ಮಹಾನಗರ: ಮಹಿಳೆಯರಿಗೆ ಉದ್ಯಮ ಕ್ಷೇತ್ರದಲ್ಲಿ ಬೆಳೆಯಲು ಸಾಕಷ್ಟು ಅವಕಾಶಗಳಿದ್ದು, ಛಲ ಹಾಗೂ ನಿರಂತರ ಶ್ರಮದಿಂದ ಗೆಲುವು ಪಡೆಯಲು ಸಾಧ್ಯ. ಪ್ರಸ್ತುತ ವಿತ್ತೀಯ ಯೋಜನೆಗಳು ಕೂಡ ಈ ನಿಟ್ಟಿನಲ್ಲಿ ಪೂರಕವಾಗಿರುತ್ತಔಏ ಎಂದು ಕಾರ್ಪೊರೇಷನ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಿಇಒ ಪಿ.ವಿ. ಭಾರತಿ ಹೇಳಿದರು.
ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೇತೃತ್ವದಲ್ಲಿ ಬುಧವಾರ ‘ಉದ್ಯಮಶೀಲ ಮಹಿಳೆಯರಿಗಾಗಿ ವಿತ್ತೀಯ ಯೋಜನೆ ಹಾಗೂ ಅವಕಾಶ’ ಎಂಬ ವಿಷಯದಲ್ಲಿ ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯಮಶೀಲ ಮಹಿಳೆಯರಿಗಾಗಿ ವಿತ್ತೀಯ ಯೋಜನೆಗಳು ಹಲವು ಇವೆ. ಸರಕಾರ ಹಾಗೂ ಖಾಸಗಿ ನೆಲೆಯಲ್ಲಿ ಇದಕ್ಕೆ ಪೂರಕ ಸ್ಪಂದನೆ ಕೂಡ ದೊರೆಯುತ್ತದೆ. ಹೀಗಾಗಿ ಮಹಿಳೆಯರು ಧೈರ್ಯದಿಂದ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಮನಸ್ಸು ಮಾಡಬೇಕು. ಅದರಲ್ಲಿಯೂ ಉದ್ಯಮ ಕ್ಷೇತ್ರದಲ್ಲಿ ಬೇಕಾಗುವಂತಹ ಪೂರಕ ಮಾಹಿತಿಗಳನ್ನು ಪಡೆದುಕೊಂಡು ಖ್ಯಾತ ಸಾಧಕಿಯಾಗಲು ಸಾಧ್ಯ. ದೇಶದ ಚರಿತ್ರೆಯನ್ನು ಗಮನಿಸಿದಾಗ ಹಲವಾರು ಮಹಿಳಾ ಸಾಧಕರು ದೇಶ- ವಿದೇಶದಲ್ಲಿ ಗಮನೀಯ ಸೇವೆ ಸಲ್ಲಿಸುವ ಮೂಲಕ ಮಾದರಿಯಾಗಿದ್ದಾರೆ. ಅವರ ಆದರ್ಶ ಜೀವನದ ಪಾಠ ನಮಗೆ ದಾರಿದೀಪವಾಗಬೇಕು ಎಂದರು.
ಮಹಿಳೆಯರಿಗೆ ಪೂರಕವಾಗುವ ನೆಲೆಯಲ್ಲಿ ಕಾರ್ಪೊರೇಷನ್ ಬ್ಯಾಂಕ್ ಕೂಡ ವಿವಿಧ ಸ್ಕೀಂ ಮೂಲಕ ಯೋಜನೆಗಳನ್ನು ಜಾರಿಗೊಳಿಸಿದೆ ಎಂದವರು ಹೇಳಿದರು.
ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಪಿ.ಬಿ. ಅಬ್ದುಲ್ ಹಮೀದ್ ಸ್ವಾಗತಿಸಿದರು. ಕೆಸಿಸಿಐ ಉಪಾ ಧ್ಯಕ್ಷ ಐಸಾಕ್ ವಾಝ್ ಅತಿಥಿಗಳನ್ನು ಪರಿಚಯಿಸಿದರು. ಪ್ರಶಾಂತ್ ಸಿ.ಜಿ ವಂದಿಸಿದರು. ಆತ್ಮಿಕಾ ಅಮೀನ್ ಮುಂತಾದವರು ಉಪಸ್ಥಿತರಿದ್ದರು.
ಬಳಿಕ ವಿವಿಧ ವಿಚಾರಗಳಿಗೆ ಸಂಬಂಧಿಸಿ ತಜ್ಞ ಅತಿಥಿಗಳಿಂದ ಕಾರ್ಯಾಗಾರ ನಡೆಯಿತು. ಸರಕಾರದಿಂದ ಸಿಗುವ ಸವಲತ್ತು ಹಾಗೂ ಪ್ರಸ್ತುತ ಲಭ್ಯವಾಗುವ ಅವಕಾಶಗಳ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಲಾಯಿತು.