Advertisement

ಜನವಸತಿಗೆ ಕಂಟಕವಾದ ಕಲ್ಲು ಸ್ಪೋಟ!

12:40 PM Feb 29, 2020 | Naveen |

ಮೊಳಕಾಲ್ಮೂರು: ಪಟ್ಟಣದ ಜನವಸತಿ ಬಡಾವಣೆಯೊಂದರ ಬಳಿ ರೈಲ್ವೆ ಅಂಡರ್‌ಪಾಸ್‌ ಕಾಮಗಾರಿ ನಡೆಯುತ್ತಿದೆ. ಆದರೆ ಆ ಸ್ಥಳದಲ್ಲಿ ಕಲ್ಲುಗಳನ್ನು ಒಡೆಯಲು ಅನುಮತಿ ಪಡೆಯದೇ ಸಿಡಿಮದ್ದು ಸಿಡಿಸಿದ್ದರಿಂದ ಭೂಮಿ ಕಂಪಿಸಿ ಕಲ್ಲುಗಳು ಮನೆಗಳ ಮೇಲೆ ಬಿದ್ದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ವಾಸದ ಮನೆಗಳು ಮತ್ತು ವ್ಯಾಪಾರಿ ಮಳಿಗೆಗಳು ಹಾನಿಗೊಳಗಾಗಿವೆ.

Advertisement

ಸ್ಥಗಿತಗೊಂಡಿದ್ದ ಅಂಡರ್‌ಪಾಸ್‌ ಕಾಮಗಾರಿಯನ್ನು ರೈಲ್ವೆ ಇಲಾಖೆಯವರು ಮತ್ತೆ ಆರಂಭಿಸಿದ್ದರು. ಆದರೆ ಈ ಕಾಮಗಾರಿ ಸ್ಥಳದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅನುಮತಿ ಪಡೆಯದೆ ಫೆ.24 ರಂದು ಸಿಡಿಮದ್ದನ್ನು ಬಳಸಿ ಕಲ್ಲು ಗುಂಡು ಸಿಡಿಸಿದ್ದರಿಂದ ಭೂಮಿ ಕಂಪಿಸಿತ್ತು. ಅಲ್ಲದೆ ಸಿಡಿದ ಕಲ್ಲುಗಳು ಸ್ಥಳೀಯರ ಮನೆಗಳ ಮೇಲೆ ಬಿದ್ದ ಪರಿಣಾಮ ಗೋಡೆಗಳು ಬಿರುಕು ಬಿಟ್ಟು ಹೆಚ್ಚಿನ ಪ್ರಮಾಣದಲ್ಲಿ ಹಾನಿಗೀಡಾಗಿವೆ.

ಜನವಸತಿ ಪ್ರದೇಶದಲ್ಲಿ ಸಿಡಿಮದ್ದನ್ನು ಬಳಸುವಂತಿಲ್ಲ ಎಂಬ ನಿಯಮ ಉಲ್ಲಂಘಿಸಿ ಸಿಡಿಮದ್ದು ಸಿಡಿಸಿದ್ದರಿಂದ ಭೂಕಂಪನ ಉಂಟಾಗಿ ಕಲ್ಲುಗಳು ಮನೆಗಳಿಗೆ ಬಿದ್ದಿವೆ. ಕಲ್ಲು ಒಡೆಯಲು ಉತ್ತಮ ತಂತ್ರಜ್ಞಾನದ ಮಿಷನ್‌ಗಳಿದ್ದರೂ ಅವುಗಳನ್ನು ಬಳಸದೆ ಸಿಡಿಮದ್ದು ಸಿಡಿಸಿರುವುದು ಹಾನಿಗೆ ಕಾರಣವಾಗಿದೆ.

ಮಳೆಗಾಲದಲ್ಲಿ ಮಳೆ ನೀರು ಇಳಿದು ಗೋಡೆಗಳಲ್ಲಿ ಬಿರುಕು ಮೂಡಿದರೆ ಕಟ್ಟಡವೇ ಕುಸಿದರೂ ಅಚ್ಚರಿ ಇಲ್ಲ. ರೈಲ್ವೆ ಅಂಡರ್‌ ಪಾಸ್‌ ಕಲ್ಲು ಸಿಡಿತದಿಂದ ಸಮೀಪದ ಎನ್‌.ಐ. ಬಡಾವಣೆ ನಿವಾಸಿಯಾದ ದೈಹಿಕ ಶಿಕ್ಷಕ ಕೆ. ಶಾಂತವೀರಣ್ಣರವರ ಲಕ್ಷಾಂತರ ರೂ. ಮೌಲ್ಯದ ಮನೆ, ಹೀರೋ ಹೊಂಡಾ ಬೈಕ್‌ ಶೋರೂಂಗಳ ಕಟ್ಟಡ ಹಾಗೂ ವ್ಯಾಪಾರೋದ್ಯಮಿ ಅಬ್ದುಲ್‌ ಖಾದರ್‌ ವಾಸದ ಮನೆ ಮತ್ತು ವ್ಯಾಪಾರಿ ಮಳಿಗೆಗಳಿಗೆ ಸಾಕಷ್ಟು ಹಾನಿಯಾಗಿವೆ. ಘಟನಾ ಸ್ಥಳಕ್ಕೆ ರೈಲ್ವೆ ಇಲಾಖೆ ಅಭಿಯಂತರ ಜಗದೀಶ್‌ ಭೇಟಿ ನೀಡಿ ಪರಿಶೀಲಿಸಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದೆಂದು ಭರವಸೆ ನೀಡಿದ್ದಾರೆ.

ಸಿಡಿಮದ್ದು ಬಳಸದಂತೆ ತಹಶೀಲ್ದಾರರು ಸೂಚನೆ ನೀಡಿದ್ದರೂ ಸಿಡಿಮದ್ದು ಬಳಸಿ ಕಟ್ಟಡಗಳ ಹಾನಿಗೆ ಕಾರಣವಾಗಿರುವ ಗುತ್ತಿಗೆದಾರರ ವಿರುದ್ಧ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿ ಪರಿಶೀಲಿಸಿ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

ರೈಲ್ವೆ ಇಲಾಖೆಯ ಗುತ್ತಿಗೆದಾರರಿಗೆ ಸಿಡಿಮದ್ದನ್ನು ಬಳಸದೆ ಕಾಮಗಾರಿ ಮಾಡುವಂತೆ ಸೂಚಿಸಿದ್ದರೂ ಗುತ್ತಿಗೆದಾರರು ಸಿಡಿಮದ್ದನ್ನು ಬಳಸಿದ್ದಾರೆ. ಇದರಿಂದ ಸ್ಥಳೀಯರ ವಾಸದ ಮನೆ ಮತ್ತು ವ್ಯಾಪಾರಿ ಮಳಿಗೆಗಳಿಗೆ ಹಾನಿಯಾಗಿದ್ದು, ಕೂಡಲೇ ಮೇಲಾಧಿ ಕಾರಿಗಳಿಗೆ ವರದಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಜಗದೀಶ್‌,
ರೈಲ್ವೆ ಇಲಾಖೆ ಅಭಿಯಂತರರು, ಚಿತ್ರದುರ್ಗ

ಸಿಡಿಮದ್ದಿನಿಂದ ಮನೆ ಹಾನಿಗೊಳಗಾಗಿರುವುದು ಇಡೀ ಕುಟುಂಬವನ್ನು ದಿಗ್ಭ್ರಾಂತವನ್ನಾಗಿಸಿದೆ. ಜನವಸತಿ ಪ್ರದೇಶದಲ್ಲಿ ಸಿಡಿಮದ್ದನ್ನು ಬಳಸಬಾರದೆಂಬ ನಿಯಮವಿದ್ದರೂ ರೈಲ್ವೆ ಇಲಾಖೆಯವರು ಅದನ್ನು ಉಲ್ಲಂಘಿಸಿ ಸಿಡಿಮದ್ದನ್ನು ಸಿಡಿಸಿ ಲಕ್ಷಾಂತರ ರೂ. ಮೌಲ್ಯದ ಕಟ್ಟಡಗಳ ಹಾನಿಗೆ ಕಾರಣವಾಗಿರುವುದು ಆತಂಕಕ್ಕೀಡು ಮಾಡಿದೆ.
ಕೆ.ಶಾಂತವೀರಣ್ಣ,
 ದೈಹಿಕ ಶಿಕ್ಷಕರು

Advertisement

Udayavani is now on Telegram. Click here to join our channel and stay updated with the latest news.

Next