ಡೊಂಬಿವಲಿ: ಮೊಗವೀರ ಪತ್ರಿಕೆಯ 78ರ ಸಂಭ್ರಮ ನಿಮಿತ್ತ ಲೇಖಕರ ಮತ್ತು ಓದುಗರ ಸಮಾವೇಶ ಕಾರ್ಯಕ್ರಮವು ಮಾ. 4 ರಂದು ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ಡೊಂಬಿವಲಿ ಶಾಖೆಯ ವತಿಯಿಂದ ಜ್ಞಾನೇಶ್ವರ ಕಾರ್ಯಾಲಯ, ಮಹಾತ್ಮಾ ಫುಲೆ ರೋಡ್, ವಿಷ್ಣು ನಗರ ಡೊಂಬಿವಲಿ ಪಶ್ಚಿಮ ಇಲ್ಲಿ ವಿಜೃಂಭಣೆಯಿಂದ ಜರಗಿತು.
ಪ್ರಾರಂಭದಲ್ಲಿ ಶಾಖೆಯ ಕಾರ್ಯಾಧ್ಯಕ್ಷ ಯುದುವೀರ್ ಪುತ್ರನ್ ಸ್ವಾಗತಿಸಿದರು. ಶಾಖೆಯ ಮಹಿಳಾ ವಿಭಾಗದ ಸದಸ್ಯರಾದ ಶಶಿಕಲಾ ಮೆಂಡನ್, ಬಿಂದಿಯಾ ಸಾಲ್ಯಾನ್ ಮತ್ತು ಸುಜಾತಾ ಪುತ್ರನ್ ಪ್ರಾರ್ಥನೆ ಹಾಡಿದರು. ವೇದಿಕೆಯಲ್ಲಿ ಅತಿಥಿಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಮಾವೇಶದ ಅಧ್ಯಕ್ಷತೆ ವಹಿಸಿದ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿಯವರು ಮಾತನಾಡುತ್ತಾ, ಮೊಗವೀರ ಪತ್ರಿಕೆಯು ವಿಶಿಷ್ಟ ಸ್ಥಾನಮಾನ ಹೊಂದಿರುವ ಪತ್ರಿಕೆಯಾಗಿದೆ. ಮುಂಬಯಿಯಲ್ಲಿ ಮೊಗವೀರ ಪತ್ರಿಕೆಯು ಒಂದು ಸಮಾಜದ ಪತ್ರಿಕೆಯಾಗಿ, ಒಂದು ಸಮಾಜದ ಕಲ್ಯಾಣಕ್ಕಾಗಿ ಸ್ಥಾಪನೆಗೊಂಡು ಮೊಗವೀರ ವ್ಯವಸ್ಥಾಪಕ ಮಂಡಳಿಯ ಮುಖವಾಣಿಯಾದರೂ ಅದು ಜಾತಿಯನ್ನು ಮೀರಿ ಬೆಳೆದಿರುವುದರಿಂದ ಜನಪ್ರಿಯಗೊಂಡಿದೆ. ಇದು ಈ ಪತ್ರಿಕೆಯ ವಿಶೇಷತೆ. ಜಾತಿಯ ಸಂಘಟನೆಗಳಿಂದ ನಡೆಸಲ್ಪಡುವ ಪತ್ರಿಕೆಗೆ ತನ್ನದೇ ಆದ ನಿಲುವು, ಧೋರಣೆ, ಧ್ಯೇಯಗಳಿರುತ್ತವೆ. ಅದರೊಡನೆ ಸಮಾಜಕ್ಕೆ ಸಾಹಿತ್ಯ -ಕಲೆ – ಕಾವ್ಯದ ಬಗ್ಗೆ ತಿಳಿಸಬೇಕಾದ ಅಗತ್ಯ ಇರುವುದರಿಂದ ಸಾಹಿತಿಗಳ ಲೇಖನಗಳನ್ನು ಪ್ರಕಟಿಸಬೇಕಾಗುತ್ತದೆ. ಮೊಗವೀರ ಪತ್ರಿಕೆಯು ಆಯೋಜಿಸುತ್ತಿರುವ ಇಂತಹ ಸಮಾವೇಶಗಳು ಮುಂಬಯಿ ಪತ್ರಿಕಾ ಕ್ಷೇತ್ರದಲ್ಲಿ ಒಂದು ಪ್ರಶಂಸನೀಯ ಮತ್ತು ದಾಖಲಾರ್ಹ ವಿಷಯ. ಇಂದಿನ ಸಮಾವೇಶಕ್ಕೆ ಆಯ್ದುಕೊಂಡ ವಿಚಾರಗಳು ಸಹ ಮಹಿಳೆಯರ ಬದುಕು – ಸಂಘರ್ಷ, ತ್ಯಾಗ, ಅನ್ಯಾಯದ ವಿರುದ್ಧ ಹೋರಾಟಕ್ಕೆ ಸಂಬಂಧಿಸಿದ ವಿಷಯಗಳಾದುದರಿಂದ ಸಮಯೋಚಿತವಾಗಿದೆ. ಆದಿಕಾಲದಿಂದಲೂ ಮಹಿಳೆಯರು ಗ್ರಾಮದ ರಕ್ಷಕಿ, ಹೋರಾಟದ ವೀರ ಮಹಿಳೆಯರಾಗಿ ಕಾರ್ಯ ನಿರ್ವಹಿಸಿದವರು. ಆದರೆ ಅವರ ಪರಿಚಯವನ್ನು ಇಂದು ಮಾಡಬೇಕಾದ ಅನಿವಾರ್ಯತೆ ಇದೆ. ತುಳುನಾಡಿನ ಸತ್ಯದ ಮಣ್ಣಿನಲ್ಲಿ ಸತ್ಯಕ್ಕಾಗಿ ತ್ಯಾಗ ಮಾಡಿದ ಮಹಿಳೆಯರ ಉಲ್ಲೇಖ ತುಳು ಪಾಡªನಗಳಲ್ಲಿ ಇದೆ ಎಂದು ನುಡಿದರು.
ಸಮಾವೇಶವನ್ನು ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಕೃಷ್ಣ ಕುಮಾರ್ ಎಲ್. ಬಂಗೇರ ಉದ್ಘಾಟಿಸಿ, ಮಂಡಳಿಯು ಕಳೆದ 78 ವರ್ಷಗಳಿಂದ ಪ್ರಕಟಿಸುತ್ತಿರುವ ಮೊಗವೀರ ಪತ್ರಿಕೆಯು ದಿನೇ ದಿನೇ ಪ್ರಗತಿಯತ್ತ ಸಾಗುತ್ತಿದ್ದು, ಓದುಗರು ಈ ಪತ್ರಿಕೆಯ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ತುಳುಕೂಟ ಡೊಂಬಿವಲಿ ಇದರ ಅಧ್ಯಕ್ಷ ಕಾವೂರು ಗುತ್ತು ಹೇಮಂತ್ ಶೆಟ್ಟಿ ಅವರು ಮಾತನಾಡಿ, ಬಂಟರು ಮತ್ತು ಮೊಗವೀರ ಸಮಾಜವು ಅಕ್ಕ ತಂಗಿಯರ ಮಕ್ಕಳಾದುದರಿಂದ ಸಮಾಜ ಸೇವೆಯಲ್ಲಿ ಯಾವಾಗಲೂ ಮುಂಚೂಣಿ ಯಲ್ಲಿರುತ್ತಾರೆ. 117 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮಂಡಳಿಯ ಸಾಧನೆ ಅಮೋಘವಾದುದು ಎಂದ ಅವರು ಡೊಂಬಿವಲಿ ಶಾಖೆಯ ಕ್ರಿಯಾಶೀಲ ಚಟುವಟಿಕೆಯನ್ನು ಶ್ಲಾಘಿಸಿದರು.
ಮೊಗವೀರ ಪತ್ರಿಕೆಯ ಸಂಪಾದಕ ಅಶೋಕ್ ಸುವರ್ಣರು ಪ್ರಾಸ್ತಾವಿಕವಾಗಿ ಮಾತನಾಡಿ, ಡೊಂಬಿವಲಿಯಲ್ಲಿ ನಡೆಯುವ 3 ನೇ ಸಮಾವೇಶವು ಡೊಂಬಿವಲಿ ಶಾಖೆಯ ಅಪೇಕ್ಷೆ ಮೇರೆಗೆ ನಡೆಯುತ್ತಿದ್ದು ಈಗಾಗಲೇ ಒಟ್ಟು ಎಂಟು ಸಮಾವೇಶಗಳನ್ನು ನಡೆಸಲಾಗಿದೆ. ಪತ್ರಿಕೆಗೆ ಲೇಖಕರು ಮತ್ತು ಓದುಗರು ಬಹು ಅಮೂಲ್ಯ ಸೊತ್ತು ಆಗಿದ್ದು, ಇಂತಹ ಸಮಾವೇಶವು ಪತ್ರಿಕೆಯ ಪ್ರಗತಿಗೆ ಪೂರಕವಾಗುವುದು ಎಂದರು.
ವೇದಿಕೆಯಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿಯ ಟ್ರಸ್ಟಿ ಜಿ.ಕೆ. ರಮೇಶ್, ಡೊಂಬಿವಲಿ ಸಮಿತಿಯ ಕಾರ್ಯದರ್ಶಿ ಕೇಶವ ಎನ್. ಬಂಗೇರ, ಡೊಂಬಿವಲಿ ಶಾಖೆಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಗೀತಾ ಶೇಖರ್ ಮೆಂಡನ್ ಉಪಸ್ಥಿತರಿದ್ದರು. ಡೊಂಬಿವಲಿ ವಲಯದ ಮಕ್ಕಳಿಂದ ಕರ್ನಾಟಕ ರಾಜ್ಯದ ಹಿರಿಮೆಯನ್ನು ಸಾರುವ ಮನಮೋಹಕ ನೃತ್ಯ ಸಾದರಗೊಂಡಿತು.