Advertisement

ಆಧಾರ್‌ ಕಾರ್ಡ್‌ ಮಾಡ್ಸೋಕೆ ಪಡಿಪಾಟಲು

11:47 AM Jul 11, 2019 | Naveen |

ಎಸ್‌. ರಾಜಶೇಖರ
ಮೊಳಕಾಲ್ಮೂರು:
ಪಟ್ಟಣದ ಪ್ರಗತಿಕೃಷ್ಣ ಗ್ರಾಮೀಣ ಬ್ಯಾಂಕ್‌ನಲ್ಲಿ ಆಧಾರ್‌ ಕಾರ್ಡ್‌ ಮಾಡಿಸಲು ಹಾಗೂ ಟೋಕನ್‌ ಪಡೆಯಲು ಜನಸಾಮಾನ್ಯರು ಹರಸಾಹಸ ಪಡುವಂತಾಗಿದೆ.

Advertisement

ತಾಲೂಕಿನಲ್ಲಿ ಬಹುತೇಕ ಜನರು ತಮ್ಮ ಮಕ್ಕಳ ಶಿಕ್ಷಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷೆಯ ಹಲವಾರು ಯೋಜನೆಗಳನ್ನು ಪಡೆಯಲು ಆಧಾರ್‌ ಕಾರ್ಡ್‌ ಅಗತ್ಯವಾಗಿದೆ. ಈಗಾಗಲೇ ನೀಡಿರುವ ಬಹುತೇಕರ ಆಧಾರ್‌ ಕಾರ್ಡ್‌ಗಳಲ್ಲಿ ಹೆಚ್ಚಾಗಿ ತಿದ್ದುಪಡಿಗಾಗಿ ಮತ್ತು ಹೊಸದಾಗಿ ಆಧಾರ್‌ ಕಾರ್ಡ್‌ಗಳನ್ನು ಪಡೆಯಲು ಪ್ರತಿನಿತ್ಯ ಆಧಾರ್‌ ಕಾರ್ಡ್‌ಗಳ ಕೌಂಟರ್‌ಗಳಿಗೆ ಅಲೆಯುವಂತಾಗಿದೆ. ತಾಲೂಕಿನ ಕಸಬಾ ಮತ್ತು ದೇವಸಮುದ್ರ ಹೋಬಳಿಗಳಲ್ಲಿ ತೆರೆದ ಕೌಂಟರ್‌ಗಳಲ್ಲಿ ಪ್ರತಿನಿತ್ಯ ವೃದ್ಧರು, ಶಾಲಾ ಮಕ್ಕಳು, ಹೆಣ್ಣುಮಕ್ಕಳು ಅಲೆಯುವಂತಾಗಿದೆ. ಕಸಬಾ ಹೋಬಳಿಯ ಜನರಿಗಾಗಿ ಪಟ್ಟಣದ ತಾಲೂಕು ಕಚೇರಿ ಮತ್ತು ಪ್ರಗತಿಕೃಷ್ಣ ಗ್ರಾಮೀಣ ಬ್ಯಾಂಕ್‌ನಲ್ಲಿ ಕೌಂಟರ್‌ಗಳನ್ನು ತೆರೆಯಲಾಗಿದೆ. ನೂರಾರು ಫಲಾನುಭವಿಗಳು ಮತ್ತು ದೇವಸಮುದ್ರ ಹೋಬಳಿಯ ಜನರಿಗೆ ಕೇವಲ ಒಂದೇ ಕೌಂಟರ್‌ ಅನ್ನು ರಾಂಪುರದ ನಾಡಕಚೇರಿಯಲ್ಲಿ ತೆರೆಯಲಾಗಿದೆ. ಇದರಿಂದ ಜನಸಾಮಾನ್ಯರು ಆಧಾರ್‌ ಕಾರ್ಡ್‌ಗಳನ್ನು ಪಡೆಯಲು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಆಧಾರ್‌ ಕಾರ್ಡ್‌ಗಾಗಿ ದೂರದ ಗ್ರಾಮಗಳಿಂದ ನೂರಾರು ರೂ. ವ್ಯಯ ಮಾಡಿಕೊಂಡು ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಆಧಾರ್‌ ಕಾರ್ಡ್‌ ಕೌಂಟರ್‌ ಗಳಿಗೆ ಅಲೆದಾಡುವಂತಾಗಿದೆ.

ಪಟ್ಟಣದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನ ಕೌಂಟರ್‌ನಲ್ಲಂತೂ ಆಧಾರ್‌ ಕಾರ್ಡ್‌ ಸಮಸ್ಯೆ ಮಿತಿ ಮೀರಿದೆ. ಈ ಕೌಂಟರ್‌ನಲ್ಲಿ ವಾರಕ್ಕೊಮ್ಮೆ ಟೋಕನ್‌ ನೀಡುತ್ತಿರುವುದರಿಂದ ಕೇವಲ ಟೋಕನ್‌ ಪಡೆಯಲು ಗ್ರಾಮೀಣ ಭಾಗದ ಜನರು ಮತ್ತು ಪಟ್ಟಣದ ಜನರು ಬೆಳಗಿನ ಜಾವ 3 ಗಂಟೆಗೆ ಆಗಮಿಸಿ ಸರತಿ ಸಾಲಲ್ಲಿ ನಿಲ್ಲುವ ದುಸ್ಥಿತಿ ನಿರ್ಮಾಣವಾಗಿದೆ. ಹಾಗೆಯೇ ರಾಂಪುರ ನಾಡಕಚೇರಿಯಲ್ಲಿಯೂ ಇದೇ ಸ್ಥಿತಿ ಇದೆ.

ಟೋಕನ್‌ ಪಡೆದವರಿಗೆ ತಕ್ಷಣ ಆಧಾರ್‌ ಕಾರ್ಡ್‌ ಲಭ್ಯವಾಗದೆ ತಿಂಗಳುಗಳ ಕಾಲ ಕಚೇರಿಗೆ ಅಲೆಯುವಂತಾಗಿದೆ. ಆಧಾರ್‌ ಕಾರ್ಡ್‌ ಪಡೆಯಲು ನಿತ್ಯವೂ ಕೌಂಟರ್‌ನಲ್ಲಿ ಟೋಕನ್‌ ನೀಡಿದರೆ ತ್ವರಿತವಾಗಿ ಆಧಾರ್‌ ಕಾರ್ಡ್‌ ನೀಡಬಹುದು. ಆದರೆ ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ತಾಲೂಕಿನಲ್ಲಿ ಆಧಾರ್‌ ಕಾರ್ಡ್‌ಗಾಗಿ ಹೆಚ್ಚಿನ ಕೌಂಟರ್‌ಗಳನ್ನು ತೆರೆದು ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next