Advertisement

ಮೊಗವೀರ ಮಹಾಜನ ಸೇವಾ ಸಂಘ: ಪ್ರಥಮ ವಾರ್ಷಿಕೋತ್ಸವ 

03:08 PM Aug 29, 2017 | |

ಡೊಂಬಿವಲಿ: ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ) ಇದರ ಡೊಂಬಿವಲಿ ಶಾಖೆಯ ಮೊದಲ ವಾರ್ಷಿಕೋತ್ಸವ ಸಮಾರಂಭವು ಆ.20ರಂದು ಬೆಳಗ್ಗೆ ಡೊಂಬಿವಲಿ ಪೂರ್ವದ ಸಾವಿತ್ರಿಬಾಯಿ ಫುಲೆ ಸಭಾಗೃಹದಲ್ಲಿ ಮುಂಬಯಿಯ ಮೊಗವೀರ ಕೋ. ಆಪರೇಟಿವ್‌ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಸದಾನಂದ ಕೋಟ್ಯಾನ್‌ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಅಧ್ಯಕ್ಷೀಯ ನುಡಿಗಳನ್ನಾಡಿದ ಕೋಟ್ಯಾನ್‌ ಅವರು, ನೂರಾರು ವರ್ಷಗಳ ಐತಿಹಾಸಿಕ ಹಿನ್ನೆಲೆಯುಳ್ಳ ಸಮಸ್ತ ಮೊಗವೀರ ಸಮಾಜ ಬಾಂಧವರನ್ನು ಒಗ್ಗೂಡಿಸುವ ಕೆಲಸ ನಡೆಯಲಿ, ಪ್ರತಿಯೊಂದು ಮೊಗವೀರನ ಮನೆಯಲ್ಲಿ ಅನಘÂì ಪ್ರತಿಭೆಗಳಿದ್ದು, ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಘನಕಾರ್ಯ ಸಮಾಜದ ಮುಖಂಡರು ಮಾಡಬೇಕಾಗಿದೆ ಎಂದರು.

Advertisement

ಹುಟ್ಟು ಸಾವು ಪರಮಾತ್ಮನ ಕೊಡುಗೆಯಾಗಿದ್ದರೂ ಸತತ ಪರಿಶ್ರಮ, ಪ್ರಾಮಾಣಿಕ ಪ್ರಯತ್ನದಿಂದ ಜೀವನ ಸಾರ್ಥಕಗೊಳಿಸಬೇಕು ಎಂದ  ಅವರು, ಮೊಗವೀರರ  ಬಗ್ವಾಡಿ ಸಂಸ್ಥೆಯಲ್ಲಿ ಸಮಸ್ತ ಮೊಗವೀರ ಬಾಂಧವರಿಗೆ ಸದಸ್ಯತ್ವ ನೀಡುವ ಕಾರ್ಯ ನಡೆಯಲೆಂದು ಧುರಿಣರಿಗೆ ಕಿವಿಮಾತು ಹೇಳಿದರಲ್ಲದೆ, ಡೊಂಬಿವಲಿ ಶಾಖೆಯ ಕಾರ್ಯವೈಖರಿಯನ್ನು ಶ್ಲಾಘಿಸಿ ಸಮಾಜ ಬಾಂಧವರ ಸಹಾಯ ಸಹಕಾರಕ್ಕೆ ತಾವು ಸದಾ ಬದ್ಧ ಎಂದು ತಿಳಿಸಿದರು.

ಗೌರವ ಅತಿಥಿಗಳಾಗಿ ಆಗಮಿಸಿದ ಡೊಂಬಿವಲಿ ಕರ್ನಾಟಕದ ಸಂಘದ ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ ಇಂದ್ರಾಳಿ ಅವರು ಮುಂಬಯಿಯ ಶೈಕ್ಷಣಿಕ ಕ್ಷೇತ್ರದಲ್ಲಿ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದ ಜಾತಿ ಸಂಸ್ಥೆಗಳಲ್ಲಿ ಮೊಗವೀರರಿಗೆ ಅಗ್ರಸ್ಥಾನವಿದ್ದು, ಮುಂಬಯಿ ಮಹಾನಗರದಲ್ಲಿ ಜಾತಿ ಸಂಸ್ಥೆಗಳನ್ನು ಹುಟ್ಟು ಹಾಕಿ ಅವುಗಳ ಮುಖಾಂತರ ಸಾಮಾಜಿಕ ಸೇವೆಯನ್ನು ಪ್ರಾರಂಭಿಸಿದ ಹೆಗ್ಗಳಿಕೆ ಸಮಾಜದ್ದಾಗಿದೆ. ಡೊಂಬಿವಲಿ ನಗರ ಮಹಾರಾಷ್ಟ್ರದ ತುಳುನಾಡು. 50 ಸಹಸ್ರ ತುಳುನಾಡಿನ ಜನ ವಾಸಿಸುವ ಡೊಂಬಿವಲಿಯಲ್ಲಿ ನಾನು ಒಬ್ಬನಾಗಿರುವುದು ಹೆಮ್ಮೆಯ ಸಂಗತಿ. ಸಂಘಟನೆ ಗಳನ್ನು ಕಟ್ಟುವುದು ಸುಲಭ.  ಉಳಿಸಿ ಬೆಳೆಸು ವುದು ಸುಲಭವಲ್ಲ. ಸಂಘ ಸಂಸ್ಥೆಗಳು ನಿಂತ ನೀರಾಗದೆ ಹರಿಯುವ ನದಿಯಂತಾಗಬೇಕು ಎಂದರು.

ಕುಂದಾಪುರ ಶಾಖೆಯ  ಅಧ್ಯಕ್ಷ ಕರುಣಾಕರ ಕಾಂಚನ್‌ ಅವರು ಮಾತನಾಡಿ, ಯಾವುದೇ ಸಾಮಾಜಿಕ ಕಾರ್ಯ ಕೇವಲ ಒಬ್ಬರಿಂದ ಸಾಧ್ಯವಿಲ್ಲ. ಸಂಘಟನಾತ್ಮಕವಾಗಿ ದುಡಿದರೆ ಯಶಸ್ಸು ನಿಶ್ಚಿತ. ಮೊಗವೀರ ಸಂಸ್ಥೆಗಳು ವಿದ್ಯೆ ಹಾಗೂ ಆರೋಗ್ಯಕ್ಕೆ ಆದ್ಯತೆ ನೀಡಿದ್ದು, 1 ಲಕ್ಷ ಯೂನಿಟ್‌ ರಕ್ತ ಸಂಗ್ರಹಿಸಿರುವುದು ಒಂದು ದಾಖಲೆಯಾಗಿದ್ದು, ಮೊಗವೀರರ ಸಮಾಜ ಸೇವೆ ಅಭಿನಂದನೀಯ ಎಂದು ಹೇಳಿದರು.

ಉದ್ಯಮಿ ಮಹಾಬಲ ಕುಂದರ್‌ ಅವರು ಮಾತನಾಡಿ,  ಸಂಘದ ಸಮಾಜ ಮುಖೀ ಕಾರ್ಯ ಪ್ರಶಂಸನೀಯ. ಆರ್ಥಿಕವಾಗಿ ಹಿಂದುಳಿದ ಪ್ರತಿಭೆ ಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕಾರ್ಯ ಇನ್ನಷ್ಟು ನಡೆಯಲಿ ಎಂದು ಹಾರೈಸಿದರು.

Advertisement

ಸಂಸ್ಥೆಯ ಪದಾಧಿಕಾರಿಗಳು ಗಣ್ಯರನ್ನು ಶಾಲು ಹೊದಿಸಿ, ಶ್ರೀಫಲ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಅಂತೆಯೇ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ವಿತರಿಸಲಾಯಿತು.

ಸಮಾರಂಭಕ್ಕೆ ಆಗಮಿಸಿದ ಸಾವಿರಕ್ಕಿಂತಲೂ ಹೆಚ್ಚು ಜನರಿಗೆ ಭೋಜನ ವ್ಯವಸ್ಥೆ ಮಾಡಿದ ನಾರಾಯಣ ಹಾಗೂ ಇಂದಿರಾ ಚಂದನ್‌ ದಂಪತಿಯನ್ನು ಶಾಲು ಹೊದಿಸಿ, ಶ್ರೀಫಲ ಹಾಗೂ ನೆನಪಿನ ಕಾಣಿಕೆಯೊಂದಿಗೆ ಸಮ್ಮಾನಿಸಲಾಯಿತು. ಮೊಗವೀರ ಸೇವಾ ಸಂಘ ಮುಂಬಯಿ ಇದರ ಅಧ್ಯಕ್ಷ ಎನ್‌. ಎಚ್‌. ಬಗ್ವಾಡಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.

ಇನ್ನೋರ್ವ ಅತಿಥಿ ಸುರೇಶ್‌ ಕುಂದರ್‌ ಅವರು ಸಂಘದ ಸಾಧನೆಗಳಲ್ಲಿ ಮಾತೃ ಸಂಸ್ಥೆಯ ಕಾರ್ಯ ಮಹತ್ವದ್ದಾಗಿದ್ದು, ಸಂಘದ ಶಾಖೆಗಳು ಮಾತೃ ಸಂಸ್ಥೆಯನ್ನು ಕಡೆಗಣಿಸಬಾರದು ಎಂದು ಕಿವಿಮಾತು ಹೇಳಿದರು.

ಡೊಂಬಿವಲಿ ಶಾಖೆಯ ಭಾಸ್ಕರ್‌ ಕಾಂಚನ್‌ ಸ್ವಾಗತ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿ,  ಸಂಸ್ಥೆ ನಡೆದು ಬಂದ ದಾರಿ ಹಾಗೂ ಅದರ ಯೋಚನೆ ಹಾಗೂ ಯೋಜನೆಗಳನ್ನು ವಿವರಿಸಿದರು. ಸಂಘದ ಅಭಿವೃದ್ಧಿಗಾಗಿ ಸಹಕರಿಸಿದ ಮಹಾನೀಯರನ್ನು ಗೌರವಿಸಲಾಯಿತು. ಜಗದೀಶ್‌  ಅವರ ಪ್ರಾರ್ಥನೆ ಹಾಗೂ ದೀಪ ಪ್ರಜ್ವಲನೆಯೊಂದಿಗ ಉದ್ಘಾಟಿಸಲ್ಪಟ್ಟ ಕಾರ್ಯಕ್ರಮವನ್ನು ಯದುವೀರ ಪುತ್ರನ್‌ ನಿರೂಪಿಸಿದರು. ಸುರೇಂದ್ರ ನಾಯ್ಕ ವಂದಿಸಿದರು.

 ಗೋಪಾಲ್‌ ಪುತ್ರನ್‌, ಕೆ. ಕೆ. ಕಾಂಚನ್‌, ಶೇಖರ್‌ ಮೆಂಡನ್‌, ಮಹಾಬಲ ಕುಂದರ್‌, ಸುಚಿತ್ರಾ ಪುತ್ರನ್‌ ನಾಯಕ್‌ ಹಾಗೂ ಡೊಂಬಿವಲಿ ಶಾಖೆಯ ಪದಾಧಿಕಾರಿಗಳಾದ ಭಾಸ್ಕರ ಕಾಂಚನ್‌, ನಾರಾಯಣ ಚಂದನ್‌, ಬಾಬು ಮೊಗವೀರ, ಸುರೇಶ್‌ ನಾಯ್ಕ, ಮಹೇಂದ್ರ ಕುಂದರ್‌ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ವಿವಿಧ ಸಂಘ ಸಂಸ್ಥೆಗಳ ಸದಸ್ಯರಿಂದ ನೃತ್ಯವೈಭವ ಹಾಗೂ ರಸಮಂಜರಿ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು.  

ಚಿತ್ರ-ವರದಿ: ಗುರುರಾಜ್‌ ಪೋತನೀಸ್‌

Advertisement

Udayavani is now on Telegram. Click here to join our channel and stay updated with the latest news.

Next