ಮಹಾತ್ಮ ಗಾಂಧಿ ಕುರಿತು ನೂರಾರು ಕೃತಿಗಳು ಬೇರೆ ಬೇರೆ ಭಾಷೆಯಲ್ಲಿ ಪ್ರಕಟಗೊಂಡಿವೆ. ಸ್ವತಃ ಮಹಾತ್ಮಗಾಂಧಿ ಅವರ ಆತ್ಮ ಚರಿತ್ರೆ ಕೂಡ ನೂರಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದವಾಗಿದೆ.
ಆದರೆ ಪುಸ್ತಕ ರೂಪದಲ್ಲಿ, ಅಕ್ಷರದೊಳಗಿದ್ದ ಗಾಂಧಿ ವ್ಯಕ್ತಿತ್ವ, ಅವರ ಜೀವನಗಾಥೆ ಸಿನಿಮಾವಾಗಿ ದೃಶ್ಯರೂಪದಲ್ಲಿ ತೆರೆಮೇಲೆ ಬಂದಿದ್ದು ಇಲ್ಲಿಯವರೆಗೆ ಬೆರಳೆಣಿಕೆಯಷ್ಟು ಮಾತ್ರ. ಈಗ ಸಾಲಿಗೆ ಸೇರ್ಪಡೆಯಾಗಿರುವ ಮತ್ತೂಂದು ಸಿನಿಮಾ “ಮೋಹನದಾಸ’ ಹೆಸರೇ ಹೇಳುವಂತೆ, “ಮೋಹನದಾಸ’ ಗಾಂಧಿಯ ಬಾಲ್ಯವನ್ನು ತೆರೆಮೇಲೆ ತೆರೆದಿಡುವ ಚಿತ್ರ.
6 ವರ್ಷದಿಂದ 14 ವರ್ಷದ ವರೆಗೆ ಮೋಹನದಾಸನ ಜೀವನದಲ್ಲಿ ನಡೆದ ಪ್ರಮುಖ ಘಟನೆಗಳ ಸುತ್ತ ಇಡೀ ಚಿತ್ರ ಸಾಗುತ್ತದೆ. ಬಾಲ್ಯದಲ್ಲಿ ಮೋಹನದಾಸನ ಮೇಲೆ ಪರಿಣಾಮ ಬೀರಿದ ಶ್ರವಣ ಕುಮಾರ ಮತ್ತು ಸತ್ಯಹರಿಶ್ಚಂದ್ರನ ಕಥೆಗಳು, ಸ್ನೇಹಿತರ ಸಂಗದಿಂದ ಧೂಮಪಾನ, ಮಾಂಸಹಾರ ಸೇವನೆ ಮಾಡಿದ್ದು, ವೇಶ್ಯೆಯ ಸಂಗ ಬಯಸಿದ್ದು ಹೀಗೆ ಗಾಂಧಿ ಜೀವನದಲ್ಲಿ ನಡೆದ ಹತ್ತಾರು ನೈಜ ಮತ್ತು ಸೂಕ್ಷ್ಮ ಘಟನೆಗಳನ್ನು “ಮೋಹನದಾಸ’ನ ಮೂಲಕ ತೆರೆಮೇಲೆ ಹೇಳಲಾಗಿದೆ.
ಇದನ್ನೂ ಓದಿ:ಬಡತನದ ದಿರಿಸು ಧರಿಸಿದ ಸಿರಿವಂತ
“ಮೋಹನದಾಸ’ ಚಿತ್ರದಲ್ಲಿ 6 ವರ್ಷದ ಗಾಂಧಿಯ ಪಾತ್ರದಲ್ಲಿ ಪರಂ ಸ್ವಾಮಿ ಮತ್ತು 14 ವರ್ಷದ ಗಾಂಧಿಯ ಪಾತ್ರದಲ್ಲಿ ಸಮರ್ಥ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮೋಹನದಾಸನ ತಾಯಿಯಾಗಿ ಹಿರಿಯ ನಟಿ ಶ್ರುತಿ, ತಂದೆಯ ಪಾತ್ರದಲ್ಲಿ ಅನಂತ್ ಮಹಾದೇವನ್, ಕಥೆಗಾರನಾಗಿ ದತ್ತಣ್ಣ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಗಾಂಧಿ ಬಾಲ್ಯದ ಜೀವನದ ಪ್ರಮುಖ ಘಟ್ಟಗಳು ಮತ್ತು ಘಟನೆಗಳಿಗೆ ಸಾಕ್ಷಿಯಾಗಿದ್ದ ಪೋರಬಂದರ್ ಮತ್ತು ರಾಜ್‌ಕೋಟ್‌ನಲ್ಲಿಯೇ ಚಿತ್ರದ ಅನೇಕ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಜಿ.ಎಸ್ ಭಾಸ್ಕರ್ ಛಾಯಾಗ್ರಹಣ ಮತ್ತು ಬಿ.ಎಸ್ ಕೆಂಪರಾಜು ಸಂಕಲನ “ಮೋಹನದಾಸ’ನ ದೃಶ್ಯಗಳನ್ನು ಅಚ್ಚುಕಟ್ಟಾಗಿ ತೆರೆಮೇಲೆ ಕಾಣುವಂತೆ ಮಾಡಿದೆ. ಗಾಂಧಿ ಜಯಂತಿ ಮಾಸದಲ್ಲೇ ತೆರೆಗೆ ಬಂದಿರುವ ಬಾಪು ಬಾಲ್ಯದ ಕಥೆ “ಮೋಹನದಾಸ’ನನ್ನು ಮಕ್ಕಳ ಜೊತೆ ಪೋಷಕರು ಒಮ್ಮೆ ನೋಡಿಬರಲು ಅಡ್ಡಿಯಿಲ್ಲ.