ಕಾರವಾರ: ಹಿರಿಯ ಸಾಹಿತಿ, ಯಕ್ಷಗಾನ ತಜ್ಞೆ ಡಾ| ವಿಜಯನಳಿನಿ ರಮೇಶ್ 2019ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಸಮಿತಿ ಗುರುತಿಸಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ 15,000ರೂ, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ, ಸನ್ಮಾನವನ್ನೊಳಗೊಂಡಿರುತ್ತದೆ.
ಯುವ ಕೃತಿ ಪುರಸ್ಕಾರ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡುವುದರೊಟ್ಟಿಗೆ ನಾಲ್ವರು ಉದಯೋನ್ಮುಖ ಬರಹಗಾರರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಜಿಲ್ಲಾ ರಾಜ್ಯೋತ್ಸವ ಯುವ ಕೃತಿ ಪುರಸ್ಕಾರ ನೀಡುತ್ತಿದೆ. ಈ ಪುರಸ್ಕಾರಕ್ಕೆ ಯಲ್ಲಾಪುರದ ಗುರುಗಣೇಶ ಭಟ್ಟ ಗುಡ್ಬಳ್ಳಿ, ಭಟ್ಕಳದ ರೇಷ್ಮಾ ಉಮೇಶ್, ಕುಮಟಾದ ಮೋಹನ ಗೌಡ ಹೆಗ್ರೆ, ಹಳಿಯಾಳದ ಗಣಪತಿ ನಾಯ್ಕ ಆಯ್ಕೆ ಆಗಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಯುವ ಕೃತಿ ಪುರಸ್ಕಾರವು ಫಲಕ, ಪುಸ್ತಕವನ್ನೊಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ನ.10 ರಂದು ಕುಮಟಾದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಕರ್ಕಿಕೋಡಿ ಮಾಹಿತಿ ನೀಡಿದ್ದಾರೆ.
2016 ರಿಂದ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರತಿ ವರ್ಷ ಹಿರಿಯ ಸಾಹಿತಿಯೊಬ್ಬರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮತ್ತು ನಾಲ್ವರು ಉದಯೋನ್ಮುಖ ಬರಹಗಾರರಿಗೆ ಜಿಲ್ಲಾ ರಾಜ್ಯೋತ್ಸವ ಯುವ ಕೃತಿ ಪುರಸ್ಕಾರ ನೀಡುತ್ತ ಬಂದಿದೆ. ಇಲ್ಲಿಯವರೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಿರಿಯ ಸಾಹಿತಿಗಳಾದ ಸುಮುಖಾನಂದ ಜಲವಳ್ಳಿ, ಆರ್.ಪಿ. ಹೆಗಡೆ ಸೂಳಗಾರ, ಶಾಂತಾರಾಮ ನಾಯಕ ಹಿಚ್ಕಡ ಅವರಿಗೆ ಬಂದಿದ್ದವು.