ಮಲ್ಪೆ: ಕೊಡವೂರು ಲಕ್ಷ್ಮೀನಗರದ ಎಲ್ಲ ಧರ್ಮಿಯರು ಜಾತಿ ಮತ ಭೇದವಿಲ್ಲದೆ ಅಗತ್ಯ ಇರುವವರಿಗೆ ನೀರು ಪೂರೈಸುವಲ್ಲಿ ಒಂದಾಗಿದ್ದಾರೆ. ಈ ಮೂಲಕ ಲಕ್ಷ್ಮೀನಗರದ ನಿವಾಸಿಗಳು ನೀರು ಹಂಚಿಕೆಯಲ್ಲಿ ಸೌಹಾದರ್ತೆ ಮೆರೆಯುತ್ತಿದ್ದಾರೆ.
ನೀರು ಪೂರೈಕೆಗೆ ಬೇಕಾದ ವಾಹನ, ಟ್ಯಾಂಕಿನ ವ್ಯವಸ್ಥೆ ಹಿಂದೂಗಳು ಕಲ್ಪಿಸಿದರೆ, ಕ್ರಿಶ್ಚಿಯನ್, ಹಿಂದೂಗಳ ಮನೆಯ ಬಾವಿಯಿಂದ ನೀರು ಪಡೆದು ಮುಸ್ಲಿಂ ಚಾಲಕ ಆ ನೀರನ್ನು ಅಗತ್ಯ ಇರುವವರಿಗೆ ರಮ್ಜಾನ್ ಉಪವಾಸದ ಮಧ್ಯೆಯೂ ಕಳೆದ 20 ದಿನಗಳಿಂದ ನಿರಂತರ ಹಂಚಿಕೆ ಮಾಡುವ ಕೆಲಸ ಮಾಡುತ್ತಿದ್ದಾರೆ.
ಕೊಡವೂರು ಲಕ್ಷ್ಮೀ ನಗರದಲ್ಲಿ ನೀರಿನ ಸಮಸ್ಯೆ ಉದ್ಭವಿಸಿದ ಹಿನ್ನೆಲೆಯಲ್ಲಿ ಸಮಾಜ ಸೇವಕ ಮಾಧವ ಬನ್ನಂಜೆ ಅವರು ಮುತುವರ್ಜಿಯಿಂದ ನೀರಿಗಾಗಿ ಮನೆಗಳವರಲ್ಲಿ ವಿನಂತಿಸಿದ್ದಾರೆ. ಲಕ್ಷ್ಮೀನಗರದ ಜಯ ಪೂಜಾರಿ ನೀಡಿದ ವಾಹನದಲ್ಲಿ , ಸಿರಿ ಕುಮಾರ ಕ್ಷೇತ್ರದ ಸಂಸ್ಥೆ ನೀಡಿರುವ ಟ್ಯಾಂಕ್ ಮೂಲಕ, ಚಾರ್ಲಿ ಮ್ಯಾಥ್ಯೂ, ಸಂಜೀವ ಪೂಜಾರಿ, ಸಚಿನ್ ಶೆಟ್ಟಿ ಪ್ರವೀಣ್ ಶೆಟ್ಟಿ, ಲೀನಾ ಐರೀನ್ ಉದ್ದಿನಹಿತ್ಲು, ಆನಂದ ಆಂಚನ್ ಮತ್ತಿತರರು ನೀಡಿರುವ ಬಾವಿಯ ನೀರನ್ನು ಮಹಮ್ಮದ್ ಆಸಿಫ್ ಅವರು ಲಕ್ಷ್ಮೀನಗರ, ಗರ್ಡೆ, ಎಸ್‌ಟಿ ಕಾಲನಿ, ಬಾಚನಬೈಲು, ಕಾಫಿ ಮಿಲ್, ಪಾಳೆಕಟ್ಟೆ ಪ್ರದೇಶದ ಮನೆಗಳಿಗೆ ಪೂರೈಕೆ ಮಾಡುತ್ತಿದ್ದಾರೆ.
ರಮ್ಜಾನ್ ಉಪವಾಸವಾದರೂ ಮಹಮ್ಮದ್ ಆಸಿಫ್ ಬೆಳಗಿನ ಜಾವ ಹಾಗೂ ಸಂಜೆಯ ಇಫ್ತಾರ್ ಮುಗಿಸಿ ಮನೆ ಮನೆಗೆ ತೆರಳಿ ನೀರು ಸರಬರಾಜು ಮಾಡುತ್ತಿದ್ದಾರೆ. ಇವರೊಂದಿಗೆ ಚಾರ್ಲಿ ಮ್ಯಾಥ್ಯೂ ಕೂಡ ಕೈಜೋಡಿಸಿದ್ದಾರೆ.
ಕರೆ ಬಂದ ಕೂಡಲೇ ನೀರು ಪೂರೈಕೆ
ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ವೇಳೆ ನೀರು ಪೂರೈಕೆ ಮಾಡಲಾಗುತ್ತಿದ್ದು, ನೀರಿನ ಅಗತ್ಯದ ಬಗ್ಗೆ ಕರೆ ಬಂದ ಕೂಡಲೇ ನೀರು ಪೂರೈಸುವ ಕೆಲಸ ಮಾಡಲಾಗುತ್ತಿದೆ. ಕುಡಿಯುವ ನೀರಿಗೆ ಜಾತಿ ಧರ್ಮ ಎಂಬುದಿಲ್ಲ. ನೀರು ಎಲ್ಲರಿಗೂ ಬೇಕಾಗಿದೆ. ನಮ್ಮ ಮನೆಯಲ್ಲೂ ನೀರಿನ ಸಮಸ್ಯೆ ಇದೆ. ಆದರೂ ಜನರಿಗಾಗಿ ನಮ್ಮಿಂದ ಸೇವೆ ಮಾಡುತ್ತೇವೆ.
-ಮಹಮ್ಮದ್ ಆಸೀಫ್, ಲಕ್ಷ್ಮೀನಗರ