ಮೊಳಕಾಲ್ಮೂರು: ಪಟ್ಟಣ ಪಂಚಾಯತ್‌ದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಪಟ್ಟಣವನ್ನು ಅಭಿವೃದ್ಧಿಪಡಿಸಲಾಗುವುದು. ಅದಕ್ಕಾಗಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಶಾಸಕ ಬಿ. ಶ್ರೀರಾಮುಲು ಮನವಿ ಮಾಡಿದರು.
ಪಟ್ಟಣದ 10ನೇ ವಾರ್ಡ್‌ನ ಗಿರಿಯಜ್ಜನಹಟ್ಟಿ ಮತ್ತು ಮಾರುತಿ ಬಡಾವಣೆಯಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಅವರು ಮಾತನಾಡಿದರು.
ಈಗಾಗಲೇ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆದಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನವನ್ನು ನೇರವಾಗಿ ಪಟ್ಟಣ ಪಂಚಾಯತ್‌ಗೆ ಕೊಡಿಸಿ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಸುಮಾರು 25 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಪಪಂನಲ್ಲಿ ಅಧಿಕಾರ ನಡೆಸುತ್ತಿದೆ. ಸಾಕಷ್ಟು ಭ್ರಷ್ಟಾಚಾರವನ್ನು ಎಸಗಿರುವ ಆರೋಪ ಕೇಳಿ ಬಂದಿದೆ. ಕಾಂಗ್ರೆಸ್ ದುರಾಡಳಿತದಿಂದ ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಅಭಿವೃದ್ಧಿ ಕಾರ್ಯ ಕೈಗೊಳ್ಳದೆ ಜನ ವಿರೋಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಭ್ರಷ್ಟಾಚಾರ ಮಾಡಿದ್ದರಿಂದ ಬಂದ ಹಣದಲ್ಲಿ ಪಪಂ ಚುನಾವಣೆ ಗೆಲ್ಲಲು ಮುಂದಾಗಿರುವ ಕಾಂಗ್ರೆಸ್ ಅಭ್ಯರ್ಥಿಯನ್ನು ತಿರಸ್ಕರಿಸಬೇಕು. ಬಡವರ ಪರ ಕಾಳಜಿ ಹೊಂದಿರುವ ಬಿಜೆಪಿ ಅಭ್ಯರ್ಥಿ ಕೆ.ತಿಪ್ಪೇಸ್ವಾಮಿ ಅವರನ್ನು ಗೆಲ್ಲಿಸಬೇಕು ಎಂದು ಕೋರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್. ನವೀನ್ ಮಾತನಾಡಿದರು. ಬಿಜೆಪಿ ಅಲ್ಪಸಂಖ್ಯಾತ ರಾಜ್ಯ ಘಟಕದ ಟಿಪ್ಪೂಸುಲ್ತಾನ್, ಜಿಪಂ ಸದಸ್ಯ ಓಬಳೇಶ್, ತಾಪಂ ಸದಸ್ಯ ಎಸ್. ತಿಪ್ಪೇಸ್ವಾಮಿ, ಆರ್‌ಎಸ್‌ಎಸ್ ತಾಲೂಕು ಪ್ರಮುಖ್ ಡಾ| ಪಿ.ಎಂ. ಮಂಜುನಾಥ, ಕೆ. ತಿಪ್ಪೇಸ್ವಾಮಿ, ಅಬಿದ್, ಡಿ.ಎಂ. ಈಶ್ವರಪ್ಪ, ಸರ್ವಮಂಗಳ, ನಾಗರಾಜ್, ಶಾಂತಾರಾಂ ಬಸಾಪತಿ, ಚಂದ್ರಶೇಖರ ಗೌಡ, ಪಿ.ಎಂ. ಚಂದ್ರಶೇಖರ, ಸಂಜೀವ, ಪರಮೇಶ್ವರ್, ವಿನಯ್‌ಕುಮಾರ್, ಲಕ್ಷ್ಮಣ, ವದ್ದಿ ಆಂಜನೇಯ, ಕೆ. ಬಸಣ್ಣ, ಡಿ.ಜಿ. ಮಂಜುನಾಥ, ಗುಂಡ್ಲೂರು ಕರಿಯಣ್ಣ, ಹೊನ್ನೂರು ಗೋವಿಂದಪ್ಪ, ಸಣ್ಣ ತಿಪ್ಪೇಸ್ವಾಮಿ, ಸುರೇಶ್, ನರಸಿಂಹಪ್ಪ, ಮೋಹನ ಕನಕ, ರಮೇಶ್ ಮತ್ತಿತರರು ಇದ್ದರು.