ಹೈದರಾಬಾದ್: ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್(CISF) ಸಿಬ್ಬಂದಿಗಳೊಂದಿಗೆ ವಾಗ್ವಾದಕ್ಕೀಳಿದ ಆರೋಪದ ಮೇಲೆ ಮಾಲಿವುಡ್ ನಟ ವಿನಾಯಗನ್ (Actor Vinayakan ) ಅವರನ್ನು ಶನಿವಾರ (ಸೆ.7ರಂದು) ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಕೊಚ್ಚಿಯಿಂದ ಗೋವಾಗೆ ಪ್ರಯಾಣಿಸುವಾಗ ಈ ಘಟನೆ ಸಂಭವಿಸಿದ್ದು, ವಿನಾಯಗನ್ ಹೈದರಾಬಾದ್ ವಿಮಾನ ನಿಲ್ದಾಣ(Rajiv Gandhi International Airport) ದಲ್ಲಿ ಗೋವಾಗೆ ಸಂಪರ್ಕ ಕಲ್ಪಿಸುವ ವಿಮಾನಕ್ಕಾಗಿ ಕಾಯುತ್ತಿದ್ದಾಗ, ಸಿಐಎಸ್ಎಫ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ ಎನ್ನಲಾಗಿದ್ದು, ಇದಾದ ಬಳಿಕ ವಾಗ್ವಾದ ದೈಹಿಕ ಹಲ್ಲೆವರೆಗೂ ಮುಂದುವರೆದಿದೆ ಎಂದು ವರದಿಯಾಗಿದೆ.
ಘಟನೆಯ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲದಿದ್ರೂ,ವಾಹಿನಿಯೊಂದರ ಜತೆ ಮಾತನಾಡಿರುವ ಅವರು, ಸಿಐಎಸ್ಎಫ್ ಸಿಬ್ಬಂದಿಗಳು ತನ್ನನ್ನು ಕೋಣೆಗೆ ಕರೆದುಕೊಂಡು ಥಳಿಸಿದ್ದಾರೆ. ತಾನು ತಪ್ಪು ಮಾಡಿಲ್ಲ, ನನ್ನನ್ನು ಯಾಕೆ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎನ್ನುವುದು ಗೊತ್ತಿಲ್ಲ. ಏನು ನಡೆದಿದೆ ಎನ್ನುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಅವರು ಹೇಳಿದ್ದಾರೆ.
ಕೆಲ ಮೂಲಗಳ ಪ್ರಕಾರ, ವಿನಾಯಗನ್ ಮದ್ಯ ಸೇವಿಸಿದ್ದರು. ಸಿಬ್ಬಂದಿಗಳ ಜತೆ ವಾಗ್ವಾದಕ್ಕಿಳಿದಿದ್ದಾರೆ. ಇದಾದ ಬಳಿಕ ಮಾತು ಜಗಳದವರೆಗೂ ಮುಂದುವರೆದಿದೆ ಎನ್ನಲಾಗಿದ್ದು, ಆ ಬಳಿಕ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿ, ಕಸ್ಟಡಿಗೆ ನೀಡಿದ್ದಾರೆ ಎಂದು ವರದಿಯಾಗಿದೆ.
ಈ ಹಿಂದೆಯೂ ಕುಡಿದು ಜೈಲಿನಲ್ಲಿ ರಂಪಾಟ ಮಾಡಿದ ಆರೋಪ ʼಜೈಲರ್ʼ ನಟ ವಿನಾಯಗನ್ ವಿರುದ್ಧ ಕೇಳಿಬಂದಿತ್ತು.