ಮೊಳಕಾಲ್ಮೂರು: ತಾಲೂಕಿನಲ್ಲಿ 7 ಸಾಂಸ್ಥಿಕ ಕ್ವಾರಂಟೈನ್ ಸೆಂಟರ್ ಗಳನ್ನು ಆರಂಭಿಸಲಾಗಿದ್ದು, ಅಲ್ಲಿ ದಾಖಲಾಗಿ ಜ್ವರ, ಕೆಮ್ಮು ಇತರೆ ಲಕ್ಷಣಗಳು ಕಂಡು ಬಂದವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ| ಸಿ.ಎಲ್. ಪಾಲಾಕ್ಷ ಹೇಳಿದರು.
ತಾಲೂಕಿನ ರಾಂಪುರ ಗ್ರಾಮದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರಂಭಿಸಲಾಗಿರುವ ಡೆಡಿಕೇಷನ್ ಕೋವಿಡ್ ಹೆಲ್ತ್ ಸೆಂಟರ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು. ಜನರಲ್ ಓಪಿಡಿ ನೋಡಲು ಒಂದು ಭಾಗ, ಕೋವಿಡ್ ಆಸ್ಪತ್ರೆಗೆ ಇನ್ನೊಂದು ಭಾಗ ಮಾಡಬೇಕು. ಪ್ರವೇಶ ದಾರಿ ಪ್ರತ್ಯೇಕವಾಗಿರಬೇಕು. ಮಾನವ ಸಂಪನ್ಮೂಲ, ಸಾಧನ ಸಲಕರಣೆಗಳು ಮತ್ತು ಇನ್ನಿತರೆ ಸಾಮಗ್ರಿಗಳನ್ನು ತರಿಸಿಕೊಂಡು ಸುಸಜ್ಜಿತವಾಗಿ ಇಟ್ಟುಕೊಳ್ಳಬೇಕು ಎಂದು ಸೂಚಿಸಿದರು.
ತಾಲೂಕಿನಲ್ಲಿ 22 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಅವರಲ್ಲಿ 12 ಜನರನ್ನು ಬಿಡುಗಡೆ ಮಾಡಲಾಗಿದೆ. ಇನ್ನುಳಿದವರ 10 ಜನರ ಗಂಟಲು ದ್ರವ ಪರೀಕ್ಷೆ ನೆಗೆಟಿವ್ ಬಂದ ನಂತರ 7 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿ ಹೋಂ ಕ್ವಾರಂಟೈನ್‌ಗೆ ಸೂಚಿಸಲಾಗುವುದು ಎಂದರು. ಜಿಲ್ಲೆಯಲ್ಲಿ 39 ಸಾಂಸ್ಥಿಕ ಕ್ವಾರಂಟೈನ್ ಸೆಂಟರ್‌ಗಳಿದ್ದು, 515 ಜನರು ಕ್ವಾರಂಟೈನ್‌ನಲ್ಲಿದ್ದು, 236 ಜನರು ಬಿಡುಗಡೆಗೊಂಡಿದ್ದಾರೆ. ಒಟ್ಟು 17 ಫಿವರ್ ಕ್ಲಿನಿಕ್ ಸೆಂಟರ್ ಇದ್ದು, 15,527 ಜನರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗಿದೆ. 19 ಗಂಟಲು ದ್ರವ ಮಾದರಿ ಸಂಗ್ರಹ ಕೇಂದ್ರಗಳಿದ್ದು, 2944 ಮಾದರಿಗಳು ಸಂಗ್ರಹಣೆಯಾಗಿರುತ್ತವೆ. ನಿನ್ನೆಯವರೆಗೆ 31 ಪ್ರಕರಣಗಳು ಕಂಡು ಬಂದಿರುತ್ತವೆ. 2,621 ನೆಗೆಟಿವ್ ಬಂದಿದ್ದು, 233 ಫಲಿತಾಂಶ ಬರಬೇಕಾಗಿರುತ್ತದೆ. ಪ್ರಸ್ತುತ ಜಿಲ್ಲೆಯಲ್ಲಿ 5,509 ಜನರು ಹೋಂ ಕ್ವಾರಂಟೈನ್ ನಲ್ಲಿದ್ದಾರೆ ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ| ಪದ್ಮಾವತಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಿ. ಚಿದಾನಂದಪ್ಪ, ವೈದ್ಯರಾದ ಡಾ| ಮಧುಕುಮಾರ್, ಡಾ|
ಚೆನ್ನಬಸವರಾಜು, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಹನುಮಂತಪ್ಪ, ಆರೋಗ್ಯ ಶಿಕ್ಷಣಾಧಿಕಾರಿ ಮೂಗಪ್ಪ, ಆರ್. ಆರ್. ತಂಡದ ಮೇಲ್ವಿಚಾರಕರಾದ ಓ. ಶ್ರೀನಿವಾಸ್, ವೈ. ತಿಪ್ಪೇಸ್ವಾಮಿ, ಅರುಣ್‌ಕುಮಾರ್, ಪ್ರವೀಣ್‌ಬಾಬು ಮೊದಲಾದವರು ಇದ್ದರು.