Advertisement

ಅಮ್ಮಂದಿರ “ಚಿನ್ನದ’ದಾರಿ ಹಿಡಿದ ಪುತ್ರಿಯರು

06:00 AM Nov 10, 2018 | |

ಬೆಂಗಳೂರು: ಭಾರತದಲ್ಲಿ ಕ್ರಿಕೆಟ್‌ ಬಿಟ್ಟರೆ ಉಳಿದ ಕ್ರೀಡೆಗಳಲ್ಲಿ ಬಡತನವೇ ಜಾಸ್ತಿ. ಅದರಲ್ಲೂ ಅಥ್ಲೆಟಿಕ್ಸ್‌ನಲ್ಲಂತೂ ಕಡುಬಡುತನ. ಇತ್ತೀಚೆಗಷ್ಟೇ ಒಲಿಂಪಿಕ್ಸ್‌ ಪದಕ ಗೆಲ್ಲಬಲ್ಲ ಕೆಲವು ಸ್ಪರ್ಧಿಗಳಿಗೆ ಕೇಂದ್ರ ಸರ್ಕಾರ ದೊಡ್ಡ ಪ್ರಮಾಣದಲ್ಲಿ ನೆರವಾಗುತ್ತಿದೆ ಎನ್ನುವುದನ್ನು ಹೊರತುಪಡಿಸಿದರೆ ಉಳಿದವರ ಪರಿಸ್ಥಿತಿ ಕಷ್ಟ. ಪರಿಸ್ಥಿತಿ ಹೀಗಿರುವಾಗ ಅಥ್ಲೀಟ್‌ಗಳು ತಮ್ಮ ಮಕ್ಕಳೂ ಅಥ್ಲೆಟಿಕ್ಸ್‌ನಲ್ಲಿ ಜೀವನ ರೂಪಿಸಿಕೊಳ್ಳಲಿ ಎಂದು ಬಯಸುವುದು ಕಡಿಮೆ. ಇಂತಹ ಸಮಸ್ಯೆಗಳ ನಡುವೆಯೇ ಕರ್ನಾಟಕದ ಒಲಿಂಪಿಕ್ಸ್‌ ತಾರೆ ಸಹನಾ ಮತ್ತು ಅಥ್ಲೀಟ್‌ ಪ್ರಮೀಳಾ ಅಯ್ಯಪ್ಪ ತಮ್ಮ ಪುತ್ರಿಯರನ್ನು ಅಥ್ಲೆಟಿಕ್ಸ್‌ ಕಣಕ್ಕೆ ಇಳಿಸಿದ್ದಾರೆ. ಮಾತ್ರವಲ್ಲ ಆರಂಭಿಕ ಹಂತದಲ್ಲೇ ಅದರಲ್ಲಿ ಯಶಸ್ಸನ್ನೂ ಕಂಡಿದ್ದಾರೆ.

Advertisement

ಸಹನಾ ಕುಮಾರಿ ಹೈಜಂಪ್‌ ತಾರೆ. ಆ ಕ್ರೀಡೆಯಲ್ಲಿ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಮತ್ತೂಬ್ಬರು ಪ್ರಮೀಳಾ ಅಯ್ಯಪ್ಪ. ಹೆಪಾrಥ್ಲಾನ್‌ ಸ್ಪರ್ಧಿ. ಇಬ್ಬರೂ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಹೆಜ್ಜೆಯನ್ನಿರಿಸಿ ಕರುನಾಡಿನ ಜನತೆಯ ಹೃದಯ ಗೆದ್ದ ಕ್ರೀಡಾಪಟುಗಳು. ಸಹನಾ-ನಾಗರಾಜ್‌ ಪುತ್ರಿ ಪಾವನಾ, ಪ್ರಮೀಳಾ-ಬಿ.ಪಿ.ಅಯ್ಯಪ್ಪ ಪುತ್ರಿ ಉನ್ನತಿ ಇತ್ತೀಚೆಗೆ ತಾವು ಭಾಗವಹಿಸಿದ ಮೊದಲ ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ತಮ್ಮ ತಾಯಂದಿರ ಹೆಸರನ್ನು ಬೆಳೆಸುವ ಸ್ಪಷ್ಟ ಸೂಚನೆ ನೀಡಿದ್ದಾರೆ.

ಪಾವನಾ ಅಮ್ಮನಂತೆ ಹೈಜಂಪನ್ನೇ ಆಯ್ದುಕೊಂಡು ಕಿರಿಯರ ಕೂಟದಲ್ಲಿ 1.63 ಮೀ. ಹಾರಿ ಕೂಟ ದಾಖಲೆ ನಿರ್ಮಿಸಿದ್ದಾರೆ. ಉನ್ನತಿ ಸ್ವಲ್ಪ ದಾರಿ ಬದಲಿಸಿ ಲಾಂಗ್‌ ಜಂಪ್‌ (5.40ಮೀ.) ಆಯ್ದುಕೊಂಡಿದ್ದಾರೆ. ಈ ಸಂತಸವನ್ನು ಇಬ್ಬರೂ ಅಮ್ಮಂದಿರು ಹಂಚಿಕೊಂಡಿದ್ದಾರೆ.  ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

ಮಗಳಾದರೂ ಒಲಿಂಪಿಕ್ಸ್‌ ಪದಕ ಗೆಲ್ಲಲಿ: ಸಹನಾ
ಪಾವನಾ ಚಿಕ್ಕ ವಯಸ್ಸಿನಿಂದಲೂ ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾಳೆ. ಆಕೆಯ ಇಷ್ಟದಂತೆ ಹೈಜಂಪ್‌ನಲ್ಲಿ ಮುಂದುವರಿಯಲು ಬಿಟ್ಟಿದ್ದೇವೆ. ನನಗೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕು ಎನ್ನುವ ಕನಸಿತ್ತು. ಆದರೆ ಅದು ಈಡೇರಲಿಲ್ಲ. ಈಗ ನನ್ನ ಮಗಳು ಒಲಿಂಪಿಕ್ಸ್‌ ಹೈಜಂಪ್‌ನಲ್ಲಿ ಚಿನ್ನದ ಪದಕ ಗೆಲ್ಲಲಿ ಎನ್ನುವ ಕನಸು ಹೊತ್ತಿದ್ದೇನೆ. ಅವಳು ಅದರಲ್ಲಿ ಯಶಸ್ವಿಯಾಗುತ್ತಾಳೆ ಎನ್ನುವ ವಿಶ್ವಾಸವಿದೆ ಎಂದು ಸಹನಾ ತಿಳಿಸಿದ್ದಾರೆ.

ಬಲವಂತ ಹೇರಿಲ್ಲ:  ಕ್ರೀಡೆಯನ್ನೇ ಆಯ್ದುಕೊ ಎಂದು ಒಂದು ದಿನವೂ ನಾನು ಒತ್ತಾಯಿಸಿಲ್ಲ. ಅವಳಾಗಿಯೇ ಅಥ್ಲೆಟಿಕ್ಸ್‌ನತ್ತ ಆಸಕ್ತಿ ಹೊಂದಿದ್ದಾಳೆ. ಮೊದಲು ಬ್ಯಾಡ್ಮಿಂಟನ್‌ ಕಲಿಯಲು ಬಿಟ್ಟಿದ್ದೆವು. ಅವಳು ಅದರಲ್ಲಿ ಅಷ್ಟೊಂದು ಆಸಕ್ತಿ ತೋರಿಸಿರಲಿಲ್ಲ. ಹೀಗಾಗಿ ನಾನು ಮತ್ತು ನನ್ನ ಪತಿ ನಾಗರಾಜ್‌ ಆಕೆಯ ಇಷ್ಟದಂತೆ ಮಾಡಲಿ ಎಂದು ಸುಮ್ಮನಾಗಿದ್ದೆವು. ಬಳಿಕ ಶಾಲಾ ಕೂಟವೊಂದರಲ್ಲಿ ಪಾವನಾ ಹೈಜಂಪ್‌ನಲ್ಲಿ ಚಿನ್ನದ ಪದಕ ಗೆದ್ದಳು. ನನ್ನಿಂದಲೇ ಸ್ಫೂರ್ತಿ ಪಡೆದು ಆಕೆ ಹೈಜಂಪ್‌ ಆಯ್ದುಕೊಂಡಿರುವುದು ತಿಳಿಯಿತು. ಅಲ್ಲಿಂದ ಹೈಜಂಪ್‌ನಲ್ಲಿ ತರಬೇತಿ ನೀಡುತ್ತಿದ್ದೇನೆ. ಮೊದಲು ದಕ್ಷಿಣ ವಲಯದಲ್ಲಿ ಗೆದ್ದಿದ್ದಳು. ಇದೀಗ ಕಿರಿಯರ ರಾಷ್ಟ್ರೀಯ ಕೂಟದಲ್ಲಿ ಚಿನ್ನ ಗೆದ್ದಿರುವುದು ಬಹಳ ಖುಷಿ ಆಗಿದೆ.

Advertisement

ತಾಯಿಯೆಂಬ ಸಲುಗೆಯಿಲ್ಲ: ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಪಾವನಾಗೆ ತರಬೇತಿ ನೀಡುತ್ತಿದ್ದೇನೆ. ಮನೆಯಲ್ಲಿ ಸ್ವಲ್ಪ ಸಲುಗೆಯಿಂದ ಇರುತ್ತಾಳೆ. ಆದರೆ ಕ್ರೀಡಾಂಗಣಕ್ಕೆ ಇಳಿದರೆ ನಾನು ಗುರು. ಅಲ್ಲಿ ಸಲುಗೆಗೆ ಅವಕಾಶವಿಲ್ಲ. ನನ್ನೊಂದಿಗೆ ತರಬೇತಿ ಪಡೆಯುತ್ತಿರುವ ಎಲ್ಲ ಮಕ್ಕಳಂತೆ ನನ್ನ ಮಗಳನ್ನು ನೋಡುತ್ತೇನೆ. ಕೆಲವು ಸಲ ತಪ್ಪು ಮಾಡಿದಾಗ ಗದರಿದ್ದೂ ಇದೆ ಎಂದರು ಸಹನಾ.

ಭವಿಷ್ಯದಲ್ಲಿ “ಉನ್ನತಿ’ಗೇರುವ ಭರವಸೆ: ಪ್ರಮೀಳಾ
ಮಗಳು ಉನ್ನತಿ ಇತ್ತೀಚೆಗೆ ಚಿನ್ನದ ಪದಕ ಗೆದ್ದಿರುವುದರಿಂದ ತಾಯಿ ಪ್ರಮೀಳಾ ಖುಷಿಯಾಗಿದ್ದಾರೆ. ಆಕೆ ಭವಿಷ್ಯದಲ್ಲಿ ಏನಾದರೂ ಸಾಧಿಸುತ್ತಾಳೆಂಬ ಭರವಸೆ ಬಂದಿದೆ ಎಂದು ಹೇಳಿಕೊಂಡಿದ್ದಾರೆ. “ಆಕೆಗೆ ನಾನೇ ಮೊದಲ ಗುರು. ಅವಳ ತಂದೆ ಅಯ್ಯಪ್ಪ ಅಥ್ಲೆಟಿಕ್ಸ್‌ ಕೋಚ್‌ ಆಗಿದ್ದು ಸೂಕ್ತ ಸಲಹೆಗಳನ್ನು ನೀಡುತ್ತಾರೆ. ದಿನಂಪ್ರತಿ ತರಬೇತಿ ನೀಡಿ ಮುಂದಿನ ಸ್ಪರ್ಧಾತ್ಮಕ ಕೂಟಕ್ಕೆ ಸಿದ್ಧಪಡಿಸುತ್ತಿದ್ದೇವೆ. ರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಪದಕ ಗೆದ್ದಿರುವುದು ಯಶಸ್ಸಿನ ಮೊದಲ ಮೆಟ್ಟಿಲು ಎಂದು ಅಂದುಕೊಂಡಿದ್ದೇನೆ ಎಂದು ಪ್ರಮೀಳಾ ತಿಳಿಸಿದರು.

ಕೊನೆ ಪ್ರಯತ್ನದಲ್ಲಿ ಚಿನ್ನ: ಉನ್ನತಿ ಚಿನ್ನದ ಪದಕ ಗೆದ್ದದ್ದು ಕೊನೆ ಪ್ರಯತ್ನದಲ್ಲಿ. ಇದು ನನಗೆ ಆಶ್ಚರ್ಯ ತರಿಸಿತು. ಒಟ್ಟಾರೆ 6 ಪ್ರಯತ್ನದ 5ನೇ ಯತ್ನದಲ್ಲಿ ಉನ್ನತಿ 5.40 ಮೀ. ಉದ್ದಕ್ಕೆ ಜಿಗಿದು ಚಿನ್ನ ಗೆದ್ದಳು. ಇವಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಸಾಮರ್ಥ್ಯವಿದೆ. ಅವಳನ್ನು ಮುಂದಿನ ಕೂಟಗಳಲ್ಲಿ ಸಿದ್ಧಪಡಿಸಿ ಯಶಸ್ವಿ ಅಥ್ಲೀಟ್‌ ಆಗುವಂತೆ ಮಾಡುವ ಜವಾವಾªರಿ ನನ್ನ ಮೇಲಿದೆ ಎಂದು ಪ್ರಮೀಳಾ ತಿಳಿಸಿದರು.

– ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next