ಬರ್ಮಿಂಗ್‌ಹ್ಯಾಮ್: ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ಇಂಗ್ಲಿಷ್ ಕೌಂಟಿಯನ್ನು ಸೇರಲಿದ್ದಾರೆ. ಸೆಪ್ಟಂಬರ್‌ನಲ್ಲಿ ಅವರು ವಾರ್ವಿಕ್‌ಶೈರ್ ಪರ ಮೂರು ಪ್ರಥಮ ದರ್ಜೆ ಪಂದ್ಯದಲ್ಲಿ ಆಡಲಿದ್ದಾರೆ.
ಸದ್ಯ ಜಿಂಬಾಬ್ವೆಯಲ್ಲಿ ನಡೆಯುವ ಏಕದಿನ ಸರಣಿಯಲ್ಲಿ ಸಿರಾಜ್ ಆಡುತ್ತಿದ್ದಾರೆ. ಆದರೆ ಅವರು ಆಬಳಿಕ ನಡೆಯುವ ಟಿ20 ಪಂದ್ಯಗಳಲ್ಲಿ ಆಡುವುದಿಲ್ಲ.
ಕೌಂಟಿ ಚಾಂಪಿಯನ್‌ಶಿಪ್ ಋತುವಿನ ಕೊನೆಯ ಮೂರು ಪಂದ್ಯಗಳಿಗಾಗಿ ವಾರ್ವಿಕ್‌ಶೈರ್ ಕೌಂಟಿ ಕ್ರಿಕೆಟ್ ಕ್ಲಬ್ ಮೊಹಮ್ಮದ್ ಸಿರಾಜ್ ಜತೆ ಒಪ್ಪಂದಕ್ಕೆ ಸಹಿ ಹಾಕಿದೆ. 28ರ ಹರೆಯದ ಸಿರಾಜ್ ಸ. 12ರ ಮೊದಲು ಎಜ್‌ಬಾಸ್ಟನ್‌ಗೆ ಆಗಮಿಸಲಿದ್ದಾರೆ ಎಂದು ಕೌಂಟಿ ಕ್ಲಬ್‌ನ ಪ್ರಕಟನೆ ತಿಳಿಸಿದೆ.
ಎಜ್‌ಬಾಸ್ಟನ್‌ನಲ್ಲಿ ಜುಲೈ ತಿಂಗಳಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಸಿರಾಜ್ 66 ರನ್ನಿಗೆ 4 ವಿಕೆಟ್ ಹಾರಿಸಿದ್ದರು. ಮೂರು ಏಕದಿನ ಪಂದ್ಯಗಳಲ್ಲಿ ಅವರು ಆರು ವಿಕೆಟ್ ಉರುಳಿಸಿದ್ದರು. ಭಾರತ ಪರ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ 26 ಪಂದ್ಯ ಆಡಿದ್ದು 56 ವಿಕೆಟ್ ಹಾರಿಸಿದ್ದಾರೆ.
ಸಿರಾಜ್ ಈ ಋತುವಿನಲ್ಲಿ ವಾರ್ವಿಕ್‌ಶೈರ್ ಪರ ಆಡಲಿರುವ ಭಾರತದ ಎರಡನೇ ಆಟಗಾರ ಆಗಿದ್ದಾರೆ. ಈ ಮೊದಲು ಕೃಣಾಲ್ ಪಾಂಡ್ಯ ರಾಯಲ್ ಲಂಡನ್ ಕಪ್ ಏಕದಿನ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಪಾಂಡ್ಯ ಒಪ್ಪಂದಕ್ಕೆ ಸಹಿ ಹಾಕಿದ್ದರು.