಆಗಮಿಸುತ್ತಾರೆ. ಹೀಗೆ ಬಂದ ರೈತರು ಮಿನಿ ವಿಧಾನಸೌಧದ ಮುಂದಿನ ವಿಶಾಲ ಬಯಲಿನಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ, ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಹೋಗುತ್ತಿದ್ದರು.
ಸುಗಮ ಸಂಚಾರಕ್ಕೆ ತೊಂದರೆ: ತಹಶೀಲ್ದಾರ್ ಎಂ. ಶಿವಮೂರ್ತಿ ಮಿನಿ ವಿಧಾನಸೌಧದ ಮುಂದೆ ವಾಹನ ನಿಲುಗಡೆಯನ್ನು ತಡೆಯುವ ಉದ್ದೇಶದಿಂದ ಮಿನಿ ವಿಧಾನ ಸೌಧದ ಆವರಣದಲ್ಲಿ ಬೃಹತ್ ಗೇಟ್ ನಿರ್ಮಿಸಿ, ಅಲ್ಲಿಗೊಬ್ಬ ಕಾವಲುಗಾರನನ್ನು ನೇಮಿಸಿದರು. ಪರಿಣಾಮ ರೈತರು ತಮ್ಮ ವಾಹನಗಳಿಗೆ ಪಾರ್ಕಿಂಗ್ ಜಾಗವಿಲ್ಲದೆ ಮುಖ್ಯ ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸಲಾರಂಭಿಸಿದರು. ಮಿನಿ ವಿಧಾನಸೌಧದ ಮುಂದಿನ ರಸ್ತೆ ನಾಗಮಂಗಲ ಮತ್ತು ಮೇಲುಕೋಟೆಯನ್ನು ಸಂಪರ್ಕಿಸುವ ಮುಖ್ಯ ರಸ್ತೆಯಾಗಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ಸಾರ್ವಜನಿಕರು ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವುದರ ಪರಿಣಾಮ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ.
ಪಾರ್ಕಿಂಗ್‌ಗೆ ಶುಲ್ಕ: ಸಾರ್ವಜನಿಕರ ಪಾರ್ಕಿಂಗ್ ಸಮಸ್ಯೆಗೆ ಪರಿಹಾರಕ್ಕೆ ಮುಂದಾದ ತಹಶೀಲ್ದಾರರು ಹಳೇ ತಾಲೂಕು ಕಚೇರಿ ಹಿಂಭಾಗ ಪಾರ್ಕಿಂಗ್ ವ್ಯವಸ್ಥೆಗೆ ಜಾಗ ಕಲ್ಪಿಸಿ, ಖಾಸಗಿ ವ್ಯಕ್ತಿಯೊಬ್ಬರಿಗೆ ಪಾರ್ಕಿಂಗ್ ಶುಲ್ಪ ವಸೂಲಿಗೆ ಅವಕಾಶ ಕಲ್ಪಿಸಿದ್ದಾರೆ. ಇದು ಸಾರ್ವಜನಿಕರನ್ನು ಕೆರಳಿಸಿದೆ. ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆಗೆ ಮಾಡಿದರೆ ಶುಲ್ಕ ಕೊಡಬೇಕು. ಮೊದಲೇ ತಾಲೂಕು ಕಚೇರಿಯಲ್ಲಿಎಲ್ಲದಕ್ಕೂ ಹಣಕೊಟ್ಟು ಕೊಟ್ಟು ಸಾಕಾಗುತ್ತಿರುವ ರೈತರು, ಹೊಸ ಸುಲಿಗೆಯಿಂದ ಬೇಸತ್ತು ತಮ್ಮ ವಾಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸುತ್ತಿದ್ದಾರೆ. ಇದರಿಂದ ಮಿನಿವಿಧಾನಸೌಧದ ಮುಂಭಾಗದ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗುತ್ತಿದೆ.
ಶುಲ್ಕ ವಸೂಲಿಗೆ ವಿರೋಧ: ಮಿನಿ ವಿಧಾನಸೌಧದ ಆವರಣದ ಸರ್ಕಾರಿ ಜಾಗದಲ್ಲಿ ಪಾರ್ಕಿಂಗ್ ಶುಲ್ಕ ವಸೂಲಿಗೆ ರೈತ ಸಂಘದ ವಿರೋಧವಿದೆ. ಪಾರ್ಕಿಂಗ್ ಶುಲ್ಕ ವಸೂಲಿಗೆ ತಹಶೀಲ್ದಾರ್ ನಿಯಮಾನುಸಾರ ಟೆಂಡರ್ ಕರೆದಿಲ್ಲ. ಕರೆದಿದ್ದರೆ ಟೆಂಡರ್ ಪ್ರಕಿಯೆ ಮಾಹಿತಿ ರಾಜ್ಯದಯಾವ ಪತ್ರಿಕೆಯಲ್ಲಿ ಪ್ರಕಟವಾಗಿದೆ ಎನ್ನುವುದನ್ನು ತಹಶೀಲ್ದಾರ್ ಬಹಿರಂಗ ಪಡಿಸಬೇಕು. ಗಂಟೆಗಳ ಲೆಕ್ಕದಲ್ಲಿ ರೈತರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ರೈತರ ಕೆಲಸವನ್ನು ಕಂದಾಯ ಇಲಾಖೆಯವರು ಸಕಾಲಕ್ಕೆ ಮಾಡಿಕೊಟ್ಟರೆ ರೈತರು ಇಲ್ಲಿಗೆ ಏಕೆ ಬರುತ್ತಾರೆ. ಒಂದು ಆರ್.ಟಿ.ಸಿ ಪಡೆಯಲು ರೈತರು ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಗಂಟೆಗಳ ಲೆಕ್ಕದಲ್ಲಿ ಪಾರ್ಕಿಂಗ್ ಶುಲ್ಕ ನೀಡಿದರೆ, ನಿತ್ಯ ನೂರಾರು ರೂ.,ರೈತರು ಪಾರ್ಕಿಂಗ್ ಶುಲ್ಕಕ್ಕೆ ಕೊಡಬೇಕಾಗುತ್ತದೆ. ತಕ್ಷಣವೇ ಪಾರ್ಕಿಂಗ್ ಶುಲ್ಕ ವಸೂಲಿಯನ್ನು ಕೈಬಿಟ್ಟು ಸರ್ಕಾರಿ ಜಾಗದಲ್ಲಿ ರೈತರಿಗೆ ಉಚಿತ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದು ತಾಲೂಕು ರೈತಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್ ಹೇಳಿದ್ದಾರೆ.
ಮುಕ್ತ ಅವಕಾಶ ಕಲ್ಪಿಸಿ: ಮಿನಿ ವಿಧಾನಸೌಧ ಆವರಣದಲ್ಲಿ ವಾಹನ ನಿಲುಗಡೆಗೆ ಮುಕ್ತ ಅವಕಾಶ ಕಲ್ಪಿಸಿಕೊಡಬೇಕಾಗಿದೆ. ತಾಲೂಕು ಆಡಳಿತದ ಜವಾಬ್ದಾರಿ. ಆದರೆ, ಇಲ್ಲಿನ ತಹಶೀಲ್ದಾರರೇ ಸಾರ್ವಜನಿಕರ ಪ್ರವೇಶಕ್ಕೆಕೋಟೆ ಕಟ್ಟಿ ಸರ್ಕಾರಿ ಜಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಗೆ ಪಾರ್ಕಿಂಗ್ ಹೆಸರಿನಲ್ಲಿ ಹಣವಸೂಲಿಗೆ ಅವಕಾಶ ಕಲ್ಪಿಸಿಕೊಟ್ಟಿರುವುದು ಅಕ್ಷಮ್ಯ. ತಾಲೂಕು ಆಡಳಿತದ ರೈತ ವಿರೋಧಿ ಕ್ರಮ ತಾಲೂಕು ಬಿಜೆಪಿ ವಿರೋಧಿಸುತ್ತದೆ. ಈ ಬಗ್ಗೆ ತಹಶೀಲ್ದಾರರ ಬಳಿ ಮಾತನಾಡಿ ಸಮಸ್ಯೆಯನ್ನು ಸರಿಪಡಿಸಲಾಗುವುದು ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ ತಿಳಿಸಿದ್ದಾರೆ.
ದ್ವಿಚಕ್ರ ವಾಹನ ಮಾಲೀಕರು ಹಾಗೂ ಕಾರು ಮಾಲೀಕರ ವಾಹನಗಳ ಸುರಕ್ಷತೆಯ ದೃಷ್ಟಿಯಿಂದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ನಿಮ್ಮ ವಾಹನಗಳನ್ನು ನೋಡಿಕೊಳ್ಳುವ ವ್ಯಕ್ತಿಯ ಜೀವನೋಪಾಯಕ್ಕಾಗಿ ಎರಡು ಅಥವಾ ಐದು ರೂ., ನೀಡಿ. ನಿಮ್ಮ ಬಳಿ ಹಣ ಇಲ್ಲವಾದಲ್ಲಿ ಉಚಿತವಾಗಿ ನಿಮ್ಮ ವಾಹನವನ್ನು ಕೊಂಡೋಯಿರಿ. ಯಾರೂ ಸಹ ಇಂತಿಷ್ಟೇ ಹಣ ಕೊಡಬೇಕು ಎಂದು ಷರತ್ತು ಹಾಕುವುದಿಲ್ಲ. ಆದರೆ, ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ಮಾಡಬೇಡಿ
–ಎಂ.ಶಿವಮೂರ್ತಿ, ತಹಶೀಲ್ದಾರ್