ಕನ್ನಡದಲ್ಲಿ “ಮೋಕ್ಷ’ ಎಂಬ ಸಿನಿಮಾ ತಯಾರಾಗಿದ್ದು, ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಈ ಚಿತ್ರದ ಟೀಸರ್ ಡಿಸೆಂಬರ್ 24 ರಂದು ಬಿಡುಗಡೆಯಾಗಲಿದೆ. ಚಿತ್ರದ ವಿಶೇಷವೆಂದರೆ, ಸಾಫ್ಟ್ವೇರ್ ಮಂದಿ ಸೇರಿ ಈ ಚಿತ್ರ ಮಾಡಿದ್ದಾರೆ. ಕಾರ್ಪೋರೇಟ್ ಕಂಪೆನಿಗಳಿಗೆ ಜಾಹಿರಾತು ನಿರ್ದೇಶಿಸುವ ಮೂಲಕ ಅನುಭವ ಪಡೆದಿರುವ ಸಮರ್ಥ್ ನಾಯಕ್ ಚಿತ್ರದ ನಿರ್ದೇಶಕರು.
ಸಿನಿಮಾ ನಿರ್ದೇಶನಕ್ಕೂ ಮುನ್ನ ಅವರು, ಸುಮಾರು 300 ಕ್ಕೂ ಹೆಚ್ಚು ಕಾರ್ಪೋರೇಟ್ ಜಾಹಿರಾತುಗಳನ್ನು ನಿರ್ದೇಶಿಸಿದ್ದ ಸಾರೆ. ಆ ಅನುಭವದ ಮೇಲೆ ಈಗ “ಮೋಕ್ಷ’ ಸಿನಿಮಾ ಮಾಡಿದ್ದಾರೆ. “ಮೋಕ್ಷ’ ಚಿತ್ರದಲ್ಲಿ ಕಥೆಯೇ ನಾಯಕ ಮತ್ತು ನಾಯಕಿ. ಚಿತ್ರದ ಕುರಿತು ಹೇಳುವ ನಿರ್ದೇಶಕ ಸಮರ್ಥ್ ನಾಯಕ್, “ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಚಿತ್ರ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡಿರುವ ನನಗೆ ಇದು ಹೊಸ ಅನುಭವ.
ಚಿತ್ರದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳಿವೆಯಾದರೂ, ಅದನ್ನು ಪಕ್ಕಾ ಕಮರ್ಷಿಯಲ್ ಆಗಿಯೇ ಮಾಡಲಾಗಿದೆ. ಚಿತ್ರದಲ್ಲಿ ಮಾಸ್ಕ್ಮ್ಯಾನ್ ಒಬ್ಬನ ಕಥೆ ಚಿತ್ರದ ಹೈಲೈಟ್. ಮಾಸ್ಕ್ ಮ್ಯಾನ್ ಇಡೀ ಕಥೆಯ ಕೇಂದ್ರಬಿಂದು. ಜೊತೆಗೆ ನಾಯಕ, ನಾಯಕಿಯ ಲವ್‌ಸ್ಟೋರಿಯೂ ಇದೆ. ಅಂದಹಾಗೆ, ಚಿತ್ರದಲ್ಲಿ ಮಾಸ್ಕ್ಮ್ಯಾನ್‌ನ ಹಲವು ವಿಶೇಷತೆಗಳ ಮೂಲಕ ಚಿತ್ರ ಸಾಗಲಿದೆ. ಚಿತ್ರದಲ್ಲಿ ಹುಚ್ಚು ಪ್ರೀತಿ, ದ್ವೇಷ, ಅಸೂಯೆ, ಒಂಟಿತನ, ಹತಾಶೆ ಹೀಗೆ ಒಂದಷ್ಟು ವಿಷಯಗಳಿವೆ’ ಎನ್ನುತ್ತಾರೆ ಸಮರ್ಥ್ ನಾಯಕ್.
ನಾಯಕ ಮೋಹನ್ ಧನ್‌ರಾಜ್‌ಗೆ ಆರಾಧ್ಯ ಲಕ್ಷ್ಮಣ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ಹಾಸನ, ಕಾರವಾರ, ಗೋಕಾಕ್, ಗೋವಾ ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಿಸಲಾಗಿದ್ದು, ಚಿತ್ರಕ್ಕೆ ಗುರುಪ್ರಶಾಂತ್ ರೈ, ಜೋನ್ ಜೋಸೆಫ್ ಹಾಗು ಕಿರಣ್ ಹಂಪಾಪುರ ಛಾಯಾಗ್ರಹಣ ಮಾಡಿದ್ದಾರೆ. ಕಿಶನ್ ಮೋಹನ್ ಮತ್ತು ಸಚಿನ್ ಬಾಲು ಸಂಗೀತ ನೀಡಿದ್ದಾರೆ. ಜಯಂತ್ ಕಾಯ್ಕಿಣಿ, ಕುಮಾರ್ ದತ್ ಗೀತೆ ರಚಿಸಿದ್ದಾರೆ. ಚಿತ್ರದಲ್ಲಿ ತಾರಕ್ ಪೊನ್ನಪ್ಪ ತನಿಖಾಧಿಕಾರಿ ಪಾತ್ರ ಮಾಡಿದ್ದಾರೆ. ಭೂಮಿ, ಪ್ರಶಾಂತ್ ನಟನ ಇತರರು ಅಭಿನಯಿಸಿದ್ದಾರೆ.