Advertisement

ನೆರೆ ಹಾನಿ ಸೌಲಭ್ಯಕ್ಕೆ ಹಣ ಹೊಂದಾಣಿಕೆ

10:21 AM Feb 26, 2020 | Lakshmi GovindaRaj |

ಹಾವೇರಿ: ಅತಿವೃಷ್ಟಿಯಿಂದ ಹಾನಿಗೊಳಗಾದ ವರಿಗೆ ಸೌಲಭ್ಯ ಕಲ್ಪಿಸಲು ಸರ್ಕಾರದಿಂದ ಹಣ ಹೊಂದಿಸುವ ಕೆಲಸ ಆಗುತ್ತಿದೆ. ಅಭಿವೃದ್ಧಿ ನಿರಂತರ ಪ್ರಕ್ರಿಯೆಯಾಗಿದ್ದು, ಇದಕ್ಕೆ ಸಂಪನ್ಮೂಲ ಕೊರತೆ ಆಗದಂತೆ ಸರ್ಕಾರ ಎಚ್ಚರ ವಹಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

ಹಾನಗಲ್ಲ ತಾಲೂಕಿನ ಬಾಳಂಬೀಡ ಬಳಿ ಸೋಮವಾರ ನಡೆದ ಕೆರೆ ತುಂಬಿಸುವ ಬಾಳಂಬೀಡ ಹಾಗೂ ಹಿರೆಕೌಂಶಿ ಏತ ನೀರಾವರಿ ಯೋಜನೆ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲೆಗಳನ್ನು ಸರಿಸಮನಾಗಿ ಅಭಿವೃದ್ಧಿ ಮಾಡುವುದು ಬಿಜೆಪಿ ಸರ್ಕಾರದ ಗುರಿ. ಇದಕ್ಕಾಗಿ ಸೂಕ್ತ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದರು.

ಕಳೆದ 25-30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸರ್ಕಾರ ಟ್ರಾಕ್ಟರ್‌, ಪಂಪ್‌ಸೆಟ್‌ ಖರೀದಿಸಿದ ರೈತರ ಸಾಲದ ಸಂಪೂರ್ಣ ಸುಸ್ತಿ ಬಡ್ಡಿ ಮನ್ನಾ ಮಾಡಿದೆ. ರೈತರು ಮಾರ್ಚ್‌ ಒಳಗೆ ಅಸಲು ತುಂಬಿ ಸಹಕರಿಸಬೇಕು. ಇದರಿಂದ ಸರ್ಕಾರ ನಡೆಸಲು ಅನುಕೂಲವಾಗುತ್ತದೆ. ಈ ವಿಚಾರದಲ್ಲಿ ರೈತರು ತೃಪ್ತಿ ಮತ್ತು ಸಮಾಧಾನದಿಂದ ಇರಬೇಕು ಎಂದರು.

ಸಚಿವರಾದ ಬಸವರಾಜ ಬೊಮ್ಮಾಯಿ, ಬಿ.ಸಿ. ಪಾಟೀಲ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಸಿ.ಎಂ. ಉದಾಸಿ, ವಿರುಪಾಕ್ಷಪ್ಪ ಬಳ್ಳಾರಿ, ನೆಹರು ಓಲೇಕಾರ, ವಿ.ಪ. ಸದಸ್ಯರಾದ ಬಸವರಾಜ ಹೊರಟ್ಟಿ, ಎಸ್‌.ವಿ. ಸಂಕನೂರ ಇತರರಿದ್ದರು.

ಟ್ರಂಪ್‌ಗೆ ಏರ್ಪಡಿಸಿರುವ ಔತಣಕೂಟದಲ್ಲಿ ಬಿಎಸ್‌ವೈ ಭಾಗಿ
ಬೆಂಗಳೂರು: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದಂಪತಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಮಂಗಳವಾರ ರಾತ್ರಿ ಹಮ್ಮಿಕೊಂಡಿರುವ ಔತಣ ಕೂಟದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪಾಲ್ಗೊಳ್ಳಲಿದ್ದಾರೆ.

Advertisement

ಭಾರತ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಪತ್ನಿ ಮೆಲಾನಿಯಾ ಟ್ರಂಪ್‌ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ರಾತ್ರಿ ಔತಣ ಏರ್ಪಡಿಸಿದ್ದಾರೆ. ಈ ಔತಣ ಕೂಟದಲ್ಲಿ ಪಾಲ್ಗೊಳ್ಳಲು ಯಡಿಯೂರಪ್ಪ ಅವರಿಗೂ ಆಹ್ವಾನ ಬಂದಿತ್ತು.

ಅದರಂತೆ ಯಡಿಯೂರಪ್ಪ ಅವರು ಮಂಗಳವಾರ ಬೆಳಗ್ಗೆ 11.45ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸುವರು. ರಾತ್ರಿ 8 ಗಂಟೆಗೆ ಔತಣ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಬುಧವಾರ ಬೆಳಗ್ಗೆ 6.20ಕ್ಕೆ ದೆಹಲಿಯಿಂದ ಹೊರಟು ಬೆಂಗಳೂರಿಗೆ ಹಿಂತಿರುಗಲಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಎಷ್ಟು ಮುಖ್ಯವೋ ಹಾಗೆಯೇ ಉದ್ಯಮಗಳ ಅಭಿವೃದ್ಧಿಯೂ ಮುಖ್ಯ. ದಾವೋಸ್‌ಗೆ ಹೋಗಿ ಬಂದ ಬಳಿಕ ಹುಬ್ಬಳ್ಳಿಯಲ್ಲಿ ಬಂಡವಾಳ ಹೂಡಿಕೆ ಸಮಾವೇಶ ನಡೆಸಿದ ಪರಿಣಾಮ ಸಾಕಷ್ಟು ಉದ್ಯಮಿಗಳು ಬಂಡವಾಳ ಹೂಡಿಕೆಗೆ ಮುಂದೆ ಬಂದಿದ್ದಾರೆ.
-ಬಿ.ಎಸ್‌.ಯಡಿಯೂರಪ್ಪ, ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next