ಮೊಳಕಾಲ್ಮೂರು: ಪೌಷ್ಟಿಕ ಆಹಾರ ಸೇವನೆಯಿಂದ ಸದೃಢ ದೇಶ ಹಾಗೂ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧಿಧೀಶ ಸಂದೇಶ ವಿ. ಭಂಡಾರಿ ಹೇಳಿದರು.
ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಶು ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೌಷ್ಟಿಕ ಆಹಾರದ ಕೊರತೆಯಿಂದ ಮಹಿಳೆಯರು ಮತ್ತು ಮಕ್ಕಳು ಹಲವಾರು ಕಾಯಿಲೆಗಳಿಗೆ ತುತ್ತಾಗಿ ಪ್ರಾಣಾಪಾಯಕ್ಕೀಡಾಗುತ್ತಿರುವುದು ಅಪಾಯಕಾರಿ ಸಂಗತಿ. ಪೌಷ್ಟಿಕ ಆಹಾರದ ಕೊರತೆಯನ್ನು ನೀಗಿಸಲು ಆಹಾರದ ಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕು. ಅಪೌಷ್ಟಿಕತೆ ಹೋಗಲಾಡಿಸಿ ಸದೃಢ ಸಮಾಜ ನಿರ್ಮಾಣ ಮಾಡಬೇಕಾಗಿದೆ. ಅಪೌಷ್ಟಿಕತೆಯ ನಿವಾರಣೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಮಕ್ಕಳಿಗೆ ಮತ್ತು ಹೆಣ್ಣುಮಕ್ಕಳಿಗೆ ಪೌಷ್ಟಿಕ ಆಹಾರ ಸೌಲಭ್ಯವನ್ನು ಕಲ್ಪಿಸಲಾಗಿದೆ. ಪ್ರತಿಯೊಬ್ಬರೂ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೋಪಾಲಪ್ಪ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಪೌಷ್ಠಿಕ ಆಹಾರ ಸೇವನೆ ಮಾಡಬೇಕಾಗಿದೆ.ಆರು ವರ್ಷದೊಳಗಿನ ಮಕ್ಕಳು ಸದೃಢರಾಗಿ ಬಲಶಾಲಿಗಳಾಗಬೇಕಾದರೆ ಗರ್ಭಿಣಿಯರು ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಸಂರಕ್ಷಿಸಲು ಸೂಚನೆ ನೀಡಲಾಗಿದೆ.ಆರೋಗ್ಯ ಮತ್ತು ನೈಪುಣ್ಯತೆಯಿಂದ ಅಪೌಷ್ಟಿಕತೆಯನ್ನು ನಿವಾರಿಸಲು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕಾಗಿದೆ. ಆರು ವರ್ಷದೊಳಗಿನ ಮಕ್ಕಳನ್ನು ಮಕ್ಕಳ ತಜ್ಞರಿಂದ ಪರೀಕ್ಷೆಗೊಳಪಡಿಸಿ ಪುನರ್ವಸತಿ ಕೇಂದ್ರಗಳ ಮೂಲಕ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ವಲಸಿಗ ಮಕ್ಕಳಿಗೂ ಆರೋಗ್ಯ ಶಿಬಿರಗಳನ್ನು ತೆರೆದು ಆರೋಗ್ಯ ತಪಾಸಣೆ ನಡೆಸಿ ಅಪೌಷ್ಟಿಕತೆ ನಿರ್ಮೂಲನೆಗೆ ಶ್ರಮಿಸಲಾಗುತ್ತಿದೆ ಎಂದರು.
ವಕೀಲ ವಿ. ಸುರೇಶ್ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಅಭಿಯೋಜಕ ಲಿಂಗೇಶ್ವರ, ವಕೀಲರ ಸಂಘದ ಅಧ್ಯಕ್ಷ ಪಿ. ಪಾಪಯ್ಯ, ಕಾರ್ಯದರ್ಶಿ ಮಂಜುನಾಥ, ವಕೀಲರಾದ ಪಿ.ಜಿ. ವಸಂತಕುಮಾರ್, ವಿ.ಡಿ. ರಾಘವೇಂದ್ರ, ಅನಂತಮೂರ್ತಿ, ವಿನೋದ, ತಿಮ್ಮಣ್ಣ ಮತ್ತಿತರರು ಭಾಗವಹಿಸಿದ್ದರು.