Advertisement

ಅಮ್ಮನ ಕೈರುಚಿ

06:00 AM May 23, 2018 | |

ಅಮ್ಮನ ಕೈರುಚಿ ಸವಿಯುತ್ತಾ, ಮೈಮರೆಯುವ ಖುಷಿಯೇ ಒಂದು ರೋಮಾಂಚನ. ಕಾಲ ಸರಿದು ಹೋದಷ್ಟು ಆ ಕ್ಲಾಸಿಕ್‌ ರುಚಿಗೆ  ಆಕರ್ಷಣೆ ಹೆಚ್ಚು. ಅಮ್ಮಂದಿರ ದಿನದ ಈ ವೇಳೆ, ಅವಳ ಕೈ ರುಚಿಯನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ… 

Advertisement

1. ಅಮ್ಮ ಹೇಳಿದ ಚಿಕನ್‌ ಸುಕ್ಕಾ
ನನ್ನಮ್ಮನಿಗೆ ಅಡುಗೆ ಮಾಡೋದ್ರಲ್ಲಿ ತುಂಬಾ ಶ್ರದ್ಧೆ, ಆಸಕ್ತಿ. ಮನೆಗೆ ಎಷ್ಟೇ ಜನ ಬರಲಿ ಚುರುಕಾಗಿ, ರುಚಿಯಾಗಿ ಅಡುಗೆ ಮಾಡಿ ಬಡಿಸುತ್ತಾರೆ. ಚಿಕನ್‌ ಸುಕ್ಕಾ ಮಾಡೋದ್ರಲ್ಲಿ ಅಮ್ಮ ಇಡೀ ಕುಟುಂಬದಲ್ಲೇ ಬಹಳ ಫೇಮಸ್‌. ಮನೆಗೆ ಬಂದ ನೆಂಟರಿಷ್ಟರೆಲ್ಲ ಅದನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ. ಅಮ್ಮನ ಕೈ ಅಡುಗೆಗೆ ಅಷ್ಟು ರುಚಿ ಬರುವುದಕ್ಕೆ ಇನ್ನೊಂದು ಕಾರಣ ಅಂದ್ರೆ, ಈಗಲೂ ಚಿಕನ್‌ ಅಡುಗೆಯನ್ನು ಸೌದೆ ಒಲೆಯಲ್ಲೇ ಮಾಡುತ್ತಾರೆ. ಜೊತೆಗೆ ಮಸಾಲೆಯನ್ನು ಕೈಯಲ್ಲೇ ರುಬ್ಬಿಕೊಳ್ಳುತ್ತಾರೆ. ಅದು ಅಡುಗೆಗೆ ವಿಶಿಷ್ಟ ಪರಿಮಳ, ರುಚಿ ತಂದುಕೊಡುತ್ತೆ. ಅಮ್ಮನಷ್ಟು ಚೆನ್ನಾಗಲ್ಲದಿದ್ದರೂ, ತಕ್ಕಮಟ್ಟಿಗೆ ನಾನೂ ಅಡುಗೆ ಕಲಿತಿದ್ದೇನೆ. ಅಮ್ಮ ಹೇಳಿಕೊಟ್ಟ ಚಿಕನ್‌ ಸುಕ್ಕಾ ರೆಸಿಪಿ ಇಲ್ಲಿದೆ.

ಬೇಕಾಗುವ ಸಾಮಗ್ರಿ: 1/2 ಕೆಜಿ ಚಿಕನ್‌, 1/4 ಕೆಜಿ ಈರುಳ್ಳಿ, 10ರಿಂದ 15 ಕೆಂಪು ಮೆಣಸು, ಕೊತ್ತಂಬರಿ ಬೀಜ, ಬೆಳ್ಳುಳ್ಳಿ, ಸಾಸಿವೆ, ಎಣ್ಣೆ, ಉಪ್ಪು, ಕಾಳುಮೆಣಸು, ಅರಿಶಿನ ಪುಡಿ, ತೆಂಗಿನ ತುರಿ. 

ಮಾಡುವ ವಿಧಾನ:  ಕೆಂಪು ಮೆಣಸು, ಕೊತ್ತಂಬರಿ, ಕಾಳುಮೆಣಸು, ಬೆಳ್ಳುಳ್ಳಿ, ಸಾಸಿವೆಯನ್ನು ನೀರು ಹಾಕಿ ಹದವಾಗಿ ರುಬ್ಬಿಕೊಳ್ಳಿ. ಕತ್ತರಿಸಿದ ಈರುಳ್ಳಿಯನ್ನು ಎಣ್ಣೆಯಲ್ಲಿ ಕೆಂಪಗಾಗುವವರೆಗೆ ಹುರಿದು, ಅದಕ್ಕೆ ಚಿಕನ್‌ ಹಾಗೂ ಅರಿಶಿನಪುಡಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ನಂತರ ರುಬ್ಬಿದ ಮಸಾಲೆಯನ್ನು ಅದಕ್ಕೆ ಬೆರೆಸಿ ಚಿಕನ್‌ ಬೇಯುವವರೆಗೆ ಕುದಿಸಿ. ಇದು ತಯಾರಾದ ನಂತರ ಮತ್ತೂಂದು ಬಾಣಲೆಗೆ ಈರುಳ್ಳಿ ಹಾಕಿ ಫ್ರೈ ಮಾಡಿ, ಮೇಲೆ ತಯಾರಿಸಿದ ಗಸಿಯಿಂದ ಚಿಕನ್‌ ತುಂಡುಗಳನ್ನು ತೆಗೆದು ಈರುಳ್ಳಿ ಜೊತೆಗೆ ಹಾಕಿ ಕಲಸಿ. ಅದರ ಮೇಲೆ ತೆಂಗಿನ ತುರಿ ಹಾಕಿದರೆ ಚಿಕನ್‌ ಸುಕ್ಕಾ ರೆಡಿ. 

ಲಿಶಾ ಗಂಗಾಧರ್‌, ಸಕಲೇಶಪುರ

Advertisement

2. ಅವಳ ಕೈ “ಕಡುಬು’
ಅಡುಗೆ ಒಂದು ಕಲೆ, ಅಡುಗೆಯಲ್ಲಿ ಬಳಸೋ ಸಾಮಗ್ರಿಗಳ ಜೊತೆ, ಅಕ್ಕರೆ, ಪ್ರೀತಿ ಬೆರೆಸಿ ಮಾಡಿದರೆ ಅದರಲ್ಲಿ ರುಚಿ ಜಾಸ್ತಿ ಎನ್ನುತ್ತಿದ್ದಳು ಅಮ್ಮ. ಮನೆಯಲ್ಲೇ ಮಾಡಿರೋ ಘಮ-ಘಮಿಸೋ ಮರಳು ಮರಳು ತುಪ್ಪದ ಜೊತೆ, ಹದವಾದ ಸಿಹಿಯೊಂದಿಗೆ ಬೆರೆತ ಸೌತೇಕಾಯಿ ಕಡುಬು ನನ್ನ ಫೇವರಿಟ್‌! ಅಪರೂಪಕ್ಕ ಅದನ್ನು ತಯಾರಿಸಿ ಮಗಳಿಗೆ ತಿನ್ನಿಸುತ್ತೇನೆ. ನನ್ನಮ್ಮನಷ್ಟು ರುಚಿಕರವಾಗಿರದಿದ್ದರೂ ನನ್ನ ಮಗಳು ಚಪ್ಪರಿಸಿ ತಿಂದು “ಚೆನ್ನಾಗಿದೆ ಅಮ್ಮಾ…’ ಎಂದಾಗ ಏನೋ ಸಂತೋಷ. ನನ್ನ ಅಮ್ಮ ಮಾಡುತ್ತಿದ್ದ ಆ ಕಡುಬಿನ ಗುಟ್ಟನ್ನು ಹೇಳುತ್ತೇನೆ ಕೇಳಿ…

ಬೇಕಾಗುವ ಸಾಮಗ್ರಿ:
ಸಾಂಬಾರ ಸೌತೇಕಾಯಿ ತುರಿದಿದ್ದು- 4 ಕಪ್‌, ಅಕ್ಕಿ ತರಿ- 2 ಕಪ್‌, ಬೆಲ್ಲ ರುಚಿಗೆ (ಸುಮಾರು ಒಂದೂವರೆ ಕಪ್‌ ಹಿಡಿಸುತ್ತದೆ), ಚಿಟಿಕೆ ಉಪ್ಪು, ಏಲಕ್ಕಿ ಪುಡಿ

ಮಾಡುವ ವಿಧಾನ:
ಮೊದಲಿಗೆ ದೋಸೆ ಅಕ್ಕಿಯನ್ನು ತೊಳೆದು ಸುಮಾರು 2 ತಾಸು ನೆನಸಿಡಿ. ನಂತರ ನೀರು ಸೋಸಿ ಬಟ್ಟೆಯಲ್ಲಿ ಹರಡಿಟ್ಟು, ಆರಿದ ನಂತರ, ಸ್ವಲ್ಪ ಹುರಿದು ಮಿಕ್ಸಿಯಲ್ಲಿ ತರಿ ಮಾಡಿಕೊಳ್ಳಿ. ಸೌತೇಕಾಯಿಯನ್ನು ತುರಿದಿಟ್ಟುಕೊಂಡು, ಅದಕ್ಕೆ ಅಕ್ಕಿ ತರಿ ಬೆರೆಸಿ, ಜೊತೆಯಲ್ಲಿ ಬೆಲ್ಲ, ಚಿಟಿಕೆ ಉಪ್ಪು, ಏಲಕ್ಕಿಪುಡಿ ಎಲ್ಲವನ್ನೂ ಹಾಕಿ ಒಲೆಯ ಮೇಲಿಡಿ. ಸ್ವಲ್ಪ ಬಣ್ಣ ಬಾಡುವವರೆಗೆ, ಸ್ವಲ್ಪ ಗಟ್ಟಿಯಾಗುವವರೆಗೆ ಕಾಯಿಸಿ. ಅದನ್ನು, ತುಪ್ಪ ಸವರಿದ ಪಾತ್ರೆ, ಅಥವಾ ಇಡ್ಲಿ ಕುಕ್ಕರಿನಲ್ಲಿ ಸುಮಾರು 20 ನಿಮಿಷ ಬೇಯಿಸಿ. ಇದನ್ನು ಮರಳು ಮರುಳಾದ ತುಪ್ಪದ ಜೊತೆ ತಿನ್ನಲು ತುಂಬಾ ಚೆನ್ನಾಗಿರುತ್ತದೆ.

ಸಂಗೀತಾ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next