Advertisement
ಅನೇಕ ಆಸ್ತಿಗಳು ಕರ ಸಂಪರ್ಕ ಜಾಲದಿಂದ ಹೊರಗಿರುವುದು ಸೇರಿದಂತೆ ಹತ್ತಾರು ಕಾರಣಗಳಿಂದಾಗಿ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಖ್ಯಾತಿಯ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವೇತನ-ಬಿಲ್ ಪಾವತಿಗೂ ಪರದಾಡುವ ಸ್ಥಿತಿಗೆ ತಲುಪಿದೆ.
Related Articles
Advertisement
ಪಿಂಚಣಿ ಬಾಕಿ ಹಣ ಬಾರದಿರುವುದರಿಂದ ಪಾಲಿಕೆ ಅಭಿವೃದ್ಧಿ ಯೋಜನೆಗೆಂದು ಇರುವ ಹಣವನ್ನು ಅನಿವಾರ್ಯವಾಗಿ ನಿವೃತ್ತ ನೌಕರರಿಗೆ ನೀಡಬೇಕಾಗಿದ್ದರಿಂದ ರಸ್ತೆ ಗುಂಡಿ ಮುಚ್ಚುವುದು, ಪಾಲಿಕೆಯ ವಿವಿಧ ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಗೆ ಬಿಲ್ ಪಾವತಿಗೂ ಹಣದ ಅಡಚಣೆ ಉಂಟಾಗಿದೆ ಎಂಬುದು ಅಧಿಕಾರಿಗಳ ಅನಿಸಿಕೆ.
2004ರಿಂದ ಜಾರಿಗೆ ಬಂದ ನಿಧಿ ಆಧಾರಿತ ಖಾತೆ ವ್ಯವಸ್ಥೆಯಿಂದ ಇಂತಹ ಪರಿಸ್ಥಿತಿ ಉದ್ಭವಿಸಿರಲಿಲ್ಲ. ಈ ವ್ಯವಸ್ಥೆಯಲ್ಲಿ ಯಾವುದೋ ಹಣವನ್ನು ಇನ್ನಾವುದೋ ಕಾರ್ಯಗಳಿಗೆ ಬಳಸುವಂತಿರಲಿಲ್ಲ. ಹೀಗಾಗಿ ಇರುವ ಅನುದಾನದಲ್ಲಿ ಯೋಜನೆ ಸಿದ್ಧವಾಗುತ್ತಿತ್ತು. ಹೀಗಾಗಿ ಪಾಲಿಕೆಗಳಿಗೆ ಹಣದ ಕೊರತೆ ಉಂಟಾಗುತ್ತಿರಲಿಲ್ಲ.
ಆದರೆ, 2014ರಲ್ಲಾದ ಎಡವಟ್ಟಿನಿಂದ ಪಾಲಿಕೆ ಆರ್ಥಿಕ ಮುಗ್ಗಟ್ಟಿಗೆ ತಳ್ಳಲ್ಪಟ್ಟಿದೆ. ಪ್ರತಿ ತಿಂಗಳು ಪಾಲಿಕೆಗೆ ಆದಾಯದ ರೂಪದಲ್ಲಿ ಸರಾಸರಿ 6 ಕೋಟಿ ರೂ. ಬರುತ್ತಿದೆ. ಆದರೆ ಪಿಂಚಣಿ 3 ಕೋಟಿ ರೂ., ಸುಮಾರು 1880 ಗುತ್ತಿಗೆ ಪೌರ ಕಾರ್ಮಿಕರಿಗೆ 3 ಕೋಟಿ ರೂ. ವೇತನ ಸೇರಿದಂತೆ ಇತರೆ ಎಲ್ಲಾ ಖರ್ಚುಗಳನ್ನು ನೋಡಿದರೆ ಸುಮಾರು 12 ಕೋಟಿ ರೂ. ಬೇಕಾಗುತ್ತದೆ.
ಸರ್ಕಾರ ಪಿಂಚಣಿ ನೀಡದ ಕಾರಣ ಪಾಲಿಕೆ ಪ್ರತಿ ತಿಂಗಳು 3.30 ಕೋಟಿ ರೂ. ಸಾಮಾನ್ಯ ನಿಧಿಯಿಂದ ಪಾವತಿ ಮಾಡುತ್ತಿದೆ. ಇದಕ್ಕಾಗಿ ಬೇರಾವ ಆದಾಯ ಅಥವಾ ಅನುದಾನಗಳಿಲ್ಲ. ಇನ್ನು ಪಾಲಿಕೆಗೆ ಆದಾಯದ ಮೂಲವಾದ ಕರ-ಶುಲ್ಕ ರೂಪದಲ್ಲಿ ಪ್ರಸಕ್ತ ಸಾಲಿನಲ್ಲಿ 59 ಕೋಟಿ ರೂ. ನಿರೀಕ್ಷೆ ಮಾಡಲಾಗಿತ್ತು. ಆದರೆ ವಾಸ್ತವದಲ್ಲಿ ಶೇ.65-75ರಷ್ಟು ಮಾತ್ರ ಕರ ಸಂಗ್ರಹವಾಗಿದೆ.
ಸರ್ಕಾರ ಈ ಹಿಂದೆ ಎಸ್‌ಎಫ್ಸಿ ಅನುದಾನದಲ್ಲಿ ಹಾಲಿ ನೌಕರರ ವೇತನ ಹಾಗೂ ಪಿಂಚಣಿಯನ್ನು ನೀಡುತ್ತಿತ್ತು. ಆದರೆ, 2014ರಲ್ಲಿ ಪಾಲಿಕೆಗೆ ಬೇಕಾದ ಅನುದಾನ ಬೇಡಿಕೆಯನ್ನು ಸಲ್ಲಿಸುವಲ್ಲಿ ಪಿಂಚಣಿ ಬಗ್ಗೆ ಪ್ರಸ್ತಾಪ ಮಾಡದಿರುವುದೆ ಈ ಆರ್ಥಿಕ ಮುಗ್ಗಟ್ಟಿಗೆ ಕಾರಣ ಎಂಬ ಅಭಿಪ್ರಾಯವಿದೆ.
ಅಲ್ಲದೇ ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಉದ್ದೇಶಪೂರ್ವಕವಾಗಿ ರಾಜ್ಯ ಸರ್ಕಾರ ಪಿಂಚಣಿ ಹಣ ನೀಡುತ್ತಿಲ್ಲ ಎಂಬ ಆರೋಪವೂ ಇದೆ. ಒಟ್ಟಾರೆ ಹಲವು ಕಾರಣದಿಂದ ಪಾಲಿಕೆ ಆರ್ಥಿಕ ಮುಗ್ಗಟ್ಟಿನಿಂದ ನಗರದಲ್ಲಿ ಸಣ್ಣ ಕಾಮಗಾರಿಗಳನ್ನೂ ಕೈಗೊಳ್ಳಲು ಪರದಾಡುವಂತಾಗಿದ್ದು ಮಾತ್ರ ವಿಪರ್ಯಾಸ.
* ಹೇಮರಡ್ಡಿ ಸೈದಾಪುರ