Advertisement
ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಸಹಕಾರ ರಂಗದ ಬೆಳವಣಿಗೆಗೆ ಅಹರ್ನಿಶಿ ದುಡಿದ ಮೊಳ ಹಳ್ಳಿ ಶಿವರಾಯರು ತನ್ನ ಸರ್ವಸ್ವವನ್ನು ಈ ರಂಗಕ್ಕೆ ಸಮರ್ಪಿಸಿದವರು. ಸಮಾಜ ಸೇವೆಯನ್ನು ತನ್ನ ಪರಮ ಗುರಿಯನ್ನಾಗಿಸಿಕೊಂಡ ಶಿವರಾಯರು ಜನಸೇವೆಗಾಗಿ ದುಡಿದು ಕಾರ್ಯ ಸಂಪನ್ನರಾಗಿ ದ್ದರು. ಇವರ ಪವಾಡ ಸದೃಶ ಕಾರ್ಯವೈಖರಿ ಯಿಂದ ಜಿಲ್ಲೆಯಲ್ಲಿ ಸಹಕಾರಿ ಚಳವಳಿ ಇಂದು ಬಲವಾಗಿ ಬೇರೂರಿದೆ. ಕಠಿನ ದುಡಿಮೆಯನ್ನೇ ಮೂಲಮಂತ್ರವನ್ನಾಗಿಸಿಕೊಂಡ ಶಿವರಾಯರು ಸಹಕಾರ ಆಂದೋಲನದ ಮೂಲ ಪುರುಷರು.
Related Articles
Advertisement
ಶಿವರಾಯರು ಮೊತ್ತ ಮೊದಲಿಗೆ ಹುಟ್ಟೂರಾದ ಪುತ್ತೂರಿನಲ್ಲಿ ಸಹಕಾರಿ ಕ್ರೆಡಿಟ್ ಸೊಸೈಟಿಯನ್ನು 1909ರಲ್ಲಿ ಸ್ಥಾಪಿಸಿದರು. ಸಹಕಾರ ಚಳವಳಿಯನ್ನು ಇನ್ನಷ್ಟು ಫಲಪ್ರದ ವನ್ನಾಗಿಸುವ ಇರಾದೆಯಿಂದ ಶಿವರಾಯರು ಹಳ್ಳಿ ಹಳ್ಳಿಗಳಿಗೂ ಸಂಚರಿಸಿ ಸಹಕಾರ ತತ್ತದ ಮಹತ್ವವನ್ನು ವಿವರಿಸಿ ಸಹಕಾರಿ ಸಂಘಗಳನ್ನು ಸ್ಥಾಪಿಸಿದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಸ್ಥಾಪನೆ: ಸ್ಥಾಪನೆಗೊಂಡ ಸಹಕಾರ ಸಂಘಗಳಿಗೆ ಆರ್ಥಿಕ ನೆರವನ್ನು ನೀಡುವ ಉದ್ದೇಶದಿಂದ ಒಂದು ಮಾತೃಸಂಸ್ಥೆಯ ಆವಶ್ಯಕತೆ ಇರುವುದನ್ನು ಮನ ಗಂಡ ಶಿವರಾಯರು 1914ರಲ್ಲಿ ಪುತ್ತೂರಿನಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ್ನು ಸ್ಥಾಪಿಸಿದರು, ಮುಂದೆ 1925ರಲ್ಲಿ ಜನತೆಯ ಅನುಕೂಲ ತೆಗೋಸ್ಕರ ಈ ಬ್ಯಾಂಕ್‌ನ್ನು ಜಿಲ್ಲಾ ಕೇಂದ್ರವಾದ ಮಂಗಳೂರಿಗೆ ಸ್ಥಳಾಂತರಿಸಲಾಯಿತು. ಶಿವ ರಾಯರಿಂದ ಸ್ಥಾಪನೆಗೊಂಡ ಈ ಬ್ಯಾಂಕ್ ಇಂದು 110 ವರ್ಷಗಳನ್ನು ಪೂರೈಸಿ ಸಹಕಾರ ಕ್ಷೇತ್ರದಲ್ಲಿ ಅಮೋಘ ಸಾಧನೆಯ ಮೂಲಕ ಗುರುತಿಸಿ ಕೊಂಡಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಶಿವರಾಯರ ಮಹತ್ವಾಕಾಂಕ್ಷೆಯ ಸಹಕಾರ ಕ್ಷೇತ್ರವನ್ನು ಈ ಬ್ಯಾಂಕ್ ಪ್ರಜ್ವಲಿಸುವಂತೆ ಮಾಡಿದೆ.
ಶಿವರಾಯರು ತಮ್ಮ 87 ವರ್ಷಗಳ ಜೀವಿತ ಅವಧಿಯಲ್ಲಿ 58 ವರ್ಷಗಳ ಕಾಲವನ್ನು ಸಹಕಾರ ರಂಗಕ್ಕೆ ಮೀಸಲಿಸಿದರು. ಮೊಳಹಳ್ಳಿ ಶಿವರಾ ಯರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹ ಕಾರಿ ಆಂದೋಲನದಲ್ಲಿ ಮಾಡಿದ ಸೇವೆ ಶ್ಲಾಘನೀಯ ಹಾಗೂ ಅಪ್ರತಿಮವಾದುದು. ಸಹಕಾರ ಆಂದೋಲನದ ಪೀಳಿಗೆಯೊಂದಕ್ಕೆ ಉಸಿರನ್ನು ನೀಡಿ ಜೀವನವಿಡೀ “ಸಹಕಾರ’ ಮಂತ್ರವನ್ನು ಜಪಿಸಿದ ಶಿವರಾಯರು 1967ರ ಜುಲೈ 4 ರಂದು ಕೀರ್ತಿಶೇಷರಾದರು. ಅವರ ಅವಿಸ್ಮರಣೀಯ ನೆನಪು ಸಹಕಾರಿಗಳೆಲ್ಲರಲ್ಲಿ ಸದಾ ಅಮರ.
-ಎಸ್.ಜಗದೀಶ್ಚಂದ್ರ ಅಂಚನ್, ಸೂಟರ್‌ಪೇಟೆ