ಶ್ರೀಶ ಬೆಳಕವಾಡಿ ಇದೇ ಮೊದಲ ಬಾರಿಗೆ ನಿರ್ದೇಶಿಸಿರುವ “ಮೋಜೊ’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಈ ಚಿತ್ರ ಬಿಡುಗಡೆಗೆ ಮುನ್ನವೇ ಸುದ್ದಿ ಮಾಡಿರುವುದು ವಿಶೇಷ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ “ಮೋಜೊ’ ಪ್ರಶಸ್ತಿ ಜತೆಗೆ ಮೆಚ್ಚುಗೆ ಪಡೆದಿದೆ.
ಅಮೇರಿಕ ಕನ್ನಡಿಗರಾದ ಗಜಾನನ್ ಭಟ್ ಮತ್ತು ಗೆಳೆಯರಾದ ಸತೀಶ ಪಾಠಕ, ಸಂತೋಷ ಪಾಟೀಲ ಮತ್ತು ಮಾನಯ್ಯ ಬೆಳ್ಳಗಿನೂರ್ ನಿರ್ಮಾಣದ ಈ ಚಿತ್ರ ಫೆಸ್ಟಿವಲ್ ಆಫ್ ಗ್ಲೋಬ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದಿರುವುದು ವಿಶೇಷ.
ಉಳಿದಂತೆ ಅಮೆರಿಕದ ಪ್ರತಿಷ್ಠಿತ ಗ್ಲೆನಡೆಲ್ ಚಿತ್ರೋತ್ಸವ, ಲಾಸ್ ಏಂಜಲೀಸ್ ಫಿಲ್ಮ್ ಫೆಸ್ಟಿವಲ್, ಪ್ರತಿಷ್ಠಿತ ಗೋಲ್ಡನ್ ಗೇಟ್ ಫೆಸ್ಟಿವಲ್‌ಗೆ ಅಧಿಕೃತವಾಗಿ ಆಯ್ಕೆಯಾಗಿ ಮೆಚ್ಚುಗೆ ಪಡೆದಿದೆ. ಇದರೊಂದಿಗೆ ಭಾರತದ ಕೊಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಆಯ್ಕೆಯಾದ ಏಕೈಕ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದೊಂದು ಸಿಕ್ಸ್ತ್ಸೆನ್ಸ್ ಕಥೆಯಾಗಿದ್ದು, ಕನ್ನಡದಲ್ಲಿ ಹೊಸ ಪ್ರಯೋಗ ಎನ್ನಬಹುದು. ಭವಿಷ್ಯದಲ್ಲಿ ಸಂಭವಿಸುವ ಕೂತುಹಲಕಾರಿ ಘಟನೆಗಳ ಮುನ್ಸೂಚನೆ ಕುರಿತಾದ ವಿಶೇಷ ಕಥಾಹಂದರ ಇಲ್ಲಿದೆ. ಈ ಚಿತ್ರದಲ್ಲಿ ಮನು ಮತ್ತು ಅನುಷಾ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಎಸ್.ಡಿ. ಅರವಿಂದ ಅವರು ಮೂರು ಹಾಡುಗಳಿಗೆ ಸಂಗೀತ ನೀಡಿದರೆ, ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಅನಂತ್‌ಅರಸ್ ಕ್ಯಾಮೆರಾ ಹಿಡಿದಿದ್ದಾರೆ. ರತನ್ ಎಸ್.ಗೊರೂರ ಅವರು ಸಂಕಲನ ಮಾಡಿದ್ದಾರೆ. ಬಹುತೇಕ ಹೊಸತಂಡ ಸೇರಿ ಮಾಡಿರುವ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ.