Advertisement

ಎಪ್ರಿಲ್‌ ಮೊದಲ ವಾರದಿಂದ ಅರ್ಜಿ ನಮೂನೆ ವಿತರಣೆ ಪ್ರಾರಂಭ

02:46 PM Mar 16, 2017 | Harsha Rao |

ಮೊಗ್ರಾಲ್‌ ಟೆಕ್ನಿಕಲ್‌ ಶಾಲೆಯಲ್ಲಿ  ಕನ್ನಡ ವಿದ್ಯಾರ್ಥಿಗಳಿಗೆ ಅವಕಾಶ

Advertisement

ಕಾಸರಗೋಡು: ಕನ್ನಡ ಸಂಘಟನೆಗಳ ಅನವರತ ಪ್ರಯತ್ನದ ಫಲವಾಗಿ ಮೊಗ್ರಾಲ್‌ ಸಮೀಪದ ಬೆದ್ರಡ್ಕದಲ್ಲಿ ಕಾರ್ಯಾಚರಿಸುತ್ತಿರುವ ಸರಕಾರಿ ಟೆಕ್ನಿಕಲ್‌ ಹೈಸ್ಕೂಲ್‌ನಲ್ಲಿ ಕಳೆದ ವರ್ಷದಿಂದ ಕನ್ನಡ ಅರೆಕಾಲಿಕ ಅಧ್ಯಾಪಕ ಹುದ್ದೆ ಮಂಜೂರಾಗಿದ್ದು ತಾತ್ಕಾಲಿಕ ನೆಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರ ನೇಮಕವಾಗಿದೆ. ಇದರಿಂದ ಏಳನೇ ತರಗತಿವರೆಗೆ ಕನ್ನಡ ಅಥವಾ ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿದ, ಕನ್ನಡವನ್ನು ಭಾಷಾ ವಿಷಯವನ್ನಾಗಿ ಕಲಿತ, ಮಲಯಾಳ ತಿಳಿಯದ ಕನ್ನಡ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣವನ್ನು ಪಡೆಯಲು ಅವಕಾಶವಾಗಿದೆ. ಇಂಗ್ಲಿಷ್‌ ಮಾಧ್ಯಮ ಶಿಕ್ಷಣವನ್ನೊದಗಿಸುವ ಮೊಗ್ರಾಲ್‌ ತಾಂತ್ರಿಕ ಶಾಲೆಯಲ್ಲಿ ದ್ವಿತೀಯ ಭಾಷಾ ವಿಷಯವಾಗಿ ಇದುವರೆಗೆ ಮಲಯಾಳ ಮಾತ್ರವೇ ಇತ್ತು. ಆದರೆ 2017ನೇ ಅಧ್ಯಯನ ವರ್ಷದಿಂದ ಕನ್ನಡ ವಿದ್ಯಾರ್ಥಿಗಳು ಇಲ್ಲಿ ದ್ವಿತೀಯ ಭಾಷೆಯನ್ನಾಗಿ ಕನ್ನಡವನ್ನು ಕಲಿಯಬಹುದಾದುದರಿಂದ ಏಳನೇ ತರಗತಿ ತೇರ್ಗಡೆಗೊಂಡ ಬಳಿಕ ಈ ಸಂಸ್ಥೆಗೆ ಸೇರಿ ಟೆಕ್ನಿಕಲ್‌ ಶಿಕ್ಷಣ ಪಡೆಯಲು ಅನುಕೂಲವಾಗಿದೆ. 

ಇಲ್ಲಿ ಮೂರು ವರ್ಷ ಕಲಿತು ಹತ್ತನೇ ತರಗತಿ ಯಲ್ಲಿ ತೇರ್ಗಡೆಗೊಳ್ಳುವ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಸರ್ಟಿಫಿಕೇಟ್‌ ಸಹಿತ ಐ.ಟಿ.ಐ. ಸಮಾನಾಂತರ ಪ್ರಮಾಣಪತ್ರವನ್ನೂ ನೀಡಲಾಗುತ್ತಿದೆ. ನ್ಯಾಶನಲ್‌ ವೊಕೇಶನಲ್‌ ಕ್ವಾಲಿಫಿಕೇಶನ್‌ ಫ್ರೇಂ ವರ್ಕ್‌ನನ್ವಯ ರಾಷ್ಟ್ರೀಯ ಮಟ್ಟದ ಮಾನ್ಯತೆ ಹೊಂದಿದ ಪ್ರಮಾಣ ಪತ್ರ ಇದಾಗಿದೆ.

ಇಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮುಂದೆ ಪಾಲಿಟೆಕ್ನಿಕ್‌ನಲ್ಲಿ ಶೇ.10ರಷ್ಟು ಸೀಟು ಮೀಸಲಿರಿ ಸಲಾಗುತ್ತಿದೆ. ಪಾಲಿಟೆಕ್ನಿಕ್‌ ತೇರ್ಗಡೆಗೊಂಡರೆ ಆ ಮೀಸಲಾತಿ ಮೂಲಕ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ನೇರವಾಗಿ ಮೂರನೇ ವರ್ಷಕ್ಕೆ ಸೇರಬಹುದಾದುದರಿಂದ ಗಡಿನಾಡಿನ ಕನ್ನಡ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್‌ ಪದವಿ ಪಡೆಯುವ ಸುಲಭವಾದ ಅವಕಾಶ ಇದಾಗಿರುತ್ತದೆ. ಮೊಗ್ರಾಲ್‌ ಪುತ್ತೂರು ಸರಕಾರಿ ತಾಂತ್ರಿಕ ಶಿಕ್ಷಣ ಪ್ರೌಢ ಶಾಲೆಯ ಎಂಟನೇ ತರಗತಿಯಲ್ಲಿ 60 ಸೀಟುಗಳಿದ್ದು, ಫಿಟ್ಟಿಂಗ್‌, ವೆಲ್ಡಿಂಗ್‌, ಇಲೆಕ್ಟ್ರಿಕಲ್‌ ವಯರಿಂಗ್‌ ಆ್ಯಂಡ್‌ ಮೈಂಟೆನೆನ್ಸ್‌ ಆಫ್‌ ಡೊಮೆಸ್ಟಿಕ್‌ ಅಪ್ಲಯನ್ಸಸ್‌, ಇಲೆಕ್ಟ್ರಾನಿಕ್ಸ್‌ ಎಂಬ ನಾಲ್ಕು ಟ್ರೇಡ್‌ಗಳು ಹಾಗೂ ಹತ್ತನೇ ತರಗತಿಯಲ್ಲಿ ಸಾರ್ವಜನಿಕ ಶಿಕ್ಷಣದ ವಿಷಯಗಳ ಜತೆಗೆ ಆಯ್ದ ಟ್ರೇಡ್‌ ತರಬೇತಿ ಹಾಗೂ ಎನ್ವಿಕ್ಯೂಎಫ್‌ ಲೆವೆಲ್‌- 2 ತರಬೇತಿ ನೀಡಲಾಗುತ್ತಿದೆ. ಒಂಬತ್ತನೇ ತರಗತಿಯಿಂದ ಎಂಜಿನಿಯರಿಂಗ್‌ ವಿಷಯವನ್ನೂ ಬೋಧಿಸಲಾಗುತ್ತಿದೆ. ಅಲ್ಲದೆ ಎಂಟನೇ ತರಗತಿ ವಾರ್ಷಿಕ ಪರೀಕ್ಷೆಯ ಅಂಕ, ವಿದ್ಯಾರ್ಥಿಗಳ ಆಸಕ್ತಿ, ತರಬೇತಿಗಳಿಗಿರುವ ಲಭ್ಯತೆ ಪರಿಗಣಿಸಿ ತಮ್ಮ ಆಸಕ್ತಿಯ ವಿಷಯ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಕಾಸರಗೋಡು, ಮೊಗ್ರಾಲ್‌, ಮಧೂರು, ಕೂಡ್ಲು, ಕುಂಬಳೆ ಪರಿಸರದ ವಿದ್ಯಾರ್ಥಿಗಳಲ್ಲದೆ ಈ ಪ್ರದೇಶದಲ್ಲಿ ವಸತಿ ಸೌಕರ್ಯವಿರುವ ಇತರ ಪ್ರದೇಶಗಳ ಮಕ್ಕಳಿಗೂ ಈ ಕೋರ್ಸ್‌ ಮಾಡಲು ಸುಲಭವಾಗಲಿದೆ. ಕಳೆದ ವರ್ಷ ಮೊದಲ ಬ್ಯಾಚಿಗೆ 11 ಕನ್ನಡ ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದು, ಎಲ್ಲರೂ ಉತ್ತಮ ಅಂಕಗಳನ್ನು ಪಡೆಯುತ್ತಿರುವರು ಎಂದು ತಿಳಿದು ಬಂದಿದೆ. ಕನ್ನಡ ಹಾಗು ಇಂಗ್ಲಿಷ್‌ ಮಾಧ್ಯಮಗಳಲ್ಲಿ ಕಲಿಯುವ ಕನ್ನಡಿಗ ವಿದ್ಯಾರ್ಥಿಗಳು ಈ ಕೋರ್ಸನ್ನು ಸೇರಿ ಪ್ರಯೋಜನವನ್ನು ಪಡೆಯದಿದ್ದರೆ ವಿದ್ಯಾರ್ಥಿಗಳ ಕೊರತೆಯ ನೆಪದಿಂದ ಕನ್ನಡ ವಿಷಯವನ್ನು ರದ್ದುಗೊಳಿಸಬಹುದು.

Advertisement

ಮುಂದಿನ ಮೂರು ವರ್ಷ ಸಾಕಷ್ಟು ವಿದ್ಯಾರ್ಥಿಗಳು ಸೇರ್ಪಡೆಗೊಂಡರೆ ಅನಂತರ ಈ ಕೋರ್ಸಿನ ಪ್ರಯೋಜನ ಅರಿವಾದಾಗ ಯಾರ ಪ್ರೇರಣೆಯೂ ಇಲ್ಲದೆ ಕನ್ನಡ ಮಕ್ಕಳು ಈ ತರಗತಿಗಳಿಗೆ ಸೇರಿ ಅದರ ಲಾಭ ಪಡೆಯಬಹುದು.
ಈ ಕೋರ್ಸಿನ ಉಪಯುಕ್ತತೆಯನ್ನು ಅರಿತ ಬೇರೆ ಜಿಲ್ಲೆಗಳ ಮಲಯಾಳಿಗಳು ಕೂಡ ಕಾಸರಗೋಡಿನಲ್ಲಿರುವ ತಮ್ಮ ಬಂಧುಗಳ ನಿವಾಸದಲ್ಲಿ ಮಕ್ಕಳಿಗೆ ವಸತಿ ವ್ಯವಸ್ಥೆ ಏರ್ಪಡಿಸಿ ಈ ಶಾಲೆಗೆ ಸೇರಿಸುತ್ತಿದ್ದಾರೆ ಎಂಬುದು ಗಮನಾರ್ಹ. ಎಪ್ರಿಲ್‌ ಮೊದಲ ವಾರದಿಂದ ಪ್ರವೇಶಕ್ಕಾಗಿ ಅರ್ಜಿ ನಮೂನೆಗಳನ್ನು ವಿತರಿಸಲಾಗುತ್ತಿದ್ದು, ಆಸಕ್ತ ಪೋಷಕರು ಹೆಚ್ಚಿನ ಮಾಹಿತಿಗಾಗಿ ಶಾಲೆಯ ಕಚೇರಿಯ ದೂರವಾಣಿ 04994-232969 ಅಥವಾ ಪ್ರಾಂಶುಪಾಲರ ಮೊಬೈಲ್‌ 9400006496 ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಕನ್ನಡಪರ ಸಂಘಟನೆಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next