Advertisement
ಹಾಗೆ ಹೇಳುವುದಾದರೆ, ಇದು ಕಾಣೆಯಾದವನ ಸತ್ಯಕಥೆ. ಅದು “ಮಿಸ್ಸಿಂಗ್ ಬಾಯ್’ ಚಿತ್ರವಾಗಿದೆ. ಕನ್ನಡದಲ್ಲಿ ಅನೇಕ ನೈಜ ಘಟನೆ ಚಿತ್ರಗಳು ಬಂದಿವೆ. ಆ ಸಾಲಿಗೆ ಇದು ಒಂದಾದರೂ, ಇಲ್ಲಿ ಆಳವಾದ ನೋವಿದೆ, ಮಾನವೀಯ ಸ್ಪರ್ಶವಿದೆ. ವಿದೇಶದಿಂದ ಸ್ವದೇಶಕ್ಕೆ ಅಪ್ಪ-ಅಮ್ಮನ ಹುಡುಕಿ ಬಂದವನ ಕಥೆ ಮತ್ತು ವ್ಯಥೆ ತುಂಬಿದೆ. ಇದೆಲ್ಲವನ್ನೂ ಅಷ್ಟೇ ಅಚ್ಚುಕಟ್ಟಾಗಿ ಕಣ್ಣುಗಳು ಒದ್ದೆಯಾಗುವಂತೆ ಕಟ್ಟಿಕೊಟ್ಟಿರುವ ಪ್ರಯತ್ನವೂ ಸಾರ್ಥಕವಾಗಿದೆ.
Related Articles
Advertisement
ಒಂದು ಚಿತ್ರ ನೋಡುಗರ ಮನಸ್ಸು ತಟ್ಟಲು ಕಾರಣ ಕಥೆ ಮತ್ತು ಚಿತ್ರಕಥೆ, ಜೊತೆಗೆ ಅದಕ್ಕೆ ಪೂರಕವಾದ ಮಾತುಗಳು, ತೆರೆ ಮೇಲಿನ ಪಾತ್ರಗಳು. ಅವೆಲ್ಲವೂ ಇಲ್ಲಿ ವಕೌìಟ್ ಆಗಿವೆ. ಮುಖ್ಯವಾಗಿ ಇಂತಹ ಚಿತ್ರಗಳಿಗೆ ಹಿನ್ನೆಲೆ ಸಂಗೀತ ಪ್ರಮುಖ ಪಾತ್ರವಹಿಸಬೇಕು. ಅದಿಲ್ಲಿ ಸಾಂಗೋಪವಾಗಿ ನಡೆದಿದೆ. ಮೊದಲರ್ಧದ ಇಪ್ಪತ್ತು ನಿಮಿಷ ಮಾತ್ರ, ಚಿತ್ರದ ವೇಗ ನಿಧಾನ. ಯಾವಾಗ ಅವನು ಹೆತ್ತವರ ಹುಡುಕಾಟಕ್ಕೆ ಹೊರಡುತ್ತಾನೋ, ಅಲ್ಲಿಂದ ಕೊನೆಯವರೆಗೂ ಮಿಂಚಿನ ಓಟ.
ಅವನ ಹುಡುಕಾಟ ಶುರುವಾಗಿದ್ದೇ ತಡ, ಚಿತ್ರ ಮುಗಿದದ್ದೂ ಗೊತ್ತಾಗಲ್ಲ. ಹಾಗೆಯೇ, ಕಣ್ಣುಗಳು ಒದ್ದೆಯಾಗುವುದೂ ಗೊತ್ತಾಗಲ್ಲ. ಅಷ್ಟೊಂದು ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. “ಮಿಸ್ಸಿಂಗ್ ಬಾಯ್’ ಬಗ್ಗೆ ಹೇಳುವುದಾದರೆ, 27 ವರ್ಷದ ಹಿಂದೆ ನಡೆದ ಘಟನೆಯನ್ನು ಒಬ್ಬ ಪೊಲೀಸ್ ಅಧಿಕಾರಿಯೊಬ್ಬ ಹೇಗೆ ಪತ್ತೆ ಹಚ್ಚುತ್ತಾನೆ ಎಂಬ ಥ್ರಿಲ್ಲರ್ ಅಂಶದೊಂದಿಗೆ ಕಥೆ ಸಾಗಲಿದೆ. ಸುಮಾರು ಐದು ವರ್ಷದ ಹುಡುಗನೊಬ್ಬ, ಆಟವಾಡುತ್ತಲೇ ರೈಲಿನಲ್ಲಿ ಪಯಣ ಬೆಳೆಸಿ ಕಾಣೆಯಾಗುತ್ತಾನೆ.
ಹಾಗೆ ಕಾಣೆಯಾದವನು ದೂರದ ಸ್ವೀಡನ್ ದೇಶದ ಸಾಕು ಅಪ್ಪ,ಅಮ್ಮನನ್ನು ಸೇರಿಕೊಳ್ಳುತ್ತಾನೆ. ಇಪ್ಪತ್ತೇಳು ವರ್ಷದ ಬಳಿಕ ಸುಮಾರು 35 ವರ್ಷ ವಯಸ್ಸಿನವನಾದ ಆ ಯುವಕ ಸ್ವೀಡನ್‌ನಿಂದ ತನ್ನ ಸ್ವಂತ ಅಪ್ಪ-ಅಮ್ಮನನ್ನು ಹುಡುಕಿ ಕೊಡಿ ಎಂದು ಪೊಲೀಸ್ ಠಾಣೆಯ ಮೊರೆ ಹೋಗುತ್ತಾನೆ. ಕಳೆದು ಹೋಗಿದ್ದ ಹುಡುಗ ಪುನಃ ವಿದೇಶದಿಂದ ಸ್ವದೇಶಕ್ಕೆ ಬಂದು ಅಪ್ಪ-ಅಮ್ಮ ಬೇಕು ಅಂದಾಗ, ಪೊಲೀಸರು ಹೇಗೆಲ್ಲಾ ಅವನ ಹೆತ್ತವರನ್ನು ಹುಡುಕುತ್ತಾರೆ.
ಎಷ್ಟೆಲ್ಲಾ ಸಮಸ್ಯೆ ಎದುರಿಸುತ್ತಾರೆ, ಕೊನೆಗೆ ಅವನ ಹೆತ್ತವರು ಸಿಗುತ್ತಾರಾ ಇಲ್ಲವಾ ಎಂಬುದೇ ಸಾರಾಂಶ. “ಮಿಸ್ಸಿಂಗ್ ಬಾಯ್’ ಆಗಿ ಕಾಣಿಸಿಕೊಂಡಿರುವ ಗುರುನಂದನ್, ಎಲ್ಲರನ್ನೂ ಭಾವುಕರನ್ನಾಗಿಸುತ್ತಾರೆ. ಹೆತ್ತವರನ್ನು ಹುಡುಕಿಕೊಡಲು ಹೊರಡುವ ರಂಗಾಯಣ ರಘು ಸಹ ಅಷ್ಟೇ ವಿಶೇಷ ಎನಿಸುತ್ತಾರೆ. ರವಿಶಂಕರ್‌ಗೌಡ ಅವರ ಪಾತ್ರಕ್ಕೂ ಇಲ್ಲಿ ತೂಕವಿದೆ. ಉಳಿದಂತೆ ನಾಯಕಿ ಅರ್ಚನಾ ತಕ್ಕಮಟ್ಟಿಗೆ ಗಮನಸೆಳೆಯುತ್ತಾರೆ. ಜೈಜಗದೀಶ್, ವಿಜಯಲಕ್ಷ್ಮೀ ಸಿಂಗ್ ಸಾಕು ಅಪ್ಪ,ಅಮ್ಮನಾಗಿ ತೆರೆಮೇಲೆ ಇರುವಷ್ಟು ಸಮಯ ಇಷ್ಟವಾಗುತ್ತಾರೆ.
ಕ್ಲೈಮ್ಯಾಕ್ಸ್‌ನ ಒಂದೇ ರೀಲ್ ಕಾಣಿಸಿಕೊಂಡರೂ ರಂಗಭೂಮಿ ಕಲಾವಿದೆ ಭಾಗಿರಥಿ ಬಾಯಿ ಅವರ ಇಡೀ ದೃಶ್ಯವನ್ನು ಆವರಿಸಿಕೊಂಡಿದ್ದಾರೆ. ಮಗನ ಕಳೆದುಕೊಂಡ ತಾಯಿಯ ಸಂಕಟ, ನೋವು, ಹೇಗಿರುತ್ತೆ ಎಂಬುದನ್ನು ಪಾತ್ರ ಮೂಲಕ ಸಾಕ್ಷೀಕರಿಸಿದ್ದಾರೆ. ಉಳಿದಂತೆ ಬರುವ ಪಾತ್ರಗಳೆಲ್ಲವೂ ದೃಶ್ಯಕ್ಕೆ ಪೂರಕ. ಹರಿಕೃಷ್ಣ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರದ ವೇಗಕ್ಕೆ ಹೆಗಲುಕೊಟ್ಟಿದೆ. ಜೆ.ಎಸ್.ವಾಲಿ ಅವರ ಛಾಯಾಗ್ರಹಣದಲ್ಲಿ ಯಾವುದೂ “ಮಿಸ್’ ಆಗಿಲ್ಲ.
ಚಿತ್ರ: ಮಿಸ್ಸಿಂಗ್ ಬಾಯ್ನಿರ್ಮಾಣ: ಕೊಲ್ಲ ಪ್ರವೀಣ್, ಕೊಲ್ಲ ಮಹೇಶ್, ಆರ್.ಕೆ.ಹೇಮಂತ್‌ಕುಮಾರ್
ನಿರ್ದೇಶನ: ರಘುರಾಮ್
ತಾರಾಗಣ: ಗುರುನಂದನ್, ಅರ್ಚನಾ ಜಯಕೃಷ್ಣ, ರಂಗಾಯಣ ರಘು, ರವಿಶಂಕರ್‌ಗೌಡ, ಜೈ ಜಗದೀಶ್, ವಿಜಯಲಕ್ಷ್ಮೀ ಸಿಂಗ್, ಭಾಗಿರಥಿ ಬಾಯಿ, ಮಾ.ಅಭಿಜಯ್ ಇತರರು. * ವಿಜಯ್ ಭರಮಸಾಗರ