Advertisement

ಬಗ್ಗಾ ವಿರುದ್ಧ ವಾರಂಟ್‌: ಬಂಧಿಸಿ, ಹಾಜರುಪಡಿಸಿ: ಪೊಲೀಸರಿಗೆ ಮೊಹಾಲಿ ಕೋರ್ಟ್‌ ಆದೇಶ

02:05 AM May 08, 2022 | Team Udayavani |

ಚಂಡೀಗಢ/ಮೊಹಾಲಿ/ಹೊಸದಿಲ್ಲಿ: ದಿಲ್ಲಿ ಬಿಜೆಪಿ ಘಟಕದ ವಕ್ತಾರ ತೇಜಿಂ ದರ್‌ ಸಿಂಗ್‌ ಬಗ್ಗಾ ಅವರನ್ನು ಬಂಧಿಸಿದ ಪ್ರಕರಣ ತಾರಕಕ್ಕೇರಿದೆ. ಬಿಜೆಪಿ ಮತ್ತು ಆಮ್‌ ಆದ್ಮಿ ಪಕ್ಷದ ನಡುವೆ ಈ ವಿಚಾರ ಮತ್ತಷ್ಟು ಸಂಘರ್ಷಕ್ಕೆ ಕಾರಣವಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ, ಭಾರತೀಯ ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ನಿವಾಸದ ಎದುರು ಧರಣಿ ನಡೆಸಿದ್ದಾರೆ. ಈ ನಡುವೆಯೇ, ಪಂಜಾಬ್‌ನ ಮೊಹಾಲಿಯ ಸ್ಥಳೀಯ ನ್ಯಾಯಾಲಯದಿಂದ ಬಗ್ಗಾ ವಿರುದ್ಧ ಬಂಧನ ವಾರಂಟ್‌ ಹೊರಡಿಸಲಾಗಿದೆ.

Advertisement

ಪಂಜಾಬ್‌ ಪೊಲೀಸರಿಂದ ಶುಕ್ರವಾರ ಬಂಧಿತರಾಗಿ ಅನಂತರ ಬಿಡುಗಡೆಯಾಗಿದ್ದ ತೇಜಿಂದರ್‌ ಸಿಂಗ್‌ ಬಗ್ಗಾ ವಿರುದ್ಧ ಮೊಹಾಲಿಯ ಜ್ಯುಡಿಶಿಯಲ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಬಂಧನಕ್ಕೆ ವಾರಂಟ್‌ ಹೊರಡಿಸಿದೆ. “ಪಂಜಾಬ್‌ ಪೊಲೀಸರು ಬಿಜೆಪಿ ಮುಖಂಡರನ್ನು ಬಂಧಿಸಿ, ಕೋರ್ಟ್‌ ಮುಂದೆ ಹಾಜರುಪಡಿಸಬೇಕು’ ಎಂದು ಆದೇಶ ನೀಡಿದೆ. ಜತೆಗೆ ಪ್ರಕರಣದ ವಿಚಾರಣೆಯನ್ನು ಮೇ 23ಕ್ಕೆ ಮುಂದೂಡಿದೆ.

ಇನ್ನೊಂದು ಬೆಳವಣಿಗೆಯಲ್ಲಿ ಪ್ರಕರಣದ ಬಗ್ಗೆ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ನಡೆಯುತ್ತಿದ್ದ ವಿಚಾರಣೆ ಮೇ 10ಕ್ಕೆ ಮುಂದೂಡಲಾಗಿದೆ.

ಆರೋಪ ತಿರಸ್ಕರಿಸಿದ ಆಪ್‌: ಕಾನೂನು ಬಾಹಿರವಾಗಿ ಮುಖಂಡನ ಬಂಧನವಾಗಿದೆ ಎಂಬ ಬಿಜೆಪಿ ಆರೋಪವನ್ನು ಆಪ್‌ ವಕ್ತಾರ ಸಂಜಯ ಸಿಂಗ್‌ ತಿರಸ್ಕರಿಸಿದ್ದಾರೆ. ಪಂಜಾಬ್‌ನಿಂದ ಬಂಗಾಳದವರೆಗೆ ಹಿಂಸಾಕೃತ್ಯದವರೆಗೆ ತೊಡಗಿರುವವರನ್ನು ಬಿಜೆಪಿ ರಕ್ಷಿಸುತ್ತಿದೆ ಎಂದು ಅವರು ದೂರಿದ್ದಾರೆ. ತೇಜಿಂದರ್‌ ಸಿಂಗ್‌ ಬಗ್ಗಾ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಲು ಮುಂದಾಗಿದ್ದರು ಎಂದು ಆಪ್‌ ಮುಖಂಡ ಸೌರಭ್‌ ಭಾರದ್ವಾಜ್‌ ದೂರಿದ್ದಾರೆ.

ತೇಜಿಂದರ್‌ ಬಗ್ಗಾರನ್ನು ಭೇಟಿ ಮಾಡಿದ ತೇಜಸ್ವಿ ಸೂರ್ಯ
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೊಸದಿಲ್ಲಿಯಲ್ಲಿ ಬಗ್ಗಾರ ನಿವಾಸಕ್ಕೆ ತೆರಳಿ ಅವರಿಗೆ ಧೈರ್ಯ ಹೇಳಿದ್ದಾರೆ. ಜತೆಗೆ ಅವರ ತಂದೆಯವರನ್ನೂ ಭೇಟಿಯಾಗಿದ್ದಾರೆ. ಅನಂತರ ಮಾತನಾಡಿದ ಅವರು, “ದಿಲ್ಲಿ ಮುಖ್ಯಮಂತ್ರಿ ಬಗ್ಗಾ ಅವರ ಧ್ವನಿ ಅಡಗಿಸಲು ಪ್ರಯತ್ನ ಮಾಡುತ್ತಿದ್ದಾರೆ. ಅವರ ವಿರುದ್ಧ ಸುಳ್ಳು ಕೇಸು ದಾಖಲಿಸಲಾಗಿದೆ’ ಎಂದು ದೂರಿದ್ದಾರೆ. ಈ ಬೆಳವಣಿಗೆ ಪ್ರಜಾಪ್ರಭುತ್ವ ಮತ್ತು ವಾಕ್‌ ಸ್ವಾತಂತ್ರ್ಯದ ಮೇಲೆ ನಡೆಸಲಾಗಿರುವ ಹಲ್ಲೆ ಎಂದು ಅವರು ಟೀಕಿಸಿದರು. ಈ ವಿಚಾರದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಬೆಂಬಲ ನೀಡಿದ್ದಾರೆ ಅವರಿಗೆ ಧನ್ಯವಾದಗಳು ಎಂದರು. ಜತೆಗೆ ದಿಲ್ಲಿ ಮುಖ್ಯಮಂತ್ರಿ ನಿವಾಸದ ಎದುರು ಬಿಜೆಪಿ ಮುಖಂಡ ತೇಜಸ್ವಿ ನೇತೃತ್ವದಲ್ಲಿ ಪ್ರತಿಭಟನೆಯನ್ನೂ ನಡೆಸಲಾಗಿದೆ. ಪೊಲೀಸರು ಅವರನ್ನೆಲ್ಲ ವಶಕ್ಕೆ ಪಡೆದುಕೊಂಡು, ಅನಂತರ ಬಿಡುಗಡೆ ಮಾಡಿದ್ದಾರೆ. ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಕೂಡ ಹೊಸದಿಲ್ಲಿಗೆ ಧಾವಿಸಿ, ಬಗ್ಗಾ ಸಾಂತ್ವನ ಹೇಳಿದ್ದಾರೆ.

Advertisement

ಕೇಜ್ರಿವಾಲ್‌ ಒಬ್ಬ ನಿರಂಕುಶವಾದಿ ವ್ಯಕ್ತಿ. ದಿ ಕಾಶ್ಮೀರ್‌ ಫೈಲ್ಸ್‌ ಸಿನೆಮಾ ವಿರುದ್ಧ ದಿಲ್ಲಿ ಮುಖ್ಯಮಂತ್ರಿ ನೀಡಿದ ಹೇಳಿಕೆಗೆ ಬಗ್ಗಾ ಸ್ಪಷ್ಟನೆ ಕೇಳಿದ್ದರು. ಅದು ತಪ್ಪೇ? ಪಂಜಾಬ್‌ ಪೊಲೀಸರನ್ನು ಸ್ವಂತಕ್ಕೆ ಬಳಕೆ ಮಾಡಿದ್ದಾರೆ. ಬಂಧನದ ವೇಳೆ, ಬಗ್ಗಾ ಅವರಿಗೆ ಸಿಖ್‌ ಸಮುದಾಯದ ಪೇಟ ಧರಿಸಲು ಅವಕಾಶ ನೀಡಲಿಲ್ಲ
-ಆದೇಶ್‌ ಗುಪ್ತಾ,
ದಿಲ್ಲಿ ಬಿಜೆಪಿ ಮುಖ್ಯಸ್ಥ

ಸಮವಸ್ತ್ರದಲ್ಲಿದ್ದ ಗೂಂಡಾಗಳು ರಾಜಕೀಯ ಕಾರ್ಯಕರ್ತನನ್ನು ಹೇಗೆ ಅಪಹರಿಸಿದ್ದರು ಎನ್ನುವುದನ್ನು ನೋಡಿದ್ದೇವೆ. ವಾಕ್‌ ಸ್ವಾತಂತ್ಕéವನ್ನು ಉದ್ದೇಶಪೂರ್ವಕವಾಗಿ ಹೇಗೆ ಹತ್ತಿಕ್ಕಲಾಗುತ್ತಿದೆ ಎನ್ನುವುದು ಈ ಪ್ರಕರಣದಿಂದ ಸಾಬೀತಾಗಿದೆ. ಒಂದು ರಾಜಕೀಯ ಪಕ್ಷವನ್ನು ವಿರೋಧಿಸಲು ಕೇವಲ ಮೂಲಭೂತವಾಗಿರುವ ಸಾಂವಿಧಾನಿಕ ಹಕ್ಕನ್ನು ಬಳಕೆ ಮಾಡಲಾಗುತ್ತಿದೆ.
-ತೇಜಸ್ವಿ ಸೂರ್ಯ,
ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ

ತೇಜಿಂದರ್‌ ಸಿಂಗ್‌ ಬಗ್ಗಾ ಅವರು ಪದೇ ಪದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ದೇಶದಲ್ಲಿ ನಿರಂಕುಶ ಪ್ರಭುತ್ವ ಇಲ್ಲ. ಇಲ್ಲಿ ಸಂವಿಧಾನಾತ್ಮಕವಾಗಿಯೇ ಆಡಳಿತ ನಡೆಸಲಾಗುತ್ತಿದೆ.
-ಎಂ.ಎಸ್‌.ಕಾಂಗ್‌, ಪಂಜಾಬ್‌ ಆಪ್‌ ಘಟಕದ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next