Advertisement

ಅಮ್ಮಾ, ಮನೇಗ್‌ ಬರ್ತಿದ್ದೀನಿ…

05:06 PM Apr 01, 2019 | Team Udayavani |

ಬದುಕಿನಲ್ಲಿ ಇಷ್ಟು ವರ್ಷಗಳ ಕಾಲ ಆಚರಿಸಿದ ಹಬ್ಬಗಳಿಗಿಂತ ಇದು ವಿಶೇಷ ಅನಿಸುತ್ತದೆ. ಅದಕ್ಕೆ ಕಾರಣವಾದದ್ದು ದುಡಿಮೆ. ಅದರಲ್ಲೂ ದುಡಿದ ಹಣದಲ್ಲಿ ಮೊದಲ ಹಬ್ಬ. ಅಪರೂಪವಾದದ್ದು ಆಕಸ್ಮಿಕವಾಗಿ ನಡೆದುಹೋದಂತೆ…

Advertisement

ಬದುಕಿನ ದೊಡ್ಡ ದೊಡ್ಡ ಸಂತೋಷಗಳಿಗೆ ಸಣ್ಣ ಸಣ್ಣ ಕಾರಣಗಳು ಸಾಕು. ಮನದ ಬಾಗಿಲ ಮುಂದೆಯೇ ಅಪಾರ ಆನಂದವನ್ನು ಚೆಲ್ಲುತ್ತವೆ. ಎಷ್ಟೆಲ್ಲಾ ಓದಿದ್ದರೂ ಏನೆಲ್ಲಾ ಮಾಡಿದ್ದರೂ ಕೆಲಸವೊಂದು ದಕ್ಕದೇ ಹೋದಾಗ “ಭೂಮಿಗೆ ಭಾರ’ ಎಂಬಷ್ಟಲ್ಲದಿದ್ದರೂ “ಮನೆಗೆ ಭಾರ’ ಅಂತ ಅನ್ನಿಸುತ್ತದೆ. ಇಂಥದ್ದೇ ಬೇಕೆಂದೇನೂ ಇಲ್ಲ… ಯಾವ ಕೆಲಸವಾದರೂ ಸರಿ ಎಂಬ ಮನಸ್ಸಿನ ರಾಜಿ ಮಾತಿಗೆ ಬೆಂಗಳೂರು, ಮಂಗಳೂರು, ಗೋವಾ, ಮುಂಬೈಯಂಥ ದೊಡ್ಡ ನಗರಗಳು ಕಿವಿಯಾಗುತ್ತವೆ. ಕೈ ಮಾಡಿ ಕರೆಯುತ್ತವೆ. ಮೂರೊಪ್ಪತ್ತಿನ ಹಸಿವನ್ನು, ರಾತ್ರಿಯ ಹೊರಳಾಟವನ್ನು ಸುಲಭವಾಗಿ ಸಹಿಸಿಕೊಳ್ಳುವ ಭರವಸೆ ನೀಡುತ್ತವೆ.

ಬದುಕಿನಲ್ಲಿ ಬೇಸತ್ತು ಹೋದವರಿಗೆ ಇಷ್ಟು ಸಾಕಲ್ಲವೇ? ಯಾರಿಗೂ ಹೇಳದೇ, ಕೇಳದೆ ಹೊರಡುವುದು ಆ ನಗರಗಳಿಗೇ. ಮಹಾನಗರಗಳ್ಳೋ… ಬಾಚಿ ತಬ್ಬಿಕೊಳ್ಳುತ್ತವೆ. ಮೊದಲ ಎರಡು ಮೂರು ದಿನಗಳನ್ನು ಸಹಿಸಿಕೊಂಡುಬಿಟ್ಟರೆ ಮತ್ತೆ ಎರಡು ಮೂರು ತಿಂಗಳು ಏನೆಂದರೆ ಏನೂ ನೆನಪಾಗದಂತೆ, ತಲೆ ಗಿಮ್ಮೆನ್ನುಸುವ ಮಾಯೆ, ನಗರ ಬದುಕಿನದ್ದು. ಮತ್ತೆ ಮನೆ- ಊರು ನೆನಪಾಗುವುದೇ ಹಬ್ಬವೆಂಬ ಸಡಗರಗಳಿಗೆ, ಕಂಪನಿ ಬೋನಸ್‌ ಘೋಷಣೆ ಮಾಡಿದಾಗ.

ಫ್ರೆಂಡ್‌ಗೆ ಫೋನ್‌ಕಾಲ್‌
“ನಾಳೆ ಊರಿಗೆ ಬರ್ತಾ ಇದೀನಿ. ನಮ್ಮನೆಯಲ್ಲಿ ಹೇಳಿ ಬಿಡು’ ಅನ್ನುವ ಮಾತು ಕೇಳಿ ಆ ಕಡೆಯಿಂದ ಅಚ್ಚರಿ. “ನೀನು ಬರೋದೇ ಇಲ್ಲ ಅನ್ಕೊಂಡಿದ್ದೆ! ಎಲ್ಲಿದ್ದೀಯಾ..?’ ಎಂಬ ಪ್ರಶ್ನೆಗೆ, “ಈಗ ಅದೆಲ್ಲ ಹೇಳ್ಳೋಕ್ಕಾಗಲ್ಲ… ನಾಳೆ ಊರಲ್ಲಿ ಮಾತಾಡೋಣ. ನಿನ್ನ ಡ್ರೆಸ್‌ ಸೈಜ್‌ ಹೇಳು’ ಎಂದು ಕೇಳುತ್ತಾ ಆ ಕಡೆಯಿಂದ ಬಂದ ಉತ್ತರವನ್ನು ಸರಿಯಾಗಿ ನೆನಪಿಟ್ಟುಕೊಂಡು, ಎಲ್ಲವನ್ನೂ ಖರೀದಿಸಿ ರೈಲು ಹತ್ತಿದ ಮನಸ್ಸಿನ ಉದ್ದಕ್ಕೂ ರೈಲು ಹಳಿಗಳ ಮೇಲೆ ನೆನಪುಗಳ ಓಟ…

ಬದಲಾದ ವೇಷಭೂಷಣ
ಮೈ ತುಂಬಾ ಮಹಾನಗರದ ಪೋಷಾಕು. ಜೀನ್ಸ್‌ ಪ್ಯಾಂಟು, ಟಿ ಶರ್ಟು, ಬಣ್ಣದ ಬೂಟು, ಕಿವಿಯಲ್ಲಿ ಇಯರ್‌ಫೋನು, ಸ್ಟೈಲಿಶ್‌ ವಾಚು ಹಾಕಿಕೊಂಡು ಊರಿನಲ್ಲಿ ಹೋಗುತ್ತಿದ್ದರೆ, “ಯಾರಿದು?’ ಎಂಬ ಬೆರಗು. ಬರೀ ಹರಕು ಬಟ್ಟೆ ತೊಟ್ಟು, ಅವರಿವರು ಕೊಟ್ಟ ಉಡುಪು ಧರಿಸಿ ಸವೆಸಿದ್ದ ಬದುಕಿಗೆ ಒಂದಿಷ್ಟು ಹೊಸತನ ತೊಡಿಸುವ ಹೊತ್ತು. ಮನೆಗೆ ಬಂದೊಡನೆ ಮನೆತುಂಬ ಆವರಿಸಿದ ಖುಷಿ. ಹಬ್ಬವನ್ನೇ ತಿರಸ್ಕರಿಸಿದ್ದವರಿಗೆ ಹೊಸ ಸಂವತ್ಸರ. ಹೆಚ್ಚಾದ ಹಬ್ಬದ ಸಡಗರ.

Advertisement

ಮನೆ ಮಂದಿಗೆಲ್ಲ ಬಟ್ಟೆ
ಹುಟ್ಟಿದಾಗಿನಿಂದಲೂ ಅಪ್ಪ- ಅಮ್ಮ ಕೊಡಿಸಿದ ಬಟ್ಟೆಯನ್ನೇ ಉಟ್ಟು, ದೊಡ್ಡವರಾದವರಿಗೆ, ಹೊಸ ಬಟ್ಟೆ ಧರಿಸುವುದು ಹಬ್ಬದಲ್ಲಿ ನಿಜಕ್ಕೂ ದುಪ್ಪಟ್ಟಿನ ಸಂಭ್ರಮ. ಅಪ್ಪನಿಗೆ ಬಿಳಿ ಬಟ್ಟೆ, ಅಮ್ಮನಿಗೆ ಇಷ್ಟದ ಸೀರೆ, ತಮ್ಮ- ತಂಗಿಯರಿಗೆ ಕಾಲೇಜಿಗೊಪ್ಪುವ ಡ್ರೆಸ್ಸು… ಎಲ್ಲರ ಮುಖದಲ್ಲಿಯೂ ಹೊಸ ಬಟ್ಟೆಯ ಘಮ. ಮತ್ತೆ ಬರುವುದೇ ಇಲ್ಲ ಅಂದುಕೊಂಡಿದ್ದ ಹೆತ್ತವರಿಗೆ ಮತ್ತೂಮ್ಮೆ ಹುಟ್ಟಿ ಬಂದಂತೆ. ಹೊಸ ಬಟ್ಟೆಗಳನ್ನುಟ್ಟು ಎಲ್ಲರಿಗೂ ತೋರಿಸಿ ಬರುವ ಉಮೇದು.

ಕಂಪನಿ ಕೊಟ್ಟ ಗಿಫ್ಟ್ ಬಾಕ್ಸ್‌
ಹಬ್ಬಕ್ಕೆ ವಾರವಿದ್ದಾಗ, ಕಂಪನಿ ತನ್ನ ಉದ್ಯೋಗಿಗಳಿಗೆ ಪಟಾಕಿ ಬಾಕ್ಸ್‌ ಅಥವಾ ಸ್ವೀಟ್‌ ಬಾಕ್ಸ್‌ನ ಎರಡು ಆಯ್ಕೆ ಇಟ್ಟಿತ್ತು. ಅದರಲ್ಲಿ ಮನೆಯ ಎಲ್ಲರಿಗೂ ಕೊಡುವ ಖುಷಿಯಲ್ಲಿ ಸ್ವೀಟ್‌ ಅನ್ನೇ ಆಯ್ದುಕೊಂಡು ಬಂದು ಒಂದೊಂದೇ ಪೊಟ್ಟಣ ಕೈಗಿಟ್ಟು ಅವರ ಕಂಗಳಲ್ಲಿ ಕಂಡ ಸಿಹಿ ಪ್ರೀತಿಗೆ ಹೃದಯವೆಲ್ಲ ಜೇನುಗೂಡು. ಬದುಕಿನ ಅಷ್ಟೂ ಕಾಲದ ಕಹಿ ಮರೆಸುವ ತಾಕತ್ತು. ಎಷ್ಟೊಂದು ಸಮಾಧಾನ, ಸಂತೃಪ್ತಿ, ಸಂತೋಷವನ್ನು ಕೊಟ್ಟಿತು ಒಂದು ಕೆಲಸ.

ಹಬ್ಬದ ರೇಶನ್‌ ಖರೀದಿ
ಮೊದಲ ಕುಶಲೋಪರಿ ಮುಗಿದು ಮರುದಿನದ ಹಬ್ಬಕ್ಕೆ ಬೇಕಾದುದನ್ನು ಕೇಳಿ, ಪಟ್ಟಿ ಬರೆದುಕೊಂಡು, ಫ್ರೆಂಡ್‌ ಜೊತೆ ಹೋಗಿ ಹಬ್ಬ ಮುಗಿದ ನಂತರವೂ ಮೂರು ತಿಂಗಳಿಗಾಗುವಷ್ಟು ಸಾಮಾನು ಖರೀದಿಸಿ ಮನೆಗೆ ತಂದು ಹಾಕಿದಾಗ ಜವಾಬ್ದಾರಿ ನಿಭಾಯಿಸಿದ ಸಾರ್ಥಕತೆ. ಇಡೀ ಮನೆಯಲ್ಲಿ ಗರಿಗೆದರಿದ ಖುಷಿಯ ಕುಣಿತ. ಅವತ್ತಿನ ಊಟಕ್ಕೆ ಹೊಸರುಚಿ. ಎಲ್ಲವನ್ನೂ ಅಮ್ಮನೇ ಕೈತುತ್ತು ಕೊಟ್ಟಂತೆ.

ಬದುಕಿನಲ್ಲಿ ಇಷ್ಟು ವರ್ಷಗಳ ಕಾಲ ಆಚರಿಸಿದ ಹಬ್ಬಗಳಿಗಿಂತ ಇದು ವಿಶೇಷ ಅನಿಸುತ್ತದೆ. ಅದಕ್ಕೆ ಕಾರಣವಾದದ್ದು ದುಡಿಮೆ. ಅದರಲ್ಲೂ ದುಡಿದ ಹಣದಲ್ಲಿ ಮೊದಲ ಹಬ್ಬ. ಅಪರೂಪವಾದದ್ದು ಆಕಸ್ಮಿಕವಾಗಿ ನಡೆದುಹೋದಂತೆ. ಹಬ್ಬ ಮುಗಿದ ಮರುದಿನ ಎಲ್ಲವನ್ನೂ ಕೊಟ್ಟ ನಗರದತ್ತ ಹೊರಟಾಗ ಮತ್ತಷ್ಟು ಕನಸುಗಳು ಬೆನ್ನ ಹಿಂದೆ ಬಿದ್ದಂತೆ. ಅವುಗಳನ್ನು ಈಡೇರಿಸುವ ತಾಯಗರ್ಭ ನಗರ. ಮತ್ತೆ ಕೈಬೀಸುತ್ತದೆ. ಹೆತ್ತವರ ಹಾರೈಕೆಗಳು ಈಗ ಮುಂದೆ ಮುಂದೆ ಸಾಗಿ ದಾರಿಯನ್ನು ಸೊಬಗುಗೊಳಿಸುತ್ತವೆ.

– ಸೋಮು ಕುದರಿಹಾಳ

Advertisement

Udayavani is now on Telegram. Click here to join our channel and stay updated with the latest news.

Next