ಚಿತ್ರದುರ್ಗ: ಮೂರು ಜಿಲ್ಲೆಗಳ ಲೋಕಸಭೆ ಚುನಾವಣೆ ಪ್ರಚಾರಾರ್ಥ ನಗರದಲ್ಲಿ ಆಯೋಜಿಸಿದ್ದ ವಿಜಯ ಸಂಕಲ್ಪ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಯುವ ಸಮೂಹವನ್ನೂ ಕೇಂದ್ರೀಕರಿಸಿದಂತಿತ್ತು.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ ಮೋದಿ, ಒಮ್ಮೆಲೇ “21ನೇ ಶತಮಾನದಲ್ಲಿ ಮೊದಲ ಬಾರಿ ಮತದಾನ ಮಾಡುತ್ತಿರುವ ಯುವ ಪೀಳಿಗೆಗ ನನ್ನ ನಮಸ್ಕಾರಗಳು’ ಎನ್ನುವ ಮೂಲಕ ಸೋಜಿಗ ಮೂಡಿಸಿದರು. ದೇಶದ ಜನಸಂಖ್ಯೆಯಲ್ಲಿ ಯುವ ಸಮೂಹವೂ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಅವರನ್ನು ಆಕರ್ಷಿಸುವ ಪ್ರಯತ್ನ ಮಾಡಿದರು. ಒಂದು ಕ್ಷಣ ರಾಜಕೀಯ ವಿಷಯವನ್ನು ಬದಿಗಿಟ್ಟು ಯುವಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಪರಿಗೆ ಸಭಿಕರು ಚಪ್ಪಾಳೆ ಮೂಲಕ ಪ್ರಶಂಸಿಸಿದರು.
ಇದೇ ಮೊದಲ ಬಾರಿ ಮತ ಚಲಾಯಿಸುತ್ತಿರುವವರು ವಿವೇಚನೆಯಿಂದ ಮತದಾನ ಮಾಡಿ ಎಂಬುದು ನನ್ನ ಪ್ರಾರ್ಥನೆ. ನಿಮ್ಮ ಮತವನ್ನು ಸದೃಢ ಸರ್ಕಾರಕ್ಕೆ, ದೇಶಕ್ಕಾಗಿ ಹುತಾತ್ಮರಾದ ಸೈನಿಕರಿಗೆ, ಬಡವರಿಗೆ ಸಮರ್ಪಿಸಿ. ರೈತರ ಕೃಷಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಓಟು ಹಾಕಿ. ಮುದ್ರಾ ಯೋಜನೆಯ ಲಾಭ ಪಡೆಯಲು ಮತ ಚಲಾಯಿಸಿ. ನಿಮ್ಮ ಒಂದೊಂದು ಮತವೂ ಅತ್ಯಮೂಲ್ಯ. . ಕಮಲ ಚಿತ್ರದ ಬಟನ್ ಒತ್ತಿದರೆ ನಿಮ್ಮ ಮತ ನೇರವಾಗಿ ಮೋದಿಗೆ ಸೇರುತ್ತದೆ ಎಂದು ಯುವ ಸಮೂಹವನ್ನು ಹುರಿದುಂಬಿಸಿದರು.
ಮೊಳಗಿದ ಚೌಕಿದಾರ ಘೋಷಣೆ: ಪ್ರಧಾನಿ ಮೋದಿ ಆಗಮನಕ್ಕಿಂತ ಮುನ್ನವೇ ವಿಜಯ ಸಂಕಲ್ಪ ರ್ಯಾಲಿ ನಡೆದ ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ಕ್ರೀಡಾಂಗಣ ಬಿಜೆಪಿ ಕಾರ್ಯಕರ್ತರು, ಮುಖಂಡರು ಹಾಗೂ ಮೋದಿ ಅಭಿಮಾನಿಗಳಿಂದ ಭರ್ತಿಯಾಗಿತ್ತು. ಎಲ್ಲ ಕಡೆ ಮೋದಿ ಭಾವಚಿತ್ರವುಳ್ಳ ಕಟೌಟ್‌ಗಳು, ಕೇಸರಿ ಬಾವುಟಗಳು ರಾರಾಜಿಸುತ್ತಿದ್ದವು. ಪ್ರಧಾನಿ ಮೋದಿ ವೇದಿಕೆಯನ್ನೇರಿ ನೆರೆದಿದ್ದವರಿಗೆ ನಮಿಸಿ ಕೈಬೀಸಿದರು.
ಇದನ್ನು ಕಂಡು ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತು. “ಚೌಕಿದಾರ..ಚೌಕಿದಾರ’ ಎಂಬ ಘೋಷಣೆ ಮೊಳಗಿತು. ಜನ ಸಾಗರವನ್ನು ಕಂಡು ಉತ್ತೇಜಿತರಾದ ಮೋದಿ, “ಈ ನಿಮ್ಮ ಚೌಕಿದಾರ ಕೊಟ್ಟ ಮಾತು ತಪ್ಪುವುದಿಲ್ಲ. ನುಡಿದಂತೆ ನಡೆಯುತ್ತಾನೆ. ಹಾಗಾಗಿ ಎಲ್ಲ ಚೌಕಿದಾರರೂ ಒಟ್ಟಾಗಿ ನಡೆಯಬೇಕಿದೆ. ಅದಕ್ಕಾಗಿ ಕಮಲ ಅರಳಿಸುವಂತೆ’ ಮನವಿ ಮಾಡಿದರು. ಮೋದಿ ಭಾಷಣ ಮಾಡುತ್ತಿದ್ದಾಗಲೂ ಅಲ್ಲಲ್ಲಿ ಮೋದಿ ಮೋದಿ.. ಚೌಕಿದಾರ ಘೋಷಣೆ ಕೇಳಿ ಬರುತ್ತಲೇ ಇತ್ತು.