Advertisement
ಮೂಲಗಳ ಪ್ರಕಾರ ಹೊಸದಾಗಿ ಕೈಗಾರಿಕೆ ಸ್ಥಾಪಿಸಲು ಬಯಸುವ ಕಂಪೆನಿಗಳು ಭೂಮಿ ಖರೀದಿ ಮಾಡಬೇಕಿಲ್ಲ. ಬದಲಿಗೆ ಭೋಗ್ಯಕ್ಕೆ ಪಡೆಯಬಹುದಾಗಿದ್ದು, ಇದರಿಂದ ವೆಚ್ಚ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಇನ್ನೊಂದೆಡೆ ಔದ್ಯಮಿಕ ವಲಯದಲ್ಲಿರುವ ಕಂಪೆನಿಗಳು ತಮ್ಮ ಮೂಲಸೌಕರ್ಯವನ್ನು ಇತರ ಕಂಪೆನಿಗಳೊಂದಿಗೆ ಹಂಚಿ ಕೊಳ್ಳಲು ನೀತಿಗಳನ್ನು ಸುಲಭವಾಗಿಸಲು ನಿರ್ಧರಿಸ ಲಾಗಿದೆ. ತಂತ್ರಜ್ಞಾನ, ವೆಚ್ಚ ಕಡಿತ, ಸಾರಿಗೆ ವ್ಯವಸ್ಥೆ ಸುಧಾರಣೆ, ಕೌಶಲ ಕಾರ್ಮಿಕರನ್ನು ಒದಗಿಸುವಿಕೆ ವಿಚಾರದಲ್ಲಿ ಈ ಔದ್ಯಮಿಕ ನೀತಿ ಮಹತ್ವದ ಬದಲಾವಣೆಗೆ ಕಾರಣವಾಗಲಿದೆ ಎಂದು ಔದ್ಯಮಿಕ ನೀತಿ ಹಾಗೂ ಉತ್ತೇಜನ ಇಲಾಖೆಯ ಅಧಿಕಾರಿ ರಮೇಶ್ ಅಭಿಷೇಕ್ ಹೇಳಿದ್ದಾರೆ.
ಬ್ಯಾಂಕ್‌ಗಳಲ್ಲಿ ಮೂರು ತಿಂಗಳಿನಿಂದ ಹಣಕಾಸಿನ ಹರಿವಿನ ಸಮಸ್ಯೆ ಉಂಟಾಗಿದ್ದುದರಿಂದ ಜಿಡಿಪಿ ಶೇ. 8.1ರಿಂದ ಶೇ. 7.1ಕ್ಕೆ ಇಳಿಕೆ ಕಂಡಿದೆ. ನೋಟು ಅಪ ಮೌಲ್ಯ ಹಾಗೂ ಜಿಎಸ್‌ಟಿ ಜಾರಿಯಿಂದಾಗಿ ಸಂಕಷ್ಟ ಕ್ಕೀಡಾಗಿದ್ದ ಆರ್ಥಿಕತೆ ಸುಧಾರಿಸುತ್ತಿದ್ದಂತೆಯೇ, ಹಣಕಾಸು ಹರಿವು ಸಮಸ್ಯೆ ಉಂಟಾಗಿದ್ದು ಸರಕಾರಕ್ಕೆ ತಲೆನೋವು ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಉದ್ಯಮ ವಲಯಕ್ಕೆ ಉತ್ತೇಜನ ನೀಡಲು ಸರಕಾರ ತತ್‌ಕ್ಷಣ ಕ್ರಮ ಕೈಗೊಳ್ಳದಿದ್ದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನರ ಸಿಟ್ಟನ್ನು ಎದುರಿಸಬೇಕಾದೀತು ಎಂದು ಪ್ರಧಾನಿ ಮೋದಿ ಭಾವಿಸಿದ್ದಾರೆ ಎನ್ನಲಾಗಿದೆ. ಒಂದು ಕೋಟಿ ಉದ್ಯೋಗ ಸೃಷ್ಟಿ ನಿರೀಕ್ಷೆ
2014ರ ಚುನಾವಣೆಯಲ್ಲಿ ಘೋಷಣೆ ಮಾಡಿದ 1 ಕೋಟಿ ಉದ್ಯೋಗ ಸೃಷ್ಟಿಯ ಭರವಸೆಯನ್ನು ಪೂರೈಸುವ ನಿಟ್ಟಿನಲ್ಲಿ ಮೋದಿ ಸರಕಾರ ಪ್ರಯತ್ನ ನಡೆಸಿದೆ. ಇದೇ ವಿಚಾರವನ್ನು ಕಾಂಗ್ರೆಸ್ ಕೂಡ ಮುಖ್ಯ ವಿಷಯವನ್ನಾಗಿ ಚುನಾವಣೆ ವೇಳೆ ಚರ್ಚೆಗೆ ತರುವ ಸಾಧ್ಯತೆಯಿದೆ. ಹೀಗಾಗಿ ಹಲವು ಪ್ರಮುಖ ಸುಧಾರಣೆಗಳನ್ನು ಜಾರಿಗೆ ತರುವ ಅಗತ್ಯ ಈಗ ಪ್ರಧಾನಿ ಎದುರು ಇದೆ. ಈ ಹಿನ್ನೆಲೆಯಲ್ಲಿ ದೇಶದ ಶೇ. 90ರಷ್ಟು ಆರ್ಥಿಕತೆಗೆ ಕಾರಣವಾಗಿರುವ ಸಣ್ಣ ಮತ್ತು ಮಧ್ಯಮ ವಲಯದ ಉದ್ಯಮಗಳ ಮೇಲೆ ಉದ್ಯಮ ನೀತಿಯಲ್ಲಿ ಹೆಚ್ಚಿನ ಗಮನ ಹರಿಸಲು ನಿರ್ಧರಿಸಲಾಗಿದೆ. ಇನ್ನೊಂದೆಡೆ 7 ಲಕ್ಷ ಕೋಟಿ ರೂ. ಮೌಲ್ಯದ ದಿಲ್ಲಿ-ಮುಂಬಯಿ ಔದ್ಯಮಿಕ ಕಾರಿಡಾರ್ ಯೋಜನೆಯ ಕಾಮಗಾರಿ ಕೂಡ ಮುಕ್ತಾಯಗೊಳಿಸಲಾಗುತ್ತಿದೆ. ಈ ಯೋಜನೆ ದಶಕಗಳಿಂದಲೂ ನನೆಗುದಿಗೆ ಬಿದ್ದಿತ್ತು. ಮತ್ತೂಂದೆಡೆ ಸುಮಾರು 2 ಸಾವಿರ ಕೋಟಿ ರೂ. ಮೌಲ್ಯದ ಪ್ರಾಜೆಕ್ಟ್ ಗಳು ಪೂರ್ಣಗೊಂಡಿದ್ದು, ಹಲವು ಕಂಪೆನಿಗಳು ತಮ್ಮ ಫ್ಯಾಕ್ಟರಿಗಳನ್ನು ಸ್ಥಾಪಿಸಿವೆ. ಇವು ಕಾರ್ಯನಿರ್ವಹಣೆ ಆರಂಭಿಸಿ, ಆರ್ಥಿಕತೆಗೆ ಕೊಡುಗೆ ನೀಡಲು ಕೆಲವು ತಿಂಗಳುಗಳ ಕಾಲಾವಕಾಶ ಬೇಕಿದೆ.