ಬೆಂಗಳೂರು: “ನಾನು ಚಿಕ್ಕವನಿರುವಾಗ ಭತ್ತದ ಹೊಟ್ಟನ್ನೇ ಅನ್ನ ಎಂದು ತಂದುಕೊಡುತ್ತಿದ್ದರು. ಅದನ್ನೇ ನಾವು ಅನ್ನವೆಂದು ನಂಬಿ ತಿಂದಿದ್ದೇವೆ. ನಮ್ಮ ಊರಲ್ಲಿ ಯಾವುದಾದರೂ ಮದುವೆಯಾದರೆ ನಾನು, ನನ್ನ ತಂದೆ ಮದುವೆ ಮನೆಗೆ ಹೋಗಿ ಊಟಕ್ಕಾಗಿ ಹೊರಗೆ ಕಾಯುತ್ತಾ ಕುಳಿತಿರುತ್ತಿದ್ದೆವು. ಕೆಲವೊಮ್ಮೆ ಊಟ ಸಿಗುತ್ತಿತ್ತು, ಕೆಲವು ಸಲ ಸಿಗುತ್ತಿರಲಿಲ್ಲ,’ ಎಂದು ತಮ್ಮ ಮಾಜಿ ಮುಖ್ಯಮಂತ್ರಿಯೂ ಆಗಿರುವ ಸಂಸದ ವೀರಪ್ಪ ಮೋಯ್ಲಿ ತಮಗಾದ ಜಾತಿಯ ಕರಾಳ ದರ್ಶನವನ್ನು ತೆರೆದಿಟ್ಟಿದ್ದಾರೆ.
ಅಕ್ಷಯ ಫೌಂಡೇಷನ್ ಹಾಗೂ ಚಾರುಮತಿ ಪ್ರಕಾಶನ ಮಂಗಳವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಅವರ “ಒಂಟಿ ಕಾಲಿನ ನಡಿಗೆ’ ಆತ್ಮಕಥನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಾನೇನಾದರು ಆತ್ಮಕಥೆ ಬರೆದರೆ ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕವಾಗಿ ಬಹಳ ದೊಡ್ಡ ಕ್ರಾಂತಿಯಾಗುತ್ತದೆ. ಅದರಲ್ಲಿ ಬಹಳಷ್ಟು ಕ್ರಾಂತಿಕಾರಕ ವಿಚಾರಗಳಿರಲಿವೆ. ನಾನು ಕಾಲಾವಕಾಶ ನೋಡಿಕೊಂಡು ಬರೆಯುತ್ತೇನೆ,’ ಎಂದಿದ್ದಾರೆ.
“ಕೆಲವೊಮ್ಮೆ ನಾನು ಮುಖ್ಯಮಂತ್ರಿ ಆದವನು ಎಂದು ಆಶ್ಚರ್ಯವಾಗುತ್ತದೆ. ನನ್ನ ಜಾತಿಯವರು ಯಾರು ರಾಜಕೀಯದಲ್ಲಿ ಇಲ್ಲ. ಬೇರೆ ಜಾತಿಯಲ್ಲಾದರೆ ಎರಡೂ¾ರು ಮಂದಿ ಶಾಸಕರು ಇದ್ದಾರೆ. ಹೀಗಿದ್ದು, ರಾಜ್ಯದ ಮುಖ್ಯಮಂತ್ರಿ ಪದವಿಗೆ ಏರಿದೆ ಎನ್ನುವುದು ಸಾಹಸ ಗಾಥೆಯೇ ಸರಿ. ಸಮಾಜದಲ್ಲಿ ಮೇಲುಕೀಳು ಇರಬಾರದು. ಮನುಷ್ಯತ್ವದಿಂದ ಸಮಾನತೆ ಸಾಧಿಸಲು ಸಾಧ್ಯವಾಗುತ್ತದೆ. ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದು ಕೂಡ ಇದೇ ತತ್ವವವನ್ನು,’ ಎಂದು ಹೇಳಿದರು.
“ರಾಜಕೀಯ ನಾಯಕರು ದಲಿತರ ಮನೆಗಳಿಗೆ ಹೋಗಿ ಊಟ ಮಾಡುವುದು ಅಸ್ಪೃಶ್ಯತೆ ಆಚರಣೆಯ ಘೋರ ಪ್ರದರ್ಶನ. ಇಂದಿಗೂ ಹಲವರ ಮನಸಿನಲ್ಲಿ ಅಸ್ಪೃಶ್ಯತೆ ಉಳಿದುಕೊಂಡಿದೆ. ಅದನ್ನು ಪ್ರದರ್ಶಿಸುವ ಸಲುವಾಗಿಯೇ ದಲಿತರ ಮನೆಗಳಿಗೆ ಹೋಗಿ ಊಟ ಮಾಡುತ್ತಿದ್ದಾದರೆ. ಇಂತಹ ಆಚರಣೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ಸತ್ಯವನ್ನು ಪ್ರತಿಯೊಬ್ಬರು ಅರಿಯುವ ಅಗತ್ಯವಿದೆ,’ ಎಂದು ಹೇಳಿದರು.
“ಒಂಟಿ ಕಾಲಿನ ನಡಿಗೆ’ ಆತ್ಮಕಥನದ ಲೇಖಕ ಡಾ.ಎಲ್.ಹನುಮಂತಯ್ಯ ಮಾತನಾಡಿ, “ಆತ್ಮಕಥೆ ಬರೆಯುವುದು ಬಹಳ ಕಷ್ಟ. ಅದರಲ್ಲಿ ಮಿಥ್ಯ ಬರೆಯಬಾರದು. ಸತ್ಯ ಬರೆದರೆ, ಎಲ್ಲೆಡೆ ನಿಷ್ಠುರತೆ ಎದುರಿಸಬೇಕಾಗುತ್ತದೆ. ಹೊಟ್ಟೆಗಿಲ್ಲದ ಕಷ್ಟದ ಕಾಲದಲ್ಲಿದ್ದೇವು. ಅದನ್ನು ಬರೆದುಕೊಳ್ಳಬೇಕು ಎನ್ನಿಸಿತ್ತು. ಆದ್ದರಿಂದ ಬರೆದುಕೊಂಡಿದ್ದೇನೆ. ಕೃತಿಯಲ್ಲಿ ಜೀವನದಲ್ಲಿ ನಡೆದ ಪ್ರತಿಯೊಂದು ಘಟನೆಯನ್ನೂ ಸಾಧ್ಯವಾದಷ್ಟು ಮಟ್ಟಿಗೆ ನೈಜವಾಗಿಯೇ ಬರೆದುಕೊಂಡಿದ್ದೇನೆ,’ ಎಂದು ಹೇಳಿದರು. ಸಾಹಿತಿ ಕಾಳೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ರಂಗಕರ್ಮಿ ಶ್ರೀನಿವಾಸ್ ಜಿ.ಕಪ್ಪಣ್ಣ, ಚಾರುಮತಿ ಪ್ರಕಾಶನದ ಬಿ.ಎಸ್.ವಿದ್ಯಾರಣ್ಯ ಉಪಸ್ಥಿತರಿದ್ದರು.