Advertisement

ಮೋದಿ ಭರವಸೆಗಳು ಸುಳ್ಳಿನ ಕಂತೆ: ಎಚ್.ವಿಶ್ವನಾಥ್‌

09:53 AM Jan 26, 2019 | Team Udayavani |

ಮೈಸೂರು: ಸುಳ್ಳು ಭರವಸೆಗಳ ಮೂಲಕ ನಾಲ್ಕೂ ಮುಕ್ಕಾಲು ವರ್ಷಗಳಿಂದ ಜನರನ್ನು ನಂಬಿಸಿ ಮೋಸ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೌಲ್ಯಮಾಪನ ಆರಂಭವಾಗಿದ್ದು, ನೋಟಿನ ಜೊತೆಗೆ ಮೋದಿಯ ಅಲೆಯೂ ಕೊಚ್ಚಿ ಹೋಗಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಅಡಗೂರು ಎಚ್.ವಿಶ್ವನಾಥ್‌ ವಾಗ್ಧಾಳಿ ನಡೆಸಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆ ಪೂರ್ವದಲ್ಲಿ ಮತ್ತು ಅಧಿಕಾರಕ್ಕೆ ಬಂದ ನಂತರ ಮೋದಿಯವರು ದೇಶದ ಜನತೆಗೆ ನೀಡಿದ್ದ ಭರವಸೆಗಳು ಹುಸಿಯಾಗಿದ್ದು, ಮೋದಿ ಸರ್ಕಾರ ಜನರನ್ನು ನಂಬಿಸಿ ಮೋಸ ಮಾಡಿದೆ. ಈಗ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ರಾಮ ಮಂದಿರ, ಮೇಲ್ಜಾತಿಯ ಹಿಂದುಳಿದವರಿಗೆ ಶೇ.10 ಮೀಸಲಾತಿಯ ಹೊಸ ಭರವಸೆಗಳನ್ನು ಕೊಡಲು ಪ್ರಾರಂಭಿಸಿದ್ದಾರೆ. ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ ಹಣ ಹಾಕುತ್ತೇನೆ ಅಂದಿದ್ದರು ಮೋದಿ. ಈಗ ಚುನಾವಣೆ ಮುಂದಿಟ್ಟುಕೊಂಡು ರೈತರ ಅಕೌಂಟ್‌ಗೆ ದುಡ್ಡು ಹಾಕ್ತೀನಿ ಅಂತಾ ಹೇಳ್ತಿದ್ದಾರೆ. ಇದೊಂದು ಸುಳ್ಳಿನ ಕಂತೆ, ಮೋದಿಯವರು ಜನರನ್ನು ನಂಬಿಸಲು ಮಾಡಿರುವ ತಂತ್ರ ಎಂದು ಜರಿದರು. ಪ್ರಜಾತಂತ್ರ ವ್ಯವಸ್ಥೆಯ ಈ ದೇಶದಲ್ಲಿ ಪ್ರಧಾನಿಯಾಗಲು ಮೋದಿ ಒಬ್ಬರೇ ಅರ್ಹ ವ್ಯಕ್ತಿ ಅಲ್ಲ. ಈ ಹಿಂದೆ ಪ್ರಧಾನಿಯಾಗಿದ್ದ ದೇವೇಗೌಡರೂ ಸೇರಿದಂತೆ ಹಲವು ನಾಯಕರು ನಮ್ಮ ನಡುವೆ ಇದ್ದಾರೆ ಎಂದರು.

ಬಿಜೆಪಿಗೆ 8 ಸ್ಥಾನ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 8 ಸ್ಥಾನ ಉಳಿಸಿಕೊಳ್ಳುವುದು ಕಷ್ಟ ಎಂದ ಅವರು, ಜೆಡಿಎಸ್‌-ಕಾಂಗ್ರೆಸ್‌ ಗಂಡ ಹೆಂಡತಿಯರಿದ್ದ ಹಾಗೆ, ಲೋಕಸಭೆ ಚುನಾವಣೆಗೆ ಕ್ಷೇತ್ರಗಳ ಹೊಂದಾಣಿಕೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ, ಅದೇನು ದೊಡ್ಡ ಸಮಸ್ಯೆ ಆಗಲಾರದು ಎಂದರು.

ಬರ ಪರಿಹಾರಕ್ಕೆ ಕೊಡಿ: ಬಿಜೆಪಿಯವರು ಸಮ್ಮಿಶ್ರ ಸರ್ಕಾರ ಉರುಳಿಸಲುಬ ಆಪರೇಷನ್‌ ಕಮಲ ಮಾಡಲು ಇಟ್ಟುಕೊಂಡಿರುವ ದುಡ್ಡನ್ನು ಬರ ಪರಿಹಾರಕ್ಕೆ ಕೊಡಲಿ, ಬಿ.ಎಸ್‌. ಯಡಿಯೂರಪ್ಪ ಅವರ ಬಗ್ಗೆ ನನಗೆ ಈಗಲೂ ಗೌರವ ಅಭಿಮಾನವಿದೆ. ರಾಜ್ಯದಲ್ಲಿ ಉತ್ತಮ ಆಡಳಿತ ಮಾಡಿದವರಲ್ಲಿ ಯಡಿಯೂರಪ್ಪ ಕೂಡ ಒಬ್ಬರು. ಈಗ ಏಕೆ ವಾಮಾಮಾರ್ಗದಿಂದ ಮುಖ್ಯಮಂತ್ರಿ ಆಗುವುದಕ್ಕೆ ಹೊರಟಿದ್ದೀರಿ, ಆಪರೇಷನ್‌ ಕಮಲ ಮಾಡಲು ಇಟ್ಟುಕೊಂಡಿರುವ ದುಡ್ಡನ್ನು ಬರ ಪರಿಹಾರಕ್ಕೆ ಕೊಡಿ ಎಂದು ಸಲಹೆ ನೀಡಿದರು.

ಯಡಿಯೂರಪ್ಪ ಅವರಿಗೆ ಆಪರೇಷನ್‌ ಮೇಲೆ ಅಷ್ಟೊಂದು ಆಸಕ್ತಿ ಯಾಕೋ ಗೊತ್ತಿಲ್ಲ. ಆಪರೇಷನ್‌ ಮೇಲೆ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಟೀಂ ಹೆಚ್ಚು ತಲೆ ಕೆಡಸಿಕೊಂಡಿದೆ. ಯಡಿಯೂರಪ್ಪ, ಶೋಭಾ ಟೀಂ ಬಿಟ್ಟು ಬಿಜೆಪಿಯಲ್ಲಿ ಮತ್ತಾರಿಗೂ ಆಪರೇಷನ್‌ ಮೇಲೆ ಆಸಕ್ತಿ ಇಲ್ಲ ಎಂದು ತಿಳಿಸಿದರು.

Advertisement

ನಮಗೆ ಸಿದ್ದರಾಮಯ್ಯ ಅಡ್ಡಗಾಲು

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆಗೆ ತಾವು ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ರನ್ನು ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಒಳಗೆ ಬಿಟ್ಟುಕೊಳ್ಳುತ್ತಿಲ್ಲ. ಸಮನ್ವಯ ಸಮಿತಿ ಪ್ರವೇಶ ಮಾಡಲು ಸಿದ್ದರಾಮಯ್ಯ ಅವರೇ ನಮಗೆ ಅಡ್ಡಗಾಲು ಹಾಕಿದ್ದಾರೆ ಎಂದು ವಿಶ್ವನಾಥ್‌ ಬೇಸರ ವ್ಯಕ್ತಪಡಿಸಿದರು. ಸರ್ಕಾರ ಬೀಳಲ್ಲ: ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಮ್ಮಿಶ್ರ ಸರ್ಕಾರ ಯಾವುದೇ ಕಾರಣಕ್ಕೂ ಬೀಳಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೈತ್ರಿ ಪಕ್ಷದ ಸಚಿವರು, ಶಾಸಕರು ರೆಸಾರ್ಟ್‌ ರಾಜಕಾರಣ ಮಾಡಿದ್ದು ಸಾಕು. ಬರ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು, ಮೇವು, ಉದ್ಯೋಗ ಒದಗಿಸುವುದು ನಮ್ಮ ಆದ್ಯತೆ ಆಗಬೇಕು. ಇದಕ್ಕಾಗಿ ಎÇ್ಲಾ ಸಚಿವರು, ಶಾಸಕರು ತಮ್ಮ ಕ್ಷೇತ್ರಗಳಿಗೆ ಮರಳುವಂತೆ ಪತ್ರ ಬರೆಯಲಿದ್ದೇನೆ. ನಿಮ್ಮ ಕ್ಷೇತ್ರಗಳಲ್ಲಿ ಜನ -ಜಾನುವಾರುಗಳು, ನೀರು -ಮೇವು ಇಲ್ಲದೆ ನರಳುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ತಲೆಕೆಡೆಸಿಕೊಳ್ಳಿ, ಸರ್ಕಾರದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಸೂಚನೆ ನೀಡುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next