ಕುಷ್ಟಗಿ: ಮೊಹರಂ ಮುಸ್ಲಿಮರ ಪಾಲಿಗೆ ಪವಿತ್ರ ಹಬ್ಬ ಎನ್ನುವುದು ಜನಜನಿತ. ತಾಲೂಕಿನ ಕುರಬನಾಳ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬ ನೆಲೆಸಿಲ್ಲ. ಹೀಗಿದ್ದರೂ ಮೊಹರಂ ಹಬ್ಬವನ್ನು ಹಿಂದೂಗಳೇ ಆಚರಿಸುತ್ತಿರುವುದು ವಿಶೇಷ.
ಕುರಬನಾಳ ಗ್ರಾಮದಲ್ಲಿ ಮುಸ್ಲಿಂ ಕುಟುಂಬಗಳು ಇಲ್ಲದೇ ಇದ್ದರೂ, ಮೊಹರಂ ಆಚರಣೆ ನಿಂತಿಲ್ಲ. ವರ್ಷದಿಂದ ವರ್ಷಕ್ಕೆ ಶ್ರದ್ಧೆ ಭಕ್ತಿಯಿಂದ ಹಾಗೂ ವೈಭವದಿಂದ ಜರುಗುತ್ತದೆ. ಈ ಅಲಾಯಿ ದೇವರನ್ನು ಹಿಡಿಯುವವರು ಹಿಂದೂಗಳೇ ಆಗಿದ್ದು, ಆರಾಧಿ ಸುವ ಭಕ್ತಾದಿಗಳೂ ಹಿಂದೂಗಳೇ ಆಗಿರುವುದು ವಿಶೇಷ.
ಭಕ್ತಾದಿಗಳು ಮಸೀದಿ ನಿರ್ಮಿಸಿದ್ದು, ಪ್ರತಿ ವರ್ಷವೂ ಭಕ್ತಿ ಭಾವದಿಂದ ಯಮನೂರ ದೇವರ ಮೊಹರಂ ಹಬ್ಬ ಆಚರಿಸಲಾಗುತ್ತಿದೆ. ಗ್ರಾಮದಲ್ಲಿ ಲಿಂಗಾಯತ, ಕುರುಬರು, ವಾಲ್ಮೀಕಿ, ಗಾಣಗೇರ, ಹರಿಜನ ಜನಾಂಗದವರಿದ್ದಾರೆ. ಒಂದೇ ಒಂದು ಕುಟುಂಬ ಮುಸ್ಲಿಮರು ಇಲ್ಲ. ಇಲ್ಲಿನ ವಿಶೇಷತೆ ಏನೆಂದರೆ, ಮೊಹರಂ ಆಚರಣೆ ಹಿನ್ನೆಲೆಯಲ್ಲಿ ನಡೆಯುವ ಈ ಆಚರಣೆಯಲ್ಲಿ ಓದುಸುವಿಕೆ, ದೇವರ ಕೆಂಡದ ಸೇವೆ, ದೇವರು, ಡೋಣಿ ಹೊರುವುದು ಈ ಎಲ್ಲ ಆಚರಣೆಗಳು ಹಿಂದೂಗಳಿಂದಲೇ ನಡೆಯುತ್ತಿವೆ.
ಪಾಂಜಾಗಳು ಬೇಡಿದ ವರವನ್ನು ಪಾಲಿಸುತ್ತವೆ ಎನ್ನುವ ಧಾರ್ಮಿಕ ನಂಬಿಕೆ ಹಿನ್ನೆಲೆಯಲ್ಲಿ ಗುದ್ದಲಿ ಹಾಕುವ ದಿನದಿಂದ ಮೊಹರಂ ಕೊನೆಯವರೆಗೂ ಆಚರಣೆಗಳು ಭಕ್ತಿ ಶ್ರದ್ಧೆಯಿಂದ ನಡೆಯುತ್ತವೆ. ದೇವರ ಪ್ರತಿಷ್ಠಾಪನೆ ವೇಳೆಯಲ್ಲಿ ಹರಕೆ ತೀರಿಸುವುದು ಹಿಂದಿನಿಂದ ನಡೆದುಕೊಂಡ ಸಂಪ್ರದಾಯ. ಗುರುವಾರ ನಡೆದ ಅಲಾಯಿ ದೇವರನ್ನು ಶರಣಪ್ಪ ಬಡಿಗೇರ, ರಮೇಶ ಜೂಲಕಟ್ಟಿ, ಬಸವರಾಜ್ ಬಡಿಗೇರ, ಹನುಮಂತ ತರಲಕಟ್ಟಿ, ಮೌನೆಶ ಬಡಿಗೇರ, ಯಮನೂರಪ್ಪ ತೆಮ್ಮಿನಾಳ, ನಾಗರಾಜ್ ಪವಾಡೆಪ್ಪನವರ, ಹನುಮಂತ ಪೂಜಾರಿ, ಬಸವರಾಜ್ ಕುರಗೋಡ್ ಅವರು, ಅಲಾಯಿ ದೇವರು ಹಿಡಿದು ಗ್ರಾಮದಲ್ಲಿ ಸವಾರಿ ನಡೆಸಿದರು.