Advertisement

ತಂಬಾಕು ಮುಕ್ತ ಸಮಾಜಕ್ಕೆ ಕೈ ಜೋಡಿಸಿ

04:20 PM May 31, 2019 | Naveen |

ಮೊಳಕಾಲ್ಮೂರು: ಸಮಾಜದಲ್ಲಿರುವ ಜನರ ಮೇಲೆ ಆರೋಗ್ಯದ ದುಷ್ಪರಿಣಾಮ ಬೀರದಂತೆ ಆರೋಗ್ಯವಂತ ಸಮಾಜಕ್ಕಾಗಿ ತಂಬಾಕು ಮುಕ್ತ ಸಮಾಜಕ್ಕೆ ಕೈ ಜೋಡಿಸಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಎಸ್‌. ನಿರ್ಮಲಾ ಹೇಳಿದರು.

Advertisement

ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ ಮೊಳಕಾಲ್ಮೂರು ಸಹಯೋಗದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನೋತ್ಸವ ಅಂಗವಾಗಿ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮದ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಬೇಕು. ಸರ್ಕಾರವು ತಂಬಾಕು ಸೇವನೆ ಕಡಿಮೆ ಮಾಡಲು ಹಲವಾರು ಕಾನೂನು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲು ಚಿಂತನೆ ನಡೆಸಿದೆ ಎಂದರು.

ತಂಬಾಕು ಸೇವನೆಯಿಂದ ಶ್ವಾಸಕೋಶದ ಕ್ಯಾನ್ಸರ್‌, ಹೃದಯ ರೋಗ, ಕಿಡ್ನಿ ಇನ್ನಿತರೆ ಅಂಗಾಂಗಗಳ ವೈಫಲ್ಯಕ್ಕೀಡಾಗಿ ಸಾಕಷ್ಟು ಸಾವು ನೋವಿಗೆ ಕಾರಣವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆಯಿಂದ ಸುತ್ತಮುತ್ತಲಿನವರ ಮೇಲೆ ಅನಾರೋಗ್ಯದ ದುಷ್ಪರಿಣಾಮ ಬೀರಲಿದೆ. ತಂಬಾಕು ಸೇವನೆಯಿಂದ ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರಲಿದೆ. ಹೀಗಾಗಿ ಸಾರ್ವಜನಿಕ ಸ್ಥಳಗಳು, ಸಾರ್ವಜನಿಕರು ಪ್ರಯಾಣಿಸುವ ವಾಹನಗಳಲ್ಲಿ ಬೀಡಿ , ಸಿಗರೇಟ್ ಸೇವನೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.

ತಂಬಾಕು ಸೇವನೆ ಕಡಿಮೆ ಮಾಡಲು ದುಷ್ಪರಿಣಾಮದ ಬಗೆಗಿನ ಚಿತ್ರಗಳನ್ನು ಪ್ರದರ್ಶಿಸಿ ಜಾಗೃತಿ ಮೂಡಿಸಬೇಕಾಗಿದೆ. ತಂಬಾಕು ಸೇವನೆ ಮಾಡುವ ಬಗ್ಗೆ ಮಾಧ್ಯಮಗಳು ಜಾಹೀರಾತು ನೀಡಲು ನಿಷೇಧಿಸಬೇಕು. ಜನರ ಆರೋಗ್ಯ ಕಾಪಾಡಲು ತಂಬಾಕು ಸೇವನೆ ಕಡಿಮೆಗೊಳಿಸಲು ಹಲವಾರು ಕಾನೂನುಗಳನ್ನು ಜಾಗೃತಿಗೊಳಿಸಿ ಆರೋಗ್ಯವಂತ ಜೀವನ ರೂಪಿಸಿಕೊಳ್ಳಬೇಕು ಎಂದರು.

Advertisement

ವಕೀಲ ಡಿ. ಬಸವರಾಜ್‌ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ನಿಷೇಧಿಸಲಾಗಿದೆ. ಗ್ರಾಮೀಣ ಪ್ರದೇಶದ ಜಮೀನುಗಳಲ್ಲಿ ಕೆಲ ರೈತರು ತಂಬಾಕನ್ನು ಬೆಳೆದು ಅನಧಿಕೃತವಾಗಿ ಮಾರಾಟ ಮಾಡುವುದು ಕಾನೂನು ಅಪರಾಧವಾಗಿದೆ. ಕಾನೂನಾತ್ಮಕವಾಗಿ ತಂಬಾಕನ್ನು ಬೆಳೆದು ಮಾರಾಟ ಮಾಡಬೇಕಾಗಿದೆ. ಜನರ ಆರೋಗ್ಯಕ್ಕೆ ಮಾರಕವಾಗಿರುವುದರಿಂದ ತಂಬಾಕನ್ನು ಸೇವನೆ ಮಾಡಬಾರದು. ತಂಬಾಕಿನಿಂದಾಗುವ ಗುಟ್ಕಾ, ಬೀಡಿ, ಸಿಗರೇಟ್ ಸೇವನೆಯಿಂದ ಆರೋಗ್ಯದ ಮೇಲೆ ಹಾನಿಯಾಗಲಿದೆ. ಇದರಿಂದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತವೆ. ಆರೋಗ್ಯವಂತ ಸದೃಢ ಸಮಾಜ ನಿರ್ಮಾಣ ಮಾಡಲು ತಂಬಾಕು ಸೇವನೆಯಿಂದ ದೂರವಿರಬೇಕು ಎಂದರು.

ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ| ಮಧುಕುಮಾರ್‌ ಮಾತನಾಡಿ, ಸಮಾಜದಲ್ಲಿ ಬಹುತೇಕರು ತಮಗೆ ಉಲ್ಲಾಸ ಮತ್ತು ಕ್ರಿಯಾಶೀಲರಾಗಿರಲು ತಂಬಾಕು ಸೇವನೆ ಮಾಡಲಾಗುತ್ತಿದೆ. ತಂಬಾಕಿನಿಂದ ಹಲವಾರು ರೂಪಗಳಿದ್ದು, ತಂಬಾಕು ಸೇವನೆಯಿಂದ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ತಂಬಾಕಿನಲ್ಲಿ ನಿಕೋಟಿನ್‌ ಎಂಬ ಅಂಶವಿರುವುದರಿಂದ ಇದು ಮೆದುಳು ಮತ್ತು ನರನಾಡಿಗಳನ್ನು ದುರ್ಬಲಗೊಳಿಸಿ ಹಲವಾರು ಮಾರಣಾಂತಿಕ ಕಾಯಿಲೆಗಳಿಗೆ ಎಡೆ ಮಾಡಿಕೊಡುತ್ತದೆ. ತಂಬಾಕು ಸೇವನೆಯಿಂದ ಕ್ಯಾನ್ಸರ್‌ ಹಾಗೂ ಇನ್ನಿತರ ಮಾರಣಾಂತಿಕ ಕಾಯಿಲೆಗಳು ಬರುವುದರಿಂದ ತಂಬಾಕು ಸೇವನೆಯಿಂದ ದೂರವಿರ ಬೇಕು ಎಂದರು.

ಸಹಾಯಕ ಸರ್ಕಾರಿ ಅಭಿಯೋಜಕ ಲಿಂಗೇಶ್ವರ, ವಕೀಲರ ಸಂಘದ ಪ್ರಭಾರೆ ಅಧ್ಯಕ್ಷ ಪಾಪಯ್ಯ, ವಕೀಲರಾದ ಎಂ.ಎನ್‌. ವಿಜಯಲಕ್ಷ್ಮೀ , ಪಿ.ಜಿ. ವಸಂತಕುಮಾರ್‌, ವಿನೋದ, ಚಂದ್ರಶೇಖರ್‌, ಕುಮಾರಪ್ಪ, ಆನಂದ, ಮಂಜುನಾಥ, ಅನಂತಮೂರ್ತಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next