Advertisement

ಎಲ್ಲೆಡೆ ಮತ್ತೊಮ್ಮೆ ಮೋದಿ ಟ್ರೆಂಡ್‌: ಪ್ರತಾಪ್‌ ಸಿಂಹ

07:15 AM Mar 18, 2019 | Team Udayavani |

ಹುಣಸೂರು: ಈ ಬಾರಿ ಹಾಸನ ಜಿಲ್ಲೆಯಲ್ಲೂ ಮೋದಿ ಅಲೆ ಎದ್ದಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಲ್ಲಿಯೂ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷ, ಸಂಸದ ಪ್ರತಾಪಸಿಂಹ ವಿಶ್ವಾಸ ವ್ಯಕ್ತಪಡಿಸಿದರು.

Advertisement

ನಗರದ ಎಸ್‌ಎಲ್‌ವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಶಕ್ತಿ ಕೇಂದ್ರಗಳ ಪ್ರಮುಖರು ಮತ್ತು ಕಾರ್ಯದರ್ಶಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಐದು ವರ್ಷಗಳ ಹಿಂದೆ ಮೋದಿ ಅಭ್ಯರ್ಥಿಯಾಗಬೇಕೆಂದು ಬಿಜೆಪಿಗೆ ಜನತೆ ಆಶೀರ್ವದಿಸಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಬಡವರಿಗಾಗಿ ಹಲವಾರು ಯೋಜನೆಗಳನ್ನು ತಂದುಕೊಟ್ಟಿರುವ ಮೋದಿ ಪ್ರತಿಮನೆ-ಮನದಲ್ಲೂ ಚಿರಪರಿಚಿತರಾಗಿದ್ದಾರೆ. ಎಲ್ಲೆಡೆ ಮೋದಿ ಟ್ರಂಡ್‌ ಎದ್ದಿದೆ ಎಂದರು.

ಸೌಲಭ್ಯ: ಮೋದಿಯವರ ದೂರದೃಷ್ಟಿಯಿಂದಾಗಿ 10 ಕೋಟಿ ಕುಟುಂಬಗಳು ಆಯುಷ್ಮಾನ್‌ ಭಾರತ ಯೋಜನೆಗೊಳಪಟ್ಟಿದ್ದಾರೆ. ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ 15 ಕೋಟಿ ಮಂದಿಗೆ ವರ್ಷಕ್ಕೆ 6 ಸಾವಿರ ರೂ. ವಿತರಿಸಲಾಗುವುದು. 9 ಕೋಟಿ ಮಂದಿ ಪ್ರಧಾನಿ ಆವಾಸ್‌ ಯೋಜನೆಯಡಿ ಮನೆ ನಿರ್ಮಿಸಿಕೊಂಡಿದ್ದಾರೆ.

ಸೌಭಾಗ್ಯ ಯೋಜನೆಯಡಿ 2.5 ಕೋಟಿ ಮಂದಿಗೆ ವಿದ್ಯುತ್‌ ಸೌಲಭ್ಯ ಕಲ್ಪಿಸಲಾಗಿದೆ. 6 ಕೋಟಿ ಕುಟುಂಬಕ್ಕೆ ಉಚಿತ ಶೌಚಾಲಯ, 7 ಕೋಟಿ ಮನೆಗಳಿಗೆ ಉಚಿತ ಗ್ಯಾಸ್‌ ಸಂಪರ್ಕ ಕಲ್ಪಿಸಲಾಗಿದೆ. ಒಟ್ಟಾರೆ 25-30 ಕೋಟಿ ಮಂದಿ ಕೇಂದ್ರ ಸರ್ಕಾರದ ಸವಲತ್ತು ಪಡೆದುಕೊಂಡಿದ್ದು, ಮೋದಿಯವರ ಜನಪರ ಯೋಜನೆಗಳಿಂದ ಪ್ರತಿಹಳ್ಳಿಯ ಮಂದಿಗೂ ಚಿರಪರಿಚಿತವಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

Advertisement

ಮತ್ತೊಮ್ಮೆ ಮೋದಿ: ಚುನಾವಣೆ ಬಂತೆಂದರೆ ಇತರೆ ಪಕ್ಷದಲ್ಲಿ ಬೂತ್‌ಗೆಷ್ಟು ಹಣ-ಹೆಂಡ ಬಂದಿದೆ ಎಂಬ ಲೆಕ್ಕಾಚಾರದಲ್ಲಿದ್ದರೆ ನಮ್ಮ ಕಾರ್ಯಕರ್ತರು ಯಾವುದೇ ಆಮಿಷಕ್ಕೊಳಗಾಗದೆ ಬೂತ್‌ಗೆ ಎಷ್ಟು ಓಟು ಬಿದ್ದಿದೆ ಎಂದು ಲೆಕ್ಕ ಹಾಕುತ್ತಾರೆ. ಅದೇ ನಮ್ಮ ಅಭ್ಯರ್ಥಿಗೆ ಶ್ರೀ ರಕ್ಷೆ, ಇದೀಗ ರಾಜ್ಯವಿರಲಿ ದೇಶದಲ್ಲೇ ಮೋದಿ ಟ್ರಂಡ್‌ ಇದ್ದು, ಪ್ರತಿಯೊಬ್ಬ ಕಾರ್ಯಕರ್ತರೂ ಸಹ ಪಕ್ಷಕ್ಕಾಗಿ, ಮತ್ತೊಮ್ಮೆ ಮೋದಿಗಾಗಿ ಶ್ರಮಿಸುವಂತೆ ಮನವಿ ಮಾಡಿದರು.

ವಾರದ ಹಿಂದೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಘೋಷಣೆಯಾಗಿದೆ. ಕಳೆದ ಬಾರಿ ಪರಿಚಯವಿಲ್ಲದ ನನ್ನನ್ನು ಯಾವುದೇ ಆಮಿಷಕ್ಕೊಳಗಾಗದೆ ಆಶೀರ್ವದಿಸಿ ನನ್ನನ್ನು ಸಂಸತ್ತಿಗೆ ಕಳುಹಿಸಿದ್ದೀರಾ, ಮತ್ತೊಮ್ಮೆ ಆಶೀರ್ವದಿಸುವಂತೆ ಮನವಿ ಮಾಡಿದ ಅವರು, ಈ ಭಾಗದಲ್ಲಿ ಬಿಜೆಪಿ ಗೆಲುವು ಖಚಿತ ಎಂದರು.

ಬಯಕೆ: ಮೈಸೂರಿನಿಂದ ಕುಶಾಲನಗರದವರೆಗೆ ರೈಲ್ವೆ ಮಾರ್ಗಕ್ಕೆ ಅನುಮೋದನೆ ದೊರೆತ್ತಿದ್ದು, ಮುಂದಿನ ಐದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು.  ತಂಬಾಕು ಸಮಸ್ಯೆಗೆ ಶಾಶ್ವತ ಪರಿಹಾರ ಮತ್ತು ನಾಲ್ಕುಪಥದ ರಸ್ತೆ ನಿರ್ಮಾಣ ಹಾಗೂ ಕಾರ್ಯಕರ್ತರ ಕಷ್ಟ-ಸುಖದಲ್ಲಿ ಭಾಗಿಯಾಗುವುದಾಗಿ ಭರವಸೆ ಇದೆ. ಹನುಮ ಜಯಂತಿ ಉತ್ಸವವನ್ನು ಹಿಂದಿನಂತೆ ಆಚರಿಸುವ ಬಯಕೆ ಹೊಂದಿದ್ದೇನೆಂದರು. 

ಮಾ.22ಕ್ಕೆ ನಾಮಪತ್ರ ಸಲ್ಲಿಕೆ: ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾ.22 ರಂದು ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕೋರಿದರು.

ಪಕ್ಷ ಸೇರ್ಪಡೆ: ಸಭೆಯ ನಂತರ 25ಕ್ಕೂ ಹೆಚ್ಚು ಜೆಡಿಎಸ್‌ ಕಾರ್ಯಕರ್ತರನ್ನು ಸಂಸದ ಪ್ರತಾಪಸಿಂಹ ಪಕ್ಷದ ಭಾವುಟ ನೀಡಿ ಬಿಜೆಪಿಗೆ ಬರಮಾಡಿಕೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next