Advertisement

ಜನರಿಗೆ ನೀರಿನ ಬರ: ಹೋಟೆಲ್ ಗೆ ಭರಪೂರ!

12:39 PM Sep 15, 2019 | Naveen |

ಮೊಳಕಾಲ್ಮೂರು: ಸತತ ಬರ, ಮಳೆ ವೈಫಲ್ಯದಿಂದಾಗಿ ಪಟ್ಟಣದ ಜನರು ಹನಿ ನೀರಿಗೂ ಪರದಾಡುವಂತಾಗಿದೆ. ಜನರಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಬೇಕಾದ ಪಟ್ಟಣ ಪಂಚಾಯತ್‌, ಕೆಲವು ಹೋಟೆಲ್ಗಳಿಗೆ ಭರಪೂರ ನೀರು ಸರಬರಾಜು ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

Advertisement

ಪಟ್ಟಣದ ಎಲ್ಲಾ 16 ವಾರ್ಡ್‌ಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಜನರಿಗೆ ಸುಮಾರು 15-20 ದಿನಗಳಾದರೂ ಹನಿ ನೀರು ಬಿಡದ ಪಟ್ಟಣ ಪಂಚಾಯತ್‌, ಹಲವಾರು ಬಾರಿ ಪಟ್ಟಣದ ಬಸ್‌ನಿಲ್ದಾಣದ ಹೋಟೆಲ್ ಸೇರಿದಂತೆ ಕೆಲವು ಹೋಟೆಲ್ಗಳಿಗೆ ಮಾತ್ರ ನೀರು ಪೂರೈಕೆ ಮಾಡುತ್ತಿದೆ. ಅದು ಕೂಡ ನೀರನ್ನು ನದಿಯಂತೆ ಹರಿಸಿ ವ್ಯರ್ಥಗೊಳಿಸಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಸಾರ್ವಜನಿಕರು ನೀರಿಗಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಪಟ್ಟಣ ಪಂಚಾಯತ್‌ ನೀರಗಂಟಿಗಳು ನೀರು ಬಿಡಲು ತಡವಾದಲ್ಲಿ ಆಂಧ್ರದಿಂದ ಆಮದಾಗುವ ಶುದ್ದ ಕುಡಿಯುವ ನೀರಿಗೆ ಒಂದು ಕೊಡಕ್ಕೆ 20 ರೂ. ಕೊಟ್ಟು ಕುಡಿಯುವ ನೀರು ಪಡೆಯಬೇಕಾಗಿದೆ. ಬಳಕೆಗಾಗಿ ಖಾಸಗಿ ನೀರಿನ ಟ್ಯಾಂಕರ್‌ಗಳಿಗೆ 500-600 ರೂ. ತೆತ್ತು ನೀರಿನ ದಾಹ ತಣಿಸಿಕೊಳ್ಳುವಂತಾಗಿದೆ.

ಪಟ್ಟಣ ಪಂಚಾಯತ್‌ ನೀರಗಂಟಿಗಳು 15-20 ದಿನಗಳಿಗೊಮ್ಮೆ ಒಂದು ಲೈನ್‌ಗೆ ಕೇವಲ ಅರ್ಧ ಇಲ್ಲವೇ ಮುಕ್ಕಾಲು ಗಂಟೆ ಕಾಲ ಮಾತ್ರ ಅಲ್ಪ ಪ್ರಮಾಣದಲ್ಲಿ ನೀರು ಬಿಡುತ್ತಿದ್ದಾರೆ. ನಿಗದಿಪಡಿಸಿದ ಸಮಯದಲ್ಲಿ ಅಲ್ಪ ಪ್ರಮಾಣದ ನೀರು ಬಿಟ್ಟು ಬಂದ್‌ ಮಾಡುತ್ತಾರೆ. ಆದರೆ ಬಸ್‌ ನಿಲ್ದಾಣದ ಹೋಟೆಲ್ ಹಾಗೂ ಹಲವಾರು ಸಂಪ್‌ಗ್ಳಿಗೆ ಹೆಚ್ಚಾಗಿ ನೀರು ಹರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಪಟ್ಟಣಕ್ಕೆ ರಂಗಯ್ಯನದುರ್ಗ ಜಲಾಶಯದಿಂದ ಸರಬರಾಜು ಮಾಡುವ ಮೋಟಾರ್‌ ಪಂಪ್‌ ಕೆಟ್ಟುಹೋಗಿದೆ ಎಂದು ತಿಳಿಸಿ ಸುಮಾರು 15-20 ದಿನಗಳಾದರೂ ಹನಿ ನೀರು ಬಿಟ್ಟಿಲ್ಲ. ಆದರೆ ಬಸ್‌ನಿಲ್ದಾಣದ ಹೋಟೆಲ್ನ ಸಂಪ್‌ಗೆ ರಾತ್ರಿಪೂರ್ತಿ ನೀರು ಹರಿಸಲಾಗಿದೆ. ಇದರಿಂದ ಸಂಪ್‌ ಭರ್ತಿಯಾಗಿ ಬಸ್‌ನಿಲ್ದಾಣದಿಂದ ಮೊಬಾರಕ್‌ ಮೊಹಲ್ಲಾದವರೆಗೂ ನೀರು ವ್ಯರ್ಥವಾಗಿ ಹರಿದು ಹೋಗಿದೆ. ಇದು ಜನರನ್ನು ಕೆರಳಿಸಿದೆ.

Advertisement

ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಹೊಸದಾಗಿ ಬಂದಿರುವ ಪಪಂ ಮುಖ್ಯಾಧಿಕಾರಿಗೆ ಈ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಇನ್ನು ಮುಂದಾದರೂ ಎಚ್ಚೆತ್ತುಕೊಂಡು ಸಮರ್ಪಕ ನೀರು ಪೂರೈಕೆಗೆ ಪಟ್ಟಣ ಪಂಚಾಯತ್‌ ಅಧಿಕಾರಿಗಳು ಮುಂದಾಗಬೇಕು ಎಂಬುದು ನಾಗರಿಕರ ಒತ್ತಾಯ.

Advertisement

Udayavani is now on Telegram. Click here to join our channel and stay updated with the latest news.

Next