ಶೃಂಗೇರಿ: ಭತ್ತ ಬೆಳೆಯುವ ರೈತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದರೂ, ಕೋವಿಡ್ ಕಾರಣದಿಂದ ತವರಿಗೆ ಆಗಮಿಸಿದ ಯುವಕರ ತಂಡ, ಸ್ಥಳೀಯರ ಸಹಕಾರ ಪಡೆದು ಭತ್ತದ ಗದ್ದೆ ಸಾಗುವಳಿಗೆ ಮುಂದಾಗಿದೆ.
ಮೆಣಸೆ ಗ್ರಾಪಂನ ಮಸಿಗೆ ಗ್ರಾಮದ ಪಡುಬೈಲಿನಲ್ಲಿ ಇಂಥಹ ಪ್ರಯತ್ನವೊಂದು ನಡೆದಿದ್ದು, 8-10 ರೈತರು ಒಟ್ಟಾಗಿ ಭತ್ತದ ಗದ್ದೆ ಸಾಗುವಳಿ ಮಾಡುತ್ತಿದ್ದಾರೆ. ಹತ್ತು ವರ್ಷದಿಂದ ಖಾಲಿ ಬಿದ್ದಿದ್ದ ಭತ್ತದ ಗದ್ದೆ ಈ ವರ್ಷ ನವ ವಧುವಿನಂತೆ ಸಾಗುವಳಿಗೆ ಸಿದ್ಧವಾಗುತ್ತಿದೆ. ಮುಂಬೈನ ಉದ್ಯಮಿ ಪ್ರಹೀಶ್ ಹೆಗ್ಡೆ, ಸ್ಥಳೀಯ ಉದ್ಯಮಿ ಪಿ.ಬಿ. ಶ್ರೀನಿವಾಸ್ ಸಾಗುವಳಿಗೆ ಮುಂದಾಳತ್ವ ವಹಿಸಿದ್ದು, ಗ್ರಾಮಸ್ಥರು ಒಗ್ಗಾಟ್ಟಾಗಿ ಈಗಾಗಲೇ ಪೂರ್ವಭಾವಿ ಕೆಲಸ ನಡೆಯುತ್ತಿದೆ.
ತುಂಗಾ ನದಿ ಸಮೀಪವಿರುವ ಸಮತಟ್ಟಾದ ಭತ್ತದ ಗದ್ದೆಯನ್ನು ಅಗತ್ಯವಾಗಿದ್ದ ಬೇಲಿ, ಸಂಪರ್ಕ ರಸ್ತೆ ಕೊರತೆ, ಕಾರ್ಮಿಕರ ಕೊರತೆ ಮುಂತಾದ ಕಾರಣದಿಂದ ಹಾಗೆಯೇ ಬಿಡಲಾಗಿತ್ತು. ಬೇಲಿ ಇಲ್ಲದ ಕಾರಣ ಜಾನುವಾರುಗಳು ವರ್ಷವಿಡೀ ಈ ಜಾಗದಲ್ಲಿ ಮೇಯುತ್ತಿದ್ದವು. ಗದ್ದೆಯನ್ನು ತಡವಾಗಿ ನಾಟಿ ಮಾಡಬೇಕಾಗಿದ್ದು, ನದಿಯಲ್ಲಿ ಉಂಟಾಗುವ ಪ್ರವಾಹ ಭತ್ತದ ಗದ್ದೆಯನ್ನು ಆವರಿಸುತ್ತದೆ. ಹಿಂದೆಯೂ ಸಾಗುವಳಿ ಮಾಡುತ್ತಿದ್ದಾಗ ತಡವಾಗಿ ನಾಟಿ ಮಾಡಲಾಗುತ್ತಿತ್ತು. ಅದರಂತೆ ಈ ವರ್ಷವೂ ಆಗಸ್ಟ್ ಎರಡನೇ ವಾರದಲ್ಲಿ ನಾಟಿ ಮಾಡಲು ಸಿದ್ಧತೆ ನಡೆಸಲಾಗಿದೆ. ಹೈಬ್ರಿಡ್ ತಳಿ ಭತ್ತದ ಬಿತ್ತನೆ ಮಾಡುವುದರಿಂದ ಬೇಗನೆ ಕಟಾವಿಗೆ ಬರುತ್ತದೆ.
ಬೆಂಗಳೂರು ಮತ್ತಿತರ ಕಡೆಗೆ ಉದ್ಯೋಗಕ್ಕಾಗಿ ತೆರಳಿದ್ದ ಯುವಕರು ಭತ್ತದ ಕೃಷಿಗೆ ಉತ್ಸಾಹ ತೋರಿದ್ದು,ಗದ್ದೆಗೆ ಸುತ್ತಲೂ ತಂತಿ ಬೇಲಿ ನಿರ್ಮಾಣ ಮಾಡಲಾಗಿದೆ. 10 ಎಕರೆಯಷ್ಟು ಜಾಗವನ್ನು ಸಾಗುವಳಿ ಮಾಡಲಾಗುತ್ತಿದೆ. ಮೊದಲ ಉಳುಮೆಯನ್ನು ಮಾಡಲಾಗಿದ್ದು, ಗದ್ದೆಯನ್ನು ಸಂಪರ್ಕಿಸುವ ರಸ್ತೆ ನಿರ್ಮಾಣ ಮಾಡಲಾಗಿದೆ. ಹೆಚ್ಚುವರಿ ನೀರು ಗದ್ದೆಗೆ ಬಾರದಂತೆ ಕಂದಕವನ್ನು ನಿರ್ಮಿಸಲಾಗಿದೆ. ಸಾಂಪ್ರದಾಯಿಕ ತಳಿ ಬಿತ್ತನೆ ಮಾಡುವುದಲ್ಲದೆ, ಹಿಂದಿನ ತಳಿಯಾದ ಹೆಗ್ಗೆ ಭತ್ತದ ಬೀಜವನ್ನು ಸಂಗ್ರಹಿಸಿ, ಬಿತ್ತನೆ ಮಾಡಲಾಗಿದೆ. ಆಹಾರ ಬೆಳೆ ಭತ್ತ ಬೆಳೆಯುವುದು ನಷ್ಟ ಎಂಬ ಕಾರಣಕ್ಕಾಗಿ ಬೆಳೆಯುವುದನ್ನೇ ಬಿಡುವುದು ಸರಿಯಲ್ಲ. ಬೇಲಿ, ಸಂಪರ್ಕ ರಸ್ತೆಗೆ ಒಮ್ಮೆ ಖರ್ಚಾದರೂ, ಶಾಶ್ವತ ಪರಿಹಾರ ದೊರಕುವುದರಿಂದ ಸಾಗುವಳಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಉದ್ಯೋಗಕ್ಕಾಗಿ ಪಟ್ಟಣ, ನಗರ ಸೇರಿದ್ದ ಯುವಕರು ಮನೆಗೆ ಮರಳಿ ಮತ್ತೆ ಕೃಷಿಯತ್ತ ಮುಖ ಮಾಡಿರುವುದು ಪೋಷಕರಿಗೆ ಖುಷಿ ತಂದಿದೆ. ಗ್ರಾಮದ ಕೃಷ್ಣಪ್ಪಗೌಡ, ಚಂದ್ರಶೇಖರ, ಶೇಷಪ್ಪ ಗೌಡ, ರತ್ನಮ್ಮ,ಧರ್ಮಪ್ಪ, ಗಣೇಶ್ ಮುಂತಾದವರು ಭತ್ತದ ಸಾಗುವಳಿ ಕೆಲಸಕ್ಕೆ ಕೈ ಜೋಡಿಸಿದ್ದಾರೆ.
ನಮ್ಮ ಹಳ್ಳಿಯಲ್ಲಿ ಭತ್ತದ ಗದ್ದೆ ಹಾಗೇ ಕಳೆದ ಹತ್ತು ವರ್ಷದಿಂದ ಬಿಡಲಾಗಿದ್ದು, ಮತ್ತೆ ಭತ್ತದ ಸಾಗುವಳಿ ಮಾಡಬೇಕು ಎಂಬ ಆಸೆಗೆ ಗ್ರಾಮಸ್ಥರು ಕೈ ಜೋಡಿಸಿದ್ದಾರೆ. ಬಹುತೇಕ ಎಲ್ಲರೂ ಕೃಷಿ ಕುಟುಂಬದವರೇ ಆಗಿದ್ದರೂ, ಬೇರೆ- ಬೇರೆ ಉದ್ಯೋಗವನ್ನರಸಿ, ಪಟ್ಟಣ,ನಗರ ಸೇರಿದ್ದಾರೆ. ಭತ್ತದ ಸಾಗುವಳಿಯನ್ನು ನಮ್ಮ ಹಿರಿಯರು ಕಾಳಜಿಯಿಂದ ಮಾಡುತ್ತಿದ್ದು, ಇದೀಗ ಮತ್ತೆ ಅದೇ ರೀತಿ ಸಾಗುವಳಿ ಮಾಡಬೇಕು ಎಂಬ ಹುಮ್ಮಸ್ಸು ಎಲ್ಲರದ್ದಾಗಿದೆ.
–ಪಿ.ಬಿ. ಶ್ರೀನಿವಾಸ್, ಪಡುಬೈಲು, ಶೃಂಗೇರಿ
ಇದೊಂದು ಹೊಸ ಬೆಳವಣಿಗೆಯಾಗಿದ್ದು, ಹಲವು ವರ್ಷದಿಂದ ಖಾಲಿ ಬಿದ್ದಿದ್ದ ಭತ್ತದ ಗದ್ದೆ ಸಾಗುವಳಿ ಆಗುತ್ತಿದೆ. ಇಲಾಖೆ ಮೂಲಕ ರೈತರಿಗೆ ಅಗತ್ಯವಾದ ತಾಂತ್ರಿಕ ಸಹಕಾರ, ಸೌಲಭ್ಯ ನೀಡಲಾಗುತ್ತದೆ.
–ಸಚಿನ್ ಹೆಗಡೆ, ಸಹಾಯಕ ಕೃಷಿ ನಿರ್ದೇಶಕ, ಕೃಷಿ ಇಲಾಖೆ, ಶೃಂಗೇರಿ