Advertisement

ಅಗ್ನಿಶಾಮಕ ದಳದಿಂದ ಅಣುಕು ಪ್ರದರ್ಶನ

11:07 AM Jan 21, 2018 | Team Udayavani |

ಮಹಾನಗರ: ಪಾಂಡೇಶ್ವರದ ರೊಜಾರಿಯೋ ಪ್ರೌಢ ಶಾಲೆಯಲ್ಲಿ ಮಂಗಳೂರು ಅಗ್ನಿಶಾಮಕ ದಳದ ವತಿಯಿಂದ ಶನಿವಾರ ಬೆಂಕಿ ಆರಿಸುವ ಅಣುಕು ಪ್ರದರ್ಶನ ನಡೆಯಿತು.

Advertisement

ಅಗ್ನಿ ಶಾಮಕ ಇಲಾಖೆಯ ಮುಖ್ಯಸ್ಥ ಟಿ.ಎನ್‌. ಶಿವಶಂಕರ್‌ ಅವರ ನೇತೃತ್ವದಲ್ಲಿ ಸುಮಾರು 30ಕ್ಕೂ ಹೆಚ್ಚಿನ ಮಂದಿ ಅಗ್ನಿ ಶಾಮಕ ಇಲಾಖೆಯ ಅಧಿಕಾರಿಗಳು ಈ ಅಣುಕು ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ಶಾಲಾ ಕಟ್ಟಡಕ್ಕೆ ಬೆಂಕಿ ತಗುಲಿದ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಧಾವಿಸುವವರೆಗೆ ಯಾವ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು, ಅನಂತರ ಇಲಾಖೆಯ ಅಧಿಕಾರಿಗಳು ಯಾವ ರೀತಿಯಲ್ಲಿ ಬೆಂಕಿ ಆರಿಸುತ್ತಾರೆ ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಲಾಯಿತು.

ಹೊಸ ತಂತ್ರಜ್ಞಾನ ಬಳಕೆ
ಅಗ್ನಿಶಾಮಕ ಇಲಾಖೆಯ ಮುಖ್ಯಸ್ಥ ಟಿ.ಎನ್‌. ಶಿವಶಂಕರ್‌ ಮಾತನಾಡಿ, ಅಗ್ನಿಶಾಮಕ ಇಲಾಖೆಯ ಸಿಬಂದಿ ಬ್ರಾಂಚ್‌ಗಳನ್ನು ಉಪಯೋಗಿಸಿ ಯಾವ ರೀತಿಯಲ್ಲಿ ಬೆಂಕಿ ಆರಿಸಬೇಕು ಎಂಬುವುದನ್ನು ತೋರಿಸಿದ್ದಾರೆ. ಬೆಂಕಿ ತಗುಲಿದ ಸ್ಥಳಕ್ಕೆ ಕೂಡಲೇ ಧಾವಿಸುವ ದ್ವಿಚಕ್ರ ವಾಹನ, ನಾಲ್ಕು ಚಕ್ರದ ವರುಣ ವಾಹನವನ್ನು ಬಳಸಿದ್ದೇವೆ. ಅಲ್ಲದೆ ಹೊಸ ತಂತ್ರಜ್ಞಾನವುಳ್ಳ 500 ಲೀ. ನೀರು ಹಿಡಿದಿಡುವ ಸಾಮರ್ಥ್ಯದ ಕ್ವಿಕ್‌ ರೆಸ್ಪಾನ್ಸ್‌ ವಾಹನವನ್ನು ಉಪಯೋಗಿಸಿದ್ದೇವೆ ಎಂದರು. ಹತ್ತು ಮಹಡಿ ಕಟ್ಟಡಕ್ಕೆ ಬೆಂಕಿ ತಗುಲಿದರೆ ಅದನ್ನು ನಂದಿಸಲು ಉಪಯೋಗಿಸುವ ಎಎಲ್‌ಪಿ ಎಂಬ ತಂತ್ರಜ್ಞಾನ ವಾಹನ, 16 ಸಾವಿರ ಲೀ. ನೀರಿನ ಸಾಮರ್ಥ್ಯವನ್ನು ಹೊಂದಿದ ಟ್ಯಾಂಕ್‌ನ್ನು ಕೂಡ ಬಳಸಿ ಡೆಮೋ ತೋರಿಸಲಾಗಿದೆ ಎಂದರು.

ವಿಭಾಗೀಯ ಅಗ್ನಿಶಾಮಕ ಅಧಿಕಾರಿ ತಿಪ್ಪೇಸ್ವಾಮಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶೇಖರ್‌ ಮತ್ತು ಪರಮೇಶ್ವರ್‌, ಸುನೀಲ್‌ ಕುಮಾರ್‌, ರೊಜಾರಿಯೋ ಶಿಕ್ಷಣ ಸಂಸ್ಥೆಯ ಸಂಚಾಲಕ ಫಾ| ಜೆ.ಬಿ. ಕ್ರಾಸ್ತಾ, ಪದವಿ ಕಾಲೇಜಿನ ಪ್ರಾಂಶುಪಾಲ ಫಾ| ರಾಕೀ ಫೆರ್ನಾಂಡೀಸ್‌, ಪ.ಪೂ. ಕಾಲೇಜಿನ ಪ್ರಾಂಶುಪಾಲ ವಿನ್ಸೆಂಟ್‌ ಡಿ’ಸೋಜಾ, ಪ್ರೌಢ ಶಾಲೆಯ ಪ್ರಾಂಶುಪಾಲ ಅಲೋಶಿಯಸ್‌ ಡಿ’ಸೋಜಾ, ಶಿಕ್ಷಣ ಇಲಾಖೆಯ ಆಶಾ ನಾಯಕ್‌ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಲೂಕಿನಲ್ಲಿ ಅಗ್ನಿಶಾಮಕ ಇಲಾಖೆ
ದೇರಳಕಟ್ಟೆಯ ಇನ್ಫೋಸಿಸ್‌ ಬಳಿ ಅಗ್ನಿಶಾಮಕ ಇಲಾಖೆಯನ್ನು ತೆರೆಯಲು ಕೆಎಡಿಬಿ ಅವರು 1 ಎಕ್ರೆ ಜಾಗವನ್ನು ನೀಡಿದ್ದಾರೆ. ಮೂಲ್ಕಿ ಬಳಿಯ ಕೈಗಾರಿಕಾ ಪ್ರದೇಶದಲ್ಲಿ ಇಲಾಖೆ ಸ್ಥಾಪನೆ ಪ್ರಸ್ತಾವನೆ ಹಂತದಲ್ಲಿದೆ. ಬೈಂದೂರಿನಲ್ಲಿ ಅಗ್ನಿಶಾಮಕ ಇಲಾಖೆ ತೆರೆಯಲು ಜಾಗ ಸಿಕ್ಕಿದ್ದು, ಪ್ರಸ್ತಾವನೆ ಸರಕಾರದ ಹಂತದಲ್ಲಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಒಂದು ಅಗ್ನಿಶಾಮಕ ಇಲಾಖೆ ತೆರೆಯಲಿದ್ದೇವೆ.
– ಟಿ.ಎನ್‌. ಶಿವಶಂಕರ್‌ , ಅಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next