Advertisement

Mohammed Shami ಭಾರತದ ಬೌಲಿಂಗ್‌ ಸೂಪರ್‌ಸ್ಟಾರ್‌

01:24 AM Nov 17, 2023 | Team Udayavani |

ಮುಂಬಯಿ: ನ್ಯೂಜಿ ಲ್ಯಾಂಡ್‌ ವಿರುದ್ಧದ ಅದ್ಭುತ ಸೆಮಿಫೈನಲ್‌ ಹೋರಾಟದ ವೇಳೆ ಭಾರತದ ಇಬ್ಬರು ದಿಗ್ಗಜರಾದ ವಿರಾಟ್‌ ಕೊಹ್ಲಿ ಮತ್ತು ಮೊಹಮ್ಮದ್‌ ಶಮಿ ಅವರು ತಮ್ಮ ಕ್ಷೇತ್ರದಲ್ಲಿ ವಿರಾಟ್‌ ದರ್ಶನ ನೀಡಿ ವಾಂಖೇಡೆ ಕ್ರೀಡಾಂಗಣದಲ್ಲಿ ನೆರೆದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುವಲ್ಲಿ ಯಶಸ್ವಿಯಾದರು. ಕೊಹ್ಲಿ ಶತಕಗಳ ವಿಶ್ವದಾಖಲೆ ಮಾಡುವಾಗ ಪ್ರೇಕ್ಷಕರು ಕೊಹ್ಲಿ ಕೊಹ್ಲಿ ಎಂದು ಕೂಗಿದರೆ ಶಮಿ ಬೌಲಿಂಗ್‌ ದಾಳಿಗೆ ಇಳಿಯುವಾಗಲೂ ಪ್ರೇಕ್ಷಕರು ಶಮಿ ಶಮಿ ಎಂದು ಕೂಗಿ ಬೌಲರನ್ನು ಪ್ರೋತ್ಸಾಹಿಸಿದ್ದು ಕಂಡು ಬಂತು.

Advertisement

ಈ ವಿಶ್ವಕಪ್‌ನಲ್ಲಿ ಶಮಿಯ ಸಾಧನೆ ಅತ್ಯದ್ಭುತ ಎನ್ನಬಹುದು. ಭಾರತದ ಬೌಲಿಂಗ್‌ ಸೂಪರ್‌ ಸ್ಟಾರ್‌ ಆಗಿ ಮೂಡಿರುವ ಅವರು ಬ್ಯಾಟಿಂಗ್‌ನಲ್ಲಿ ಕೊಹ್ಲಿ ಮಾಡಿರುವಷ್ಟೇ ಸಾಧನೆಯನ್ನು ಶಮಿ ಬೌಲಿಂಗ್‌ನಲ್ಲಿ ಮಾಡಿ ತೋರಿಸಿದ್ದಾರೆ. ಅವರ ಈ ಸಾಧನೆ ಕೇವಲ ನ್ಯೂಜಿಲ್ಯಾಂಡ್‌ ವಿರುದ್ಧದ ಪಂದ್ಯವೊಂದರಲ್ಲಿ ಮಾತ್ರವಲ್ಲ. ಆಡಿದ ಎಲ್ಲ ಪಂದ್ಯಗಳಲ್ಲಿ ಅಮೋಘ ನಿರ್ವಹಣೆ ನೀಡಿರುವ ಅವರು ಉಳಿದ ಬೌಲರ್‌ಗಳ ನಿರ್ವಹಣೆಗಿಂತ ಮುಂದಿದ್ದಾರೆ.

ಅವರು ವಿಶ್ವಕಪ್‌ನಲ್ಲಿ ಪಡೆದ ವಿಕೆಟ್‌ಗಳ ಸಂಖ್ಯೆಯೇ ಅವರ ಸಾಧನೆಯನ್ನು ಹೇಳುತ್ತದೆ. ಆಡಿದ ಆರು ಪಂದ್ಯಗಳಿಂದ ಅವರು 23 ವಿಕೆಟ್‌ ಉರುಳಿಸಿದ್ದಾರೆ. ಅದರಲ್ಲಿ ಮೂರು ಬಾರಿ ಐದು ವಿಕೆಟ್‌ಗಳ ಗೊಂಚಲನ್ನು ಪಡೆದಿದ್ದಾರೆ. 10.9 ಸ್ಟ್ರೈಕ್‌ರೇಟ್‌ನಲ್ಲಿ ಬೌಲಿಂಗ್‌ ನಿರ್ವಹಣೆ ಮಾಡಿ ಎಲ್ಲರನ್ನೂ ಚಕಿತಗೊಳಿಸಿದ್ದಾರೆ.

ಆಡುವ ಬಳಗದಲ್ಲಿರಲಿಲ್ಲ
ನಿಜವಾಗಿ ಹೇಳುವುದಾದರೆ ಶಮಿ ಅವರು ಆರಂಭದ ನಾಲ್ಕು ಪಂದ್ಯಗಳಲ್ಲಿ ಆಟವಾಡುವ 11 ಸದಸ್ಯರ ಬಳಗದಲ್ಲಿ ಇರಲಿಲ್ಲ. ಎಂಟನೇ ಕ್ರಮಾಂಕದಲ್ಲಿ ಹೆಚ್ಚುವರಿ ಭದ್ರತಾ ಕಾರಣಗಳಿಗಾಗಿ ಆಲ್‌ರೌಂಡರ್‌ ಒಬ್ಬರನ್ನು ತಂಡದಲ್ಲಿ ಸೇರಿಸಿಕೊಳ್ಳುವುದು ಭಾರತದ ನಿರ್ಧಾರವಾಗಿತ್ತು. ಅದಕ್ಕಾಗಿ ಆರ್‌. ಅಶ್ವಿ‌ನ್‌ ಅವರನ್ನು ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ಆಡಿಸಲಾಯಿತು. ಪಾಕಿಸ್ಥಾನ, ಬಾಂಗ್ಲಾ ಮತ್ತು ಅಫ್ಘಾನಿಸ್ಥಾನ ವಿರುದ್ಧ ಶಾರ್ದೂಲ್‌ ಠಾಕೂರ್‌ ಅವರನ್ನು ಆಡಿಸಲಾಯಿತು.

ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಹಾರ್ದಿಕ್‌ ಪಾಂಡ್ಯ ಗಾಯಗೊಂಡ ಬಳಿಕ ಭಾರತೀಯ ತಂಡ ಯಾರನ್ನು ಆಯ್ಕೆ ಮಾಡುವ ಕುರಿತು ಗೊಂದಲದಲ್ಲಿ ಸಿಲುಕಿತು. ಬ್ಯಾಟ್ಸ್‌ಮನ್‌ ಮತ್ತು ಬೌಲಿಂಗಿನಲ್ಲಿ ಸಮರ್ಥರಿರುವ ಆಟಗಾರನ ಆಯ್ಕೆಯನ್ನು ತಂಡ ವ್ಯವಸ್ಥಾಪಕರು ಬಯಸಿದ್ದರು. ಇಂತಹ ಸಮಯದಲ್ಲಿ ಶಮಿ ತಂಡಕ್ಕೆ ಪ್ರವೇಶ ಪಡೆದರಲ್ಲದೇ ನ್ಯೂಜಿಲ್ಯಾಂಡ್‌ ವಿರುದ್ಧದ ಲೀಗ್‌ ಪಂದ್ಯದಲ್ಲಿ ಐದು ವಿಕೆಟ್‌ಗಳ ಗೊಂಚಲನ್ನು ಪಡೆದು ಗಮನ ಸೆಳೆದರು.

Advertisement

ಶಮಿ ಅವರೊಬ್ಬ ವಿಶೇಷ ಬೌಲರ್‌. ಅವರು ನಿಜವಾಗಿಯೂ ಉತ್ತಮವಾಗಿ ಬೌಲಿಂಗ್‌ ಮಾಡುತ್ತಾರೆ. ತಂಡದ ಹೊಂದಾಣಿಕೆಯಿಂದಾಗಿ ಅವರು ಆಯ್ಕೆಯಾಗುವುದು ಸ್ವಲ್ಪ ಕಷ್ಟ. ಆದರೆ ಅವರು ಆಡದಿದ್ದರೂ ಅವರ ಮನಃಸ್ಥಿತಿ ಉತ್ತಮವಾಗಿ ಇರುತ್ತದೆ ಎಂದು ಭಾರತದ ಬ್ಯಾಟಿಂಗ್‌ ಕೋಚ್‌ ವಿಕ್ರಮ್‌ ರಾಥೋಡ್‌ ಹೇಳಿದ್ದಾರೆ.

ನ್ಯೂಜಿಲ್ಯಾಂಡ್‌ ವಿರುದ್ಧದ ಸೆಮಿಫೈನಲ್‌ ಹೋರಾಟದ ವೇಳೆಯೂ ಶಮಿ ಶ್ರೇಷ್ಠ ಬೌಲಿಂಗ್‌ ಪ್ರದರ್ಶನ ನೀಡಿದ್ದರು. ಡೇವನ್‌ ಕಾನ್ವೇ ಮತ್ತು ರಚಿನ್‌ ರವೀಂದ್ರ ಅವರ ವಿಕೆಟನ್ನು ಹಾರಿಸುವ ಮೂಲಕ ಅವರು ಭಾರತಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಆಬಳಿಕ ಕೇನ್‌ ವಿಲಿಯಮ್ಸನ್‌ ಮತ್ತು ಡ್ಯಾರಿಲ್‌ ಮಿಚೆಲ್‌ ಅಮೋಘವಾಗಿ ಆಡಿ ಮೂರನೇ ವಿಕೆಟಿಗೆ 181 ರನ್ನುಗಳ ಜತೆಯಾಟದಲ್ಲಿ ಭಾಗಿಯಾದರು. ಈ ಹಂತದಲ್ಲಿ ಮತ್ತೆ ದಾಳಿಗೆ ಇಳಿದ ಶಮಿ ಕಿವೀಸ್‌ ಮೇಲೆ ಮಾರಕವಾಗಿ ಎರಗಿದರು. ಅವರ ವೈವಿಧ್ಯಮಯ ಬೌಲಿಂಗ್‌ಗೆ ನ್ಯೂಜಿಲ್ಯಾಂಡ್‌ ಸಂಪೂರ್ಣ ಶರಣಾಯಿತು.

Advertisement

Udayavani is now on Telegram. Click here to join our channel and stay updated with the latest news.

Next