Advertisement
ಏನಿದು ಎಲ್‌ಐಸಿ ಐಪಿಒ?ಮೊದಲಿಗೆ ಐಪಿಒ ಎಂದರೆ ಪ್ರಾಥಮಿಕ ಸಾರ್ವಜನಿಕ ಕೊಡುಗೆ ಎಂದರ್ಥ. ಎಂದರೆ ಷೇರು ಮಾರುಕಟ್ಟೆಯಲ್ಲಿ ತನ್ನ ಷೇರುಗಳನ್ನು ಪರಿಚಯಿಸುವ ಅಥವಾ ಮೊದಲ ಬಾರಿಗೆ ಮಾರಾಟ ಮಾಡುವ ಒಂದು ವ್ಯವಸ್ಥೆ. ಇದುವರೆಗೆ ಎಲ್‌ಐಸಿ ಸಂಪೂರ್ಣ ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿದೆ. ರಾಷ್ಟ್ರಪತಿ ಅವರೇ ಈ ಕಂಪೆನಿಯ ಪ್ರವರ್ತಕರು. ಹಣಕಾಸು ಇಲಾಖೆಯ ಅಧೀನದಲ್ಲಿ ಇದು ಕಾರ್ಯ ನಿರ್ವಹಿಸುತ್ತದೆ. ಇನ್ನು ಮುಂದೆ ಅದು ಸರಕಾರಿ ಮತ್ತು ಖಾಸಗಿ ಸಂಸ್ಥೆಯಾಗಿ ಬದಲಾಗಲಿದೆ. ಇನ್ನು ದೇಶದಲ್ಲಿ ಒಟ್ಟಾರೆಯಾಗಿ 24 ವಿಮಾ ಸಂಸ್ಥೆಗಳಿವೆ. ಇದರಲ್ಲಿ ಭಾರತೀಯ ಜೀವ ವಿಮಾ ಸಂಸ್ಥೆ ಮಾತ್ರ ಸಂಪೂರ್ಣವಾಗಿ ಸರಕಾರಿ ಸ್ವಾಮ್ಯಕ್ಕೆ ಸೇರಿದ್ದಾಗಿತ್ತು. ಉಳಿದ ಎಲ್ಲ ಸಂಸ್ಥೆಗಳೂ ಖಾಸಗಿಗೆ ಸೇರಿವೆ.
ಎಲ್‌ಐಸಿ ಕಂಪೆನಿಯಲ್ಲಿ ಒಟ್ಟು 632 ಕೋಟಿ ಷೇರುಗಳಿವೆ. ಸದ್ಯ ಇವಿಷ್ಟನ್ನೂ ಕೇಂದ್ರ ಸರಕಾರವೇ ಹೊಂದಿದೆ. ಮೇ 4ರಂದು ಆರಂಭವಾಗಲಿರುವ ಐಪಿಒದಲ್ಲಿ ಒಟ್ಟಾರೆಯಾಗಿ 22.13 ಕೋಟಿ ಷೇರುಗಳನ್ನು ಮಾರಾಟ ಮಾಡಲಾಗುತ್ತದೆ. ಅಂದರೆ ಕಂಪೆನಿಯ ಶೇ.3.5ರಷ್ಟನ್ನು ಮಾತ್ರ ಮಾರಾಟ ಮಾಡಲಾಗುವುದು. ಎಷ್ಟು ಹಣ ಬರಲಿದೆ?
ಈಗಿನ ಐಪಿಒದಿಂದ ಎಲ್‌ಐಸಿ ಸಂಸ್ಥೆಗೆ ಒಟ್ಟಾರೆಯಾಗಿ 21,257 ಕೋಟಿ ರೂ. ಬಂಡವಾಳ ಹರಿದು ಬರುವ ಸಾಧ್ಯತೆ ಇದೆ. ಸದ್ಯ ಎಲ್‌ಐಸಿ ಕಂಪೆನಿ 6.07 ಲಕ್ಷ ಕೋಟಿ ರೂ. ಮೌಲ್ಯದ್ದಾಗಿದೆ. ಈ ಐಪಿಒವನ್ನು ಸಂಪೂರ್ಣವಾಗಿ ಕೇಂದ್ರ ಸರಕಾರವೇ ಬಿಡುಗಡೆ ಮಾಡುತ್ತಿದೆ ಎಂಬುದು ವಿಶೇಷ. ಮಾರ್ಕೆಟ್ ಮೌಲ್ಯ ಇಳಿಕೆ
ಎಲ್‌ಐಸಿ ಐಪಿಒವನ್ನು ಈ ಹಿಂದೆಯೇ ಬಿಡುಗಡೆ ಮಾಡುವ ಸಂಬಂಧ ಕೇಂದ್ರ ಚಿಂತನೆ ನಡೆಸಿತ್ತು. ಆದರೆ ಕೊರೊನಾದಿಂದಾಗಿ ಇದು ಮುಂದೂಡಿಕೆಯಾಗುತ್ತಲೇ ಇತ್ತು. ಅಂದರೆ ಆರಂಭದಲ್ಲಿ ಎಲ್‌ಐಸಿ ಸಂಸ್ಥೆಯ ಒಟ್ಟಾರೆ ಮೌಲ್ಯವನ್ನು 20 ಲಕ್ಷ ಕೋಟಿ ರೂ. ಎಂದು ಪರಿಗಣಿಸಲಾಗಿತ್ತು. ಆದರೆ ಕಂಪೆನಿಯ ಮಾರುಕಟ್ಟೆ ಮೌಲ್ಯವನ್ನು ದಿಡೀರನೇ 6 ಲಕ್ಷ ಕೋಟಿ ರೂ.ಗೆ ಇಳಿಕೆ ಮಾಡಲಾಗಿದೆ. ಇನ್ನು ಶೇ.10ರಷ್ಟು ಷೇರುಗಳ ಮಾರಾಟಕ್ಕೆ ಮುಂದಾಗಲಾಗಿತ್ತು. ಅನಂತರದಲ್ಲಿ ಇದನ್ನು ಶೇ.5ಕ್ಕೆ ಇಳಿಸಲಾಗಿತ್ತು. ಆದರೆ ಶೇ3.5ರಷ್ಟು ಷೇರುಗಳನ್ನು ಮಾರಲು ಕಂಪೆನಿ ಮುಂದಾಗಿದೆ. ಜತೆಗೆ ಬಂಡವಾಳ ಹರಿದು ಬರುವ ನಿರೀಕ್ಷೆಯನ್ನೂ 60 ಸಾವಿರ ಕೋಟಿ ರೂ.ಗಳಿಂದ 21,257 ಕೋಟಿ ರೂ.ಗಳಿಗೆ ಇಳಿಕೆ ಮಾಡಲಾಗಿದೆ. ಈ ಬಗ್ಗೆ ಕೇರಳದ ವಿತ್ತ ಸಚಿವ ಥಾಮಸ್ ಐಸಾಕ್ ಅವರು ಟ್ವೀಟ್ ಮೂಲಕ ಪ್ರಶ್ನಿಸಿದ್ದು, ಷೇರುಗಳ ಮಾರಾಟಕ್ಕೆ ಇಷ್ಟೊಂದು ಹಪಾಹಪಿತನ ಬೇಕಿತ್ತೇ ಎಂದಿದ್ದಾರೆ.
Advertisement
ಎಲ್‌ಐಸಿ ಐಪಿಒದಲ್ಲಿ ಹಣ ಹಾಕುವುದು ಸುರಕ್ಷಿತವೇ?ಮಾರುಕಟ್ಟೆ ತಜ್ಞರ ಪ್ರಕಾರ, ಎಲ್‌ಐಸಿ ಐಪಿಒದಲ್ಲಿ ಹೂಡಿಕೆ ಮಾಡುವುದು ಸಮಂಜಸ ನಿರ್ಧಾರ. ಇದಕ್ಕೆ ಕಾರಣಗಳೂ ಇವೆ. ಅವುಗಳೆಂದರೆ 1 ಅತ್ಯುತ್ತಮ ಪ್ರೊಡಕ್ಟ್ ಗಳು
ಇದುವರೆಗೆ ಎಲ್‌ಐಸಿ ವಿಮೆ ಖರೀದಿಸಿ ನಷ್ಟಕ್ಕೊಳಗಾದವರು ಇಲ್ಲ. ಇದಕ್ಕೆ ಕಾರಣ, ಅದರ ಯೋಜನೆಗಳು. ಭಾರತೀಯ ಜೀವ ವಿಮಾ ನಿಗಮವು ಸಾವು, ಅನಾರೋಗ್ಯ ಮತ್ತು ಉಳಿತಾಯ ಯೋಜನೆಗಳಿಗಾಗಿ ವಿಮೆ ಮಾಡಿಕೊಡುತ್ತದೆ. ಅಲ್ಲದೆ ಟರ್ಮ್ ಇನುರೆನ್ಸ್, ಆನ್ಯುಟೀಸ್, ಎಂಡೋವೆ¾ಂಟ್, ಪಿಂಚಣಿ ಯೋಜನೆ ಮತ್ತು ಯೂನಿಟ್ ಲಿಂಕ್ಡ್ ಸೇವಿಂಗ್ ಪ್ಲಾನ್‌ಗಳನ್ನು ನೀಡುತ್ತದೆ. 2 ಬೆಳವಣಿಗೆ
ಎಲ್‌ಐಸಿ ಕಂಪೆನಿಯು ಸರಕಾರ ಮತ್ತು ಖಾಸಗಿ ರಂಗದ ಹಲವಾರು ಕಂಪೆನಿಗಳ ಮೇಲೆ ಹೂಡಿಕೆ ಮಾಡಿದೆ. ಇದರ ಎರಡು ಸಬ್ಸಿಡರೀಸ್ ಮತ್ತು ನಾಲ್ಕು ಸಹಾಯಕ ಕಂಪೆನಿಗಳು ಪೆನ್ಶನ್ ಫಂಡ್, ಹೌಸಿಂಗ್ ಫೈನಾನ್ಸ್, ಮ್ಯೂಚೂವಲ್ ಫಂಡ್, ಬ್ಯಾಂಕಿಂಗ್ ಮತ್ತು ಕಾರ್ಡ್ ವ್ಯಾಪಾರವನ್ನು ನೋಡಿಕೊಳ್ಳುತ್ತವೆ. ಅಲ್ಲದೆ, ಎಲ್‌ಐಸಿಯು ದೇಶಾದ್ಯಂತ ಅತ್ಯಂತ ಬಲಿಷ್ಠ ಏಜೆಂಟರನ್ನು ಹೊಂದಿದೆ. 2021ರ ಮಾರ್ಚ್ ವೇಳೆಗೆ ಕಂಪೆನಿಯಲ್ಲಿ 13.5 ಲಕ್ಷ ಏಜೆಂಟರಿದ್ದರು. 3 ಯಾವುದೇ ಸಾಲವಿಲ್ಲ
ಈಗಿರುವ ಮಾಹಿತಿ ಪ್ರಕಾರ, ಎಲ್‌ಐಸಿ ಯಾವುದೇ ಸಾಲವನ್ನು ಹೊಂದಿಲ್ಲ. ಹೀಗಾಗಿ ಕಂಪೆನಿ ಯಾವುದೇ ಸಾಲದ ಬಾಕಿಯನ್ನು ಉಳಿಸಿಕೊಂಡಿಲ್ಲ. 4 ಅತ್ಯುತ್ತಮ ವಿಮಾ ಸಂಸ್ಥೆ
ಸದ್ಯ ಮಾರುಕಟ್ಟೆಯಲ್ಲಿ 24 ವಿಮಾ ಸಂಸ್ಥೆಗಳಿದ್ದರೂ ಇವುಗಳಿಗೆಲ್ಲ ನಾಯಕನಂತಿರುವುದು ಎಲ್‌ಐಸಿ ಸಂಸ್ಥೆಯೇ. ಆದರೂ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವಲ್ಲಿ ಎಲ್‌ಐಸಿ ಹಿಂದಿದೆ ಎಂದು ಹೇಳಲಾಗಿತ್ತಾದರೂ ಇದು ಸಮಸ್ಯೆಯುಂಟು ಮಾಡಿಲ್ಲ. ಪೇಟಿಎಂ ರೀತಿ ಆಗದಿರಲಿ…
ಮಾರುಕಟ್ಟೆ ಮೌಲ್ಯ ಇಳಿಸಿದ್ದರಿಂದ ಹಿಡಿದು, ಒಟ್ಟಾರೆ ಷೇರುಗಳ ಇಳಿಕೆ ಮತ್ತು ಬಂಡವಾಳ ಬರುವ ನಿರೀಕ್ಷೆಯನ್ನು ಕಡಿತಗೊಳಿಸಿದ್ದರ ಬಗ್ಗೆ ಕೇಂದ್ರ ಸರಕಾರದ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ. ಈ ಹಿಂದೆ ಪೇಟಿಎಂ ಕಂಪೆನಿ ಐಪಿಒ ಬಿಟ್ಟಿದ್ದು, ಸದ್ಯ ನಷ್ಟ ಅನುಭವಿಸುತ್ತಿದೆ. ಮಾರುಕಟ್ಟೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ ಎಂದು ಹೇಳಲಾಗದು. ಹೀಗಾಗಿ ಈಗಿನ ಪರಿಸ್ಥಿತಿ ನೋಡಿಕೊಂಡು ಮತ್ತು ಹೆಚ್ಚಿನ ಬೇಡಿಕೆ ಬರಲಿ ಎಂಬ ಕಾರಣದಿಂದಾಗಿ ಕಡಿಮೆ ಷೇರು ಬಿಡುಗಡೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಎಲ್‌ಐಸಿಯ ಸಮಸ್ಯೆಗಳೇನು?
ಎಲ್‌ಐಸಿ ಕಂಪೆನಿ ಸರಕಾರದ ನಿಯಂತ್ರಣದಲ್ಲಿದೆ ಎಂಬುದೇ ಸದ್ಯಕ್ಕೆ ಪ್ರಮುಖ ಸಮಸ್ಯೆ. ಅಂದರೆ ಸರಕಾರ ನಿಗದಿ ಮಾಡುವ ನಿಯಮ, ಷರತ್ತುಗಳಿಗೆ ಎಲ್‌ಐಸಿ ಬಾಧ್ಯತೆ ಹೊಂದಬೇಕಾಗುತ್ತದೆ. ಇದರಿಂದಾಗಿಯೇ ಈ ಹಿಂದೆ ಹಲವಾರು ನಷ್ಟಕ್ಕೀಡಾದ ಕಂಪನಿಗಳಿಗೆ ಎಲ್‌ಐಸಿ ಕಂಪೆನಿ ಬಂಡವಾಳ ಹೂಡಿಕೆ ಮಾಡಿತ್ತು ಎಂದು ಐಐಎಫ್ಎಲ್ ವರದಿ ಹೇಳಿದೆ. ಜತೆಗೆ ಎಲ್‌ಐಸಿ ಇನ್ನೂ ಹಿಂದಿನ, ಸಂಪ್ರದಾಯಬದ್ಧ ನಿಯಮಗಳಂತೆ ಕೆಲಸ ಮಾಡುತ್ತಿದೆ. ಇದರಿಂದಾಗಿ ದೇಶದಲ್ಲಿ ದೊಡ್ಡ ಜನಸಂಖ್ಯೆ ಹೊಂದಿರುವ ಯುವಕರನ್ನು ಇನ್ನೂ ತನ್ನತ್ತ ಸೆಳೆಯಲು ಆಗಿಲ್ಲ ಎಂಬ ಮಾತುಗಳಿವೆ. ಅಲ್ಲದೆ ಇದುವರೆಗೆ ಶೇ.60ರಷ್ಟು ಮಾರುಕಟ್ಟೆ ಷೇರು ಹೊಂದಿದ್ದ ಎಲ್‌ಐಸಿ ಕಂಪೆನಿ, 2015-16ರ ಹೊತ್ತಿಗೆ ಶೇ.56ರಷ್ಟಕ್ಕೆ ಕುಸಿತಕಂಡಿತ್ತು. ಈಗ ಶೇ.44ರಷ್ಟು ಪಾಲು ಹೊಂದಿದೆ. ಇದಕ್ಕೆ ಬದಲಾಗಿ ಖಾಸಗಿ ವಿಮಾ ಕಂಪೆನಿಗಳು ಈ ಸ್ಥಾನ ಆಕ್ರಮಿಸಿಕೊಳ್ಳುತ್ತಿವೆ. ಪಾಲಿಸಿದಾರರಿಗೆ 60 ರೂ. ಕಡಿಮೆ
ಎಲ್‌ಐಸಿಯಲ್ಲಿ ಪಾಲಿಸಿ ಮಾಡಿಸಿಕೊಂಡಿರುವವರಿಗೆ ಖುಷಿಯ ಸುದ್ದಿ ಇದೆ. ಅಂದರೆ ಇವರಿಗೆ ಈಗ ನಿಗದಿ ಮಾಡಿರುವ ದರಕ್ಕಿಂತ 60 ರೂ.ಗಳಷ್ಟು ಕಡಿಮೆ ದರಕ್ಕೆ ಮಾರಾಟ ಮಾಡಲಾಗುತ್ತದೆ. ಹಾಗೆಯೇ ರಿಟೈಲ್ ಹೂಡಿಕೆದಾರರಿಗೆ 45 ರೂ.ನಷ್ಟು ಕಡಿಮೆಗೆ ಷೇರು ಸಿಗಲಿದೆ. ಮೇ 4ರಿಂದ ಮೇ 9ರ ವರೆಗೆ ಐಪಿಒದಲ್ಲಿ ಭಾಗಿಯಾಗಬಹುದಾಗಿದೆ.