Advertisement
ತುಳು, ಕೊಂಕಣಿ, ಬ್ಯಾರಿ, ಅರೆಭಾಷೆ ಹಾಗೂ ಕೊಡವ ಸಾಹಿತ್ಯ ಅಕಾಡೆಮಿಗಳ ನೂತನ ಅಧ್ಯಕ್ಷರೊಂದಿಗೆ ಮಂಗಳವಾರ “ಉದಯವಾಣಿ’ಯ ಮಂಗಳೂರು ಕಚೇರಿಯಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ತುಳು ಸಾಹಿತ್ಯ ಅಕಾಡೆಮಿಯ ದಯಾನಂದ ಕತ್ತಲಸಾರ್, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಜಗದೀಶ್ ಪೈ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ, ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಹಾಗೂ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಪಾರ್ವತಿ ಅಪ್ಪಯ್ಯ ಅವರು ತಮ್ಮ ಕಾರ್ಯ ಯೋಚನೆ-ಯೋಜನೆಗಳ ಕುರಿತು ಸುದೀರ್ಘ ವಿಚಾರ ವಿನಿಮಯ ಮಾಡಿದರು.
ತುಳು ಭಾಷೆಗೆ ಮೊದಲು ರಾಜ್ಯದ ಅಧಿಕೃತ ಭಾಷೆಯ ಮಾನ್ಯತೆ ಸಿಗುವ ನಿಟ್ಟಿನಲ್ಲಿ ಡಾ|ಡಿ.ವೀರೇಂದ್ರ ಹೆಗ್ಗಡೆ ಸೇರಿದಂತೆ ಪ್ರಮುಖರ ನೇತೃತ್ವದಲ್ಲಿ, ಸಂಸದರು-ಶಾಸಕರ ಸಹಕಾರದೊಂದಿಗೆ ಒಟ್ಟು ಕಾರ್ಯಯೋಜನೆ ರೂಪಿಸಲಾಗುವುದು. ವಿಶ್ವಮಟ್ಟದ ತುಳು ಸಮ್ಮೇಳನ, ಮಕ್ಕಳ ತುಳು ಸಮ್ಮೇಳನ, ಶಾಲಾ ಮಕ್ಕಳಿಗೆ ತುಳುನಾಡಿನ ಆಟೋಟಗಳನ್ನು ಪರಿಚಯಿಸುವ ಕ್ರೀಡಾಕೂಟ, ತುಳು ಪಠ್ಯವನ್ನು ದ್ವಿತೀಯ ಪಿಯುಸಿವರೆಗೆ ವಿಸ್ತರಿಸುವ ಕಾರ್ಯಕ್ರಮ ಆಯೋಜಿಸಲಾಗುವುದು.
-ದಯಾನಂದ ಕತ್ತಲಸಾರ್, ಅಧ್ಯಕ್ಷರು, ತುಳು ಅಕಾಡೆಮಿ
ಕೊಂಕಣಿ ಭವನಕ್ಕೆ ಯತ್ನ
ಕೊಂಕಣಿ ಮಾತನಾಡುವ ಎಲ್ಲ 42 ಸಮುದಾಯಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯಗತ ಮಾಡಲಾಗುವುದು. ಕೊಂಕಣಿ ಭವನ ನಿರ್ಮಾಣಕ್ಕೂ ಪ್ರಯತ್ನಿಸಲಾಗುವುದು.
-ಡಾ.ಜಗದೀಶ್ ಪೈ, ಅಧ್ಯಕ್ಷರು, ಕೊಂಕಣಿ ಅಕಾಡೆಮಿ ಪಂಚಭಾಷಾ ಸಮ್ಮೇಳನ
ಬ್ಯಾರಿ ಕಲೆ, ಸಾಹಿತ್ಯ, ಸಂಸ್ಕೃತಿಗೆ ಅಮೂಲ್ಯ ಸೇವೆ ಸಲ್ಲಿಸಿದ ಕಲಾವಿದರಿಗೆ ಮಾಸಾಶನ, ಬ್ಯಾರಿ, ತುಳು, ಕೊಂಕಣಿ, ಅರೆ ಭಾಷೆ ಹಾಗೂ ಕೊಡವ ಭಾಷಾ ಅಕಾಡೆಮಿಗಳನ್ನು ಒಟ್ಟು ಸೇರಿಸಿ ಪಂಚಭಾಷಾ ಸಮ್ಮೇಳನ ಆಯೋಜಿಸುವ ಚಿಂತನೆಯಿದೆ. ಬ್ಯಾರಿ ಸಾಹಿತ್ಯ ಅಕಾಡೆಮಿಯು ಬ್ಯಾರಿ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಸೇವೆಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿದ್ದು, ಇದಕ್ಕೆ ಜಾತಿ, ಧರ್ಮದ ನೆರಳು ಬೀಳಬಾರದು.
-ರಹೀಂ ಉಚ್ಚಿಲ, ಅಧ್ಯಕ್ಷರು, ಬ್ಯಾರಿ ಅಕಾಡೆಮಿ
Related Articles
ಅರೆಭಾಷಾ ಸಂಸ್ಕೃತಿ, ಸಾಧನೆಗಳನ್ನು ಸಮಾಜಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಮ್ಯೂಸಿಯಂ ನಿರ್ಮಿಸುವ ಉದ್ದೇಶವಿದೆ. ಅದರೊಂದಿಗೆ ಅರೆಭಾಷೆಯಲ್ಲಿ ಉತ್ತಮ ಪ್ರಾದೇಶಿಕ ಚಲನಚಿತ್ರ ಮತ್ತು ರಂಗ ಪ್ರಯೋಗ ಚಟುವಟಿಕೆಯ ದೂರದೃಷ್ಟಿ ಹೊಂದಲಾಗಿದೆ.
-ಲಕ್ಷ್ಮೀನಾರಾಯಣ ಕಜೆಗದ್ದೆ, ಅಧ್ಯಕ್ಷರು, ಅರೆಭಾಷೆ ಅಕಾಡೆಮಿ
Advertisement
ಕೊಡವ ಭಾಷಿಕರ ವಿಶ್ವಮೇಳಕೊಡವ ಭಾಷಾ ಸಂಸ್ಕೃತಿಗೆ ಸಂಬಂಧಿಸಿ ಆಚಾರ-ವಿಚಾರ, ಪದ್ಧತಿ, ಪರಂಪರೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಜಗತ್ತಿನಾದ್ಯಂತ ಇರುವ ಕೊಡವ ಭಾಷಿಕರನ್ನು ಒಂದೆಡೆ ಸೇರಿಸಿ ವಿಶ್ವಮೇಳ ನಡೆಸಲಾಗುವುದು. ಎಲ್ಲ ಕೊಡವ ಭಾಷಿಕರನ್ನು ಸೇರಿಸಿ ಸಂಸತ್ ಆಯೋಜನೆಯ ಯೋಚನೆಯಿದೆ. ತುಳುವಿನಂತೆ ಕೊಡವ ಭಾಷೆಯೂ 8ನೇ ಪರಿಚ್ಛೇದಕ್ಕೆ ಸೇರಬೇಕಿದೆ.
-ಡಾ.ಪಾರ್ವತಿ ಅಪ್ಪಯ್ಯ, ಅಧ್ಯಕ್ಷರು, ಕೊಡವ ಅಕಾಡೆಮಿ.