ಮೊಳಕಾಲ್ಮೂರು: ಪ್ರತಿಯೊಬ್ಬ ನಾಗರಿಕರು ಮಾನವೀಯತೆ ಹಾಗೂ ಸಮಾನತೆಯಿಂದ ಬದುಕುವುದು ಸಂವಿಧಾನದ ಪ್ರಮುಖ ಆಶಯವಾಗಿದೆ ಎಂದು ಚಳ್ಳಕೆರೆ ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಾಧಿಧೀಶ ದೇವೇಂದ್ರ ಪಂಡಿತ್ ಹೇಳಿದರು.
ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ , ವಕೀಲರ ಸಂಘ, ಕಾರ್ಮಿಕ ಇಲಾಖೆ, ಸಾರಿಗೆ ಇಲಾಖೆ , ಪೊಲೀಸ್ ಇಲಾಖೆ ಹಾಗೂ ಕಾರ್ಮಿಕರ ಸಂಘಟನೆ ಮೊಳಕಾಲ್ಮೂರು ಇವುಗಳ ಸಹಯೋಗದೊಂದಿಗೆ ಕಾರ್ಮಿಕರ ದಿನಾಚರಣೆ ಅಂಗವಾಗಿ ಬುಧವಾರ ಆಯೋಜಿಸಿದ್ದ ಸರಕು ಸಾಗಣೆ ವಾಹನಗಳಲ್ಲಿ ಕಾರ್ಮಿಕರನ್ನು ಸಾಗಿಸುವುದು ಹಾಗೂ ಶಾಲಾ ಮಕ್ಕಳನ್ನು ಸಾಗಿಸುವುದು ಕಾನೂನು ಬಾಹಿರ ವಿಷಯ ಕುರಿತ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಜೀವಕ್ಕೆ ನಾವೇ ಜವಾಬ್ದಾರರಾಗಿದ್ದು, ಕುಟುಂಬದ ನಿರ್ವಹಣೆಗಾಗಿ ಕಾನೂನು ಪರಿಪಾಲನೆ ಮಾಡಬೇಕಾಗಿದೆ. ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ಮಾತ್ರ ಲಭಿಸಿದ್ದು ಆರ್ಥಿಕ, ಮಾನಸಿಕ ಸ್ವಾತಂತ್ರ್ಯ ಸೇರಿದಂತೆ ಇನ್ನಿತರ ಸ್ವಾತಂತ್ರ್ಯಗಳು ದೊರೆಯಬೇಕಾಗಿವೆ. ನಮ್ಮಿಂದ ಮತ್ತೂಬ್ಬರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನಡೆದುಕೊಳ್ಳಬೇಕು ಎಂದರು.
ಪ್ರಸ್ತುತ ದಿನಮಾನದಲ್ಲಿ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಮತ್ತು ಕಾರುಗಳ ಸಂಚಾರ ಹೆಚ್ಚಾಗಿದೆ. ಆದ್ದರಿಂದ ವಾಹನ ಚಾಲಕರು ರಸ್ತೆ ನಿಯಮಗಳನ್ನು ಪಾಲಿಸಿ ವಾಹನ ಚಲಾಯಿಸಬೇಕಾಗಿದೆ. ವಾಹನ ಚಾಲಕರು ಕಡ್ಡಾಯವಾಗಿ ಚಾಲನಾ ಪರವಾನಗಿ, ವಿಮಾ, ಆರ್‌ಸಿ ಸೇರಿದಂತೆ ಇನ್ನಿತರ ಅಗತ್ಯ ದಾಖಲಾತಿಗಳನ್ನು ಹೊಂದಿರಬೇಕು. ಅಗತ್ಯ ದಾಖಲೆಗಳಿಲ್ಲದೆ ವಾಹನ ಚಲಾಯಿಸುವುದು ಕಾನೂನು ಪ್ರಕಾರ ಅಪರಾಧ. ಅಸಂಘಟಿತ ಕಾರ್ಮಿಕರು ಕಾರ್ಮಿಕ ಇಲಾಖೆಯಿಂದ ಗುರುತಿನ ಚೀಟಿಯನ್ನು ಪಡೆದು ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಚಳ್ಳಕೆರೆ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧಿಧೀಶ ಕೋಟೆಪ್ಪ ಕಾಂಬ್ಳೆ ಮಾತನಾಡಿ, ಸರಕು ಸಾಗಣೆ ವಾಹನಗಳಲ್ಲಿ ವಿದ್ಯಾರ್ಥಿಗಳನ್ನು ಮತ್ತು ಕಾರ್ಮಿಕರನ್ನು ಸಾಗಾಣಿಕೆ ಮಾಡುವುದು ಕಾನೂನು ಪ್ರಕಾರ ಅಪರಾಧವಾಗುತ್ತದೆ. ಇಂತಹ ವಾಹನಗಳಲ್ಲಿ ಸಾರ್ವಜನಿಕರು ಪ್ರಯಾಣ ಮಾಡುವಾಗ ಅಪಘಾತವಾದರೆ ಮೋಟಾರು ವಾಹನ ಕಾಯ್ದೆಯಡಿ ಸರ್ಕಾರದಿಂದ ಯಾವುದೇ ಪರಿಹಾರ ಸಿಗುವುದಿಲ್ಲ ಎಂದರು.
ವೃತ್ತ ನಿರೀಕ್ಷಕ ಮಂಜುನಾಥ ಗೌಡ ಮಾತನಾಡಿ, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ರಸ್ತೆಗಳು ಪೂರಕವಾಗಿವೆ. ರಸ್ತೆಗಳು ಸಾರ್ವಜನಿಕ ಆಸ್ತಿಯಾಗಿದ್ದು, ವಾಹನ ಚಾಲಕರು ಚಾಲನಾ ಪರವಾನಗಿ , ವಿಮೆ ಹಾಗೂ ಆರ್‌ಸಿ ಇನ್ನಿತರ ದಾಖಲೆಗಳನ್ನು ಇಟ್ಟುಕೊಂಡಿರಬೇಕು. ರಸ್ತೆ ನಿಯಮಗಳನ್ನು ಪಾಲಿಸಿ ಯಾವುದೇ ಅಪಘಾತವಾಗದಂತೆ ವಾಹನ ಚಲಾಯಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಪ್ರಭಾರಿಅಧ್ಯಕ್ಷ ಪಾಪಯ್ಯ, ಕಾರ್ಯದರ್ಶಿ ಮಂಜುನಾಥ, ಕಾರ್ಮಿಕ ನಿರೀಕ್ಷಕ ಶೇಕ್ ಶಫೀವುಲ್ಲಾಸ, ಸಿಪಿಐ ತಾಲೂಕು ಪ್ರಧಾನ ಕಾರ್ಯದರ್ಶಿ ಜಾಫರ್ ಶರೀಫ್, ವಕೀಲರಾದ ಪಿ.ಜಿ. ವಸಂತಕುಮಾರ್, ಎಂ.ಎನ್. ವಿಜಯಲಕ್ಷ್ಮೀ, ವಿ.ಡಿ. ರಾಘವೇಂದ್ರ, ರಾಮಾಂನೇಯ ಮತ್ತಿತರರು ಭಾಗವಹಿಸಿದ್ದರು.