Advertisement

ಬರದಿಂದ ಬೆಂದವರಿಗೆ ಉತ್ತರೆ ಆಸರೆ

12:56 PM Sep 28, 2019 | Naveen |

ಮೊಳಕಾಲ್ಮೂರು: ಸತತ ಬರಕ್ಕೆ ತುತ್ತಾಗುತ್ತಲೇ ಇರುವ ತಾಲೂಕಿನ ಜನರಿಗೆ ಕಳೆದ ಮೂರ್‍ನಾಲ್ಕು ದಿನಗಳ ಹಿಂದೆ ಸುರಿದ ಉತ್ತರೆ ಮಳೆ ಒಂದಿಷ್ಟು ಸಮಾಧಾನ ತಂದಿದೆ. ಪಟ್ಟಣ ಹಾಗೂ ತಾಲೂಕಿನ ವಿವಿಧೆಡೆ ಸುರಿದ ಮಳೆಯಿಂದ ಕೆರೆ-ಹಳ್ಳಗಳಲ್ಲಿ ನೀರು ಸಂಗ್ರಹಗೊಂಡಿದೆ.

Advertisement

ತಾಲೂಕಿನ ಫಕ್ಕುರ್ತಿ, ಅಶೋಕಸಿದ್ದಾಪುರ, ಗೌರಸಮುದ್ರ ಕೆರೆ, ಚಿಕ್ಕನಹಳ್ಳಿ, ಭಟ್ರಹಳ್ಳಿ, ರಾಯಪುರ ಕೆರೆ, ಗುಂಡ್ಲೂರು, ಕೋನಸಾನಗರ ಕೆರೆ ಸೇರಿದಂತೆ ಪಟ್ಟಣದ ಕೂಗೆಗುಡ್ಡದ ಕೆರೆ, ದವಳಪ್ಪನಕುಂಟೆ, ಊರುಬಾಗಿಲಹೊಂಡ ಹಾಗೂ ಇನ್ನಿತರ ಕೆರೆ ಕುಂಟೆಗಳಿಗೆ ಅಲ್ಪ ಪ್ರಮಾಣದ ನೀರು ಸಂಗ್ರಹಗೊಂಡಿದೆ. ಹಲವಾರು ವರ್ಷಗಳಿಂದ ಸಕಾಲದಲ್ಲಿ ಉತ್ತಮವಾಗಿ ಮಳೆಯಾಗದ ಕಾರಣ ಅಂತರ್ಜಲ ಮಟ್ಟ ಕಡಿಮೆಯಾಗಿ ಕುಡಿಯುವ ಹನಿ ನೀರಿಗೂ ಪರದಾಡುವಂತಾಗಿತ್ತು.

ಪಟ್ಟಣದಲ್ಲಿ ಕಳೆದ ಬಾರಿ ಯಾವ ಕೆರೆಗಳಿಗೂ ನೀರು ಬಾರದ ಕಾರಣ ಪಟ್ಟಣದ ಜನರು ರಂಗಯ್ಯನದುರ್ಗ ಜಲಾಶಯದ ನೀರನ್ನೇ ನೆಚ್ಚಿಕೊಂಡು ನೀರಿನ ದಾಹ ತಣಿಸಿಕೊಳ್ಳುವಂತಾಗಿತ್ತು. ಪಟ್ಟಣದ ದವಳಪ್ಪನಕುಂಟೆಗೆ ಸಾಧಾರಣ ಮಟ್ಟದಲ್ಲಿ ನೀರು ಬಂದಿದ್ದು ಅಂತರ್ಜಲ ಮಟ್ಟ ಹೆಚ್ಚಾಗಬಹುದು ಎಂಬ ನಿರೀಕ್ಷೆ ಹೊಂದಲಾಗಿದೆ.

ದವಳಪ್ಪನಕುಂಟೆಗೆ ಭೇಟಿ: ಪಟ್ಟಣ ಪಂಚಾಯತ್‌ ಮುಖ್ಯಾ ಧಿಕಾರಿ ಕಾಂತರಾಜ್‌ ದವಳಪ್ಪನ ಕುಂಟೆಗೆ ಭೇಟಿ ನೀಡಿ ನೀರಿನ ಪ್ರಮಾಣವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಟ್ಟಣ ವ್ಯಾಪ್ತಿಯ ದವಳಪ್ಪನಕುಂಟೆ, ಕೂಗೆಗುಡ್ಡದ ಕೆರೆ, ಊರುಬಾಗಿಲ ಹೊಂಡ ಹಾಗೂ ಇನ್ನಿತರ ಹಳ್ಳಗಳಿಗೆ ಉತ್ತರೆ ಮಳೆಯಿಂದ ನೀರು ಬಂದಿದೆ. ಇದರಿಂದ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಅನುಕೂಲವಾಗಲಿದೆ.

ಈಗಾಗಲೇ ಪಟ್ಟಣ ವ್ಯಾಪ್ತಿಯಲ್ಲಿ ಅಂತರ್ಜಲ ಕುಸಿತದಿಂದ ಕುಡಿಯುವ ನೀರು ಸರಬರಾಜು ಮಾಡುವ ಕೊಳವೆಬಾವಿಗಳು ಸ್ಥಗಿತವಾಗುವ ಭೀತಿ ಎದುರಾಗಿತ್ತು. ಉತ್ತರೆ ಮಳೆಯ ಆಗಮನದಿಂದ ಪಟ್ಟಣದ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬಹುದು ಎಂದರು.

Advertisement

ಪಟ್ಟಣದ ಘಟಗಿನಬೋರನಾಯಕನ ಹಟ್ಟಿಯ ಬಿ. ಗಿರಿಧರ ಮಾತನಾಡಿ, ದವಳಪ್ಪನಕುಂಟೆಯ ನೀರನ್ನು ಪಟ್ಟಣದ ಜನತೆಗೆ ಕುಡಿಯುವ ನೀರಿಗಾಗಿ
ಬಳಸಲಾಗುತ್ತಿದೆ. ಹಾಗಾಗಾಇ ಆ ಜಾಗದಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕಾಗಿದೆ. ಚಿಕನ್‌, ಮಟನ್‌, ಚರ್ಮದ ಅಂಗಡಿಯವರು ತ್ಯಾಜ್ಯ ಹಾಕುವುದರಿಂದ ನೀರು ಕುಡಿಯಲು ಯೋಗ್ಯವಾಗಿಲ್ಲ. ಈ ನೀರಿನ ಸೇವನೆಯಿಂದ ಕಾಯಿಲೆಗಳು ಹರಡುವ ಭೀತಿ ಎದುರಾಗಿದೆ. ತ್ಯಾಜ್ಯ ಹಾಕದಂತೆ ಸೂಕ್ತ ಕ್ರಮ ಕೈಗೊಂಡು ಅಂಥವರ ವಿರುದ್ಧ ದಂಡ ವಿ ಧಿಸಬೇಕು. ಗೃಹ ತ್ಯಾಜ್ಯ ಹಾಕುವುದರಿಂದ ಹೂಳು ತುಂಬುವುದರಿಂದ ತ್ಯಾಜ್ಯ ಹಾಕದಂತೆ ಕಾನೂನು ಕ್ರಮ ಕೈಗೊಂಡು ಈ ನೀರನ್ನು ಸಂರಕ್ಷಿಸಿ ಪಟ್ಟಣದ ಜನರಿಗೆ ಕುಡಿಯಲು ಪೂರೈಕೆ ಮಾಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಪಂ ಸದಸ್ಯ ಮಂಜಣ್ಣ, ಇಂಜಿನಿಯರ್‌ ವಿಶ್ವನಾಥ, ಮುಖಂಡರಾದ ಪಿ.ಆರ್‌. ಸಿದ್ದಣ್ಣ, ಶಿವಲಿಂಗ, ಗೋಪಾಲ, ಅರ್ಜುನ, ಭೀಮಣ್ಣ, ಗುತ್ತಿಗೆದಾರ ಬಸವ ರೆಡ್ಡಿ ಹಾಗೂ ಪಪಂ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next