Advertisement

‘ಮೋದಿಗೆ ನೈತಿಕ ಬೆಂಬಲಕ್ಕಾಗಿ ವಿಜಯೋತ್ಸವ’

10:31 AM Nov 09, 2017 | Team Udayavani |

ಪುತ್ತೂರು: ಕೇಂದ್ರ ಸರಕಾರ ನೋಟು ಅಮಾನ್ಯಗೊಳಿಸಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬುಧವಾರ ಪುತ್ತೂರಿನಲ್ಲಿ ವಿವಿಧ ಸಂಘಟನೆಗಳ ವತಿಯಿಂದ ವಿಜಯೋತ್ಸವವನ್ನು ಆಚರಿಸಲಾಯಿತು. ನಗರದ ಬಸ್‌ ನಿಲ್ದಾಣದ ಗಾಂಧಿ ಕಟ್ಟೆಯ ಬಳಿ ಸಂಘಟನೆಗಳ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಿಸಿದರು.

Advertisement

ಸಭೆಯನ್ನುದ್ದೇಶಿಸಿ ಮಾತನಾಡಿದ ಹಿಂದೂ ಸಂಘಟನೆಗಳ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ, ಹಣದ ಹೊಳೆಯಲ್ಲಿ ಗೆದ್ದು ದೇಶವನ್ನು ಹಾಳು ಮಾಡುವವರ ನಡುವೆ ಪ್ರೀತಿ, ವಿಶ್ವಾಸ, ದೇಶಪ್ರೇಮದ ಭಾರತವನ್ನು ಕಟ್ಟುವ ಚಿಂತನೆಯ ಮೋದಿಯವರನ್ನು ಪ್ರತಿಯೊಬ್ಬರೂ ಬೆಂಬಲಿಸುವ ಅಗತ್ಯವಿದೆ. ಮುಂದಿನ 25 ವರ್ಷಗಳ ಕಾಲ ಮೋದಿಯವರು ಪ್ರಧಾನಿಯಾಗಿರಬೇಕು. ಅವರಿಗೆ ನೈತಿಕ ಬೆಂಬಲ ನೀಡಲು ವಿಜಯೋತ್ಸವ ಆಚರಿಸುತ್ತಿದ್ದೇವೆ ಎಂದರು.

ಸಿಮಿ, ಆಲ್‌ಕೈದಾದಂತಹ ಭಯೋತ್ಪಾದನೆಯ ಸಂಘಟನೆಗಳ ಜತೆ ಸೇರಿಕೊಂಡು ಬಿಜೆಪಿ, ಆರೆಸ್ಸೆಸ್‌ ಕಾರ್ಯಕರ್ತರನ್ನು ಹತ್ಯೆ ಮಾಡುವವರು, ಮುಸ್ಲಿಮರ ತುಷ್ಟೀಕರಣದೊಂದಿಗೆ ಮತಾಂಧತೆಗೆ ಬೆಂಬಲಿಸುವವರು ನೋಟ್‌ ಬ್ಯಾನ್‌ ನಿಷೇಧದ ವಾರ್ಷಿಕವನ್ನು ಕರಾಳ ದಿನವಾಗಿ ಆಚರಿಸುತ್ತಿದ್ದಾರೆ. ಭಯೋತ್ಪಾದನೆಗೆ ಪ್ರೇರಣೆ ಕೊಡುವವರನ್ನು ಮಟ್ಟಹಾಕುವ ಪ್ರಧಾನಿಯವರ ಪ್ರಯತ್ನಕ್ಕೆ ಸಮಾಜವೇ ಅಭಿನಂದಿಸುತ್ತದೆ ಎಂದರು.

ವಿರೋಧಿಗಳಿಗೆ ಕರಾಳ ದಿನ
ಬಜರಂಗದಳ ರಾಜ್ಯ ಗೋ ರಕ್ಷಾ ಪ್ರಮುಖ್‌ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ, ದೇಶದಲ್ಲಿ 70 ವರ್ಷ ಕೆಟ್ಟ ಆಡಳಿತ ನಡೆಸಿದ ಕಾಂಗ್ರೆಸ್‌ ಮತ್ತು ಬೆಂಬಲಿತ ಸಂಘಟನೆಗಳು ಕರಾಳ ದಿನವನ್ನು ಆಚರಿಸಿವೆ. ಅವರಿಗೆ ಕರಾಳ ದಿನ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಪಕ್ಷ ಹಾಗೂ ಸಂಘಟನೆಯ ಪ್ರಮುಖರಾದ ಚಿನ್ಮಯ್‌ ರೈ, ಅಜಿತ್‌ ರೈ ಹೊಸಮನೆ, ಲಕ್ಷ್ಮಣ ಗೌಡ, ಸುಜೀಂದ್ರ ಪ್ರಭು, ವಿಶ್ವನಾಥ ಗೌಡ, ರಾಮದಾಸ್‌ ಹಾರಾಡಿ, ಕೃಷ್ಣಪ್ರಸಾದ್‌ ಶೆಟ್ಟಿ, ಭಾಸ್ಕರ್‌ ನಾೖಕ್‌, ಅಶೋಕ್‌ ಕುಂಬ್ಲೆ ಮೊದಲಾದವರು ಉಪಸ್ಥಿತರಿದ್ದರು. ಪುರುಷೋತ್ತಮ ಕೋಲ್ಪೆ ಕಾರ್ಯಕ್ರಮ ನಿರ್ವಹಿಸಿದರು.

Advertisement

ಶಾಸಕರಿಗೆ ಸವಾಲು
ವೈದ್ಯ ಡಾ| ಎಂ.ಕೆ. ಪ್ರಸಾದ್‌ ಮಾತನಾಡಿ, ಇಡೀ ದೇಶಕ್ಕೆ ನ. 8ರ ದಿನ ಸುದಿನ. ಇಂದು ಕರಾಳ ದಿನ ಆಚರಿಸುವವರು ನಿಜಕ್ಕೂ ದೇಶಪ್ರೇಮಿಗಳಲ್ಲ ಎಂದರು. ಅನ್ನಭಾಗ್ಯದ ಅಕ್ಕಿಗೆ ಕೇಂದ್ರ ಸರಕಾರ ಹಣ ನೀಡುತ್ತಿದೆ ಎನ್ನುವ ತಮ್ಮ ಬ್ಯಾನರ್‌ಗೆ ವ್ಯಂಗ್ಯವಾಡಿದ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರಿಗೆ ತಿರುಗೇಟು ನೀಡಿದ ಅವರು, ಬ್ಯಾನರ್‌ನಲ್ಲಿ ತಪ್ಪು ಮಾಹಿತಿ ಇದ್ದರೆ ಶಾಸಕರು ಕೇಸು ಹಾಕಲಿ ಎಂದು ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next