ಮೊಳಕಾಲ್ಮೂರು: ಪ್ರತಿಯೊಂದು ಕುಟುಂಬದ ಸದಸ್ಯರು ಆಯುಷ್ಮಾನ್ ಭಾರತ್ ಕಾರ್ಡ್ ಸೌಲಭ್ಯ ಪಡೆದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಕೆ. ಚಂದ್ರಶೇಖರ್ ಕರೆ ನೀಡಿದರು.
ಪಟ್ಟಣದ ಶಿವ ಸದನದಲ್ಲಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಚಿತ್ರದುರ್ಗ ಹಾಗೂ ಪಟ್ಟಣ ಪಂಚಾಯತ್ ಮೊಳಕಾಲ್ಮೂರು ಸಹಯೋಗದೊಂದಿಗೆ ಆಯೋಜಿಸಿದ್ದ ರಾಷ್ಟ್ರೀಯ ಪೋಷಣ್ ಅಭಿಯಾನ ಮಾಸಾಚರಣೆ ಹಾಗೂ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದು ಮಗುವಿಗೆ ಅಪೌಷ್ಟಿಕತೆ ಕಾಡದಂತೆ ಕಾಳಜಿ ವಹಿಸುವುದು ಈ ಅಭಿಯಾನದ ಮುಖ್ಯ ಧ್ಯೇಯ. ಪ್ರತಿಯೊಂದು ಬಡ ಕುಟುಂಬದ ಸದಸ್ಯರು ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಪಡೆದು ಗಂಭೀರ ಕಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ.
ಗರ್ಭಕೋಶದ ತೊಂದರೆ ಹಾಗೂ ಇನ್ನಿತರ ಗಂಭೀರ ಕಾಯಿಲೆಗಳಿಗೆ ಉಚಿತ ಶಸ್ತ್ರಚಿಕಿತ್ಸೆಯ ಸೌಲಭ್ಯ ಪಡೆದು ಗುಣಮುಖರಾಗಿ ಆರೋಗ್ಯವಂತರಾಗಬಹುದು. ಖಾಸಗಿ ಆಸ್ಪತ್ರೆಗಳಲ್ಲೂ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್‌ನಿಂದ ನಾನಾ ಕಾಯಿಲೆಗಳಿಗೆ ರಿಯಾಯತಿ ದರದಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯ ಆರೋಗ್ಯ ಕಾರ್ಡ್‌ನಿಂದ ಸುಮಾರು 1700 ಕಾಯಿಲೆಗಳಿಗೆ ಚಿಕಿತ್ಸೆ ಪಡೆದು ರೋಗಗಳನ್ನು ನಿವಾರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿ ಕಾರಿ ಡಾ|ಪದ್ಮಾವತಿ ಮಾತನಾಡಿ, ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೊಳಿಸಿದೆ. ರಾಜ್ಯ ಸರ್ಕಾರ ಸಹ ಆರೋಗ್ಯ ಕಾರ್ಡ್ ನೀಡುತ್ತಿತ್ತು.ಈಗ ರಾಜ್ಯ ಸರ್ಕಾರದ ಆರೋಗ್ಯ ಕಾರ್ಡ್ ತೆಗೆದು ಆಯುಷ್ಮಾನ್ ಭಾರತ್ ಕಾರ್ಡ್ ಸೌಲಭ್ಯ ಕಲ್ಪಿಸಲಾಗಿದೆ. ತಾಲೂಕಿನ ಪ್ರತಿಯೊಬ್ಬರು ತಮ್ಮ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯ ದಾಖಲೆಗಳನ್ನು ಆಸ್ಪತ್ರೆಯಲ್ಲಿನ ನಿಯೋಜಿತ ಸಿಬ್ಬಂದಿಗಳಿಗೆ ಸಲ್ಲಿಸಿ ತ್ವರಿತವಾಗಿ ಆರೋಗ್ಯ ಕಾರ್ಡ್ ಪಡೆಯಬೇಕೆಂದರು.
ಫೋಷಣ್ ಜಿಲ್ಲಾ ಅಭಿಯಾನದ ವ್ಯವಸ್ಥಾಪಕಿ ಹಾಗೂ ಕೌಶಲ್ಯ ಅಭಿವೃದ್ಧಿ ಇಲಾಖೆಯ ಕೆ. ಸೌಮ್ಯ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಆಯುಷ್ಮಾನ್ ಭಾರತ್ ಕಾರ್ಡ್ ಪಡೆದು ಸದ್ಬಳಕೆ ಮಾಡಿಕೊಳ್ಳಬೇಕು. ಸೆ. 25 ರಂದು ಪಟ್ಟಣ ಪಂಚಾಯತ್ ಕಾರ್ಯಾಲಯದಲ್ಲಿ ಬೆಳಿಗ್ಗೆ 9ಕ್ಕೆ ಅಗತ್ಯ ದಾಖಲೆಗಳನ್ನು ನೀಡಿ ಆಯುಷ್ಮಾನ್ ಭಾರತ್ ಕಾರ್ಡ್ನ್ನು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಚಳ್ಳಕೆರೆ ತಾಲೂಕು ಶಸ್ತ್ರಚಿಕಿತ್ಸಾ ತಜ್ಞ ಡಾ| ಸತೀಶ್ ಆದಿಮನಿ, ಚರ್ಮರೋಗ ತಜ್ಞೆ ಡಾ| ಪ್ರಜ್ವಲ್ ಎನ್. ಧನ್ಯ, ನಾಯಕನಹಟ್ಟಿಯ ಡಾ.| ನಾಗರಾಜ್, ಪಪಂ ಸದಸ್ಯರಾದ ಶುಭಾ, ಲೀಲಾವತಿ, ರೂಪಾ, ಭಾಗ್ಯಮ್ಮ, ಸವಿತಾ, ಚಿತ್ತಮ್ಮ, ಪದ್ಮಾವತಿ, ವಿಜಯಮ್ಮ, ಲಕ್ಷ್ಮೀದೇವಿ, ಪಪಂ ಮುಖ್ಯಾಧಿಕಾರಿ ಕಾಂತರಾಜ್, ಸಮುದಾಯ ಸಂಘಟಕಿ
ದಾಕ್ಷಾಯಣಮ್ಮ, ಜನಸಂಸ್ಥಾನ ಸಂಸ್ಥೆಯ ಪಿ. ವಿರೂಪಾಕ್ಷಪ್ಪ, ಪಪಂ ಆರೋಗ್ಯಾಧಿ ಕಾರಿ ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.