Advertisement

ಮೋದಿ ಮುಡಿಗೆ ಮೂಡೀಸ್‌ ಗರಿ!

08:05 AM Nov 18, 2017 | Team Udayavani |

ಹೊಸದಿಲ್ಲಿ: ನೋಟು ಅಪಮೌಲ್ಯ ಹಾಗೂ ಜಿಎಸ್‌ಟಿ ಜಾರಿಯಿಂದಾಗಿ ದೇಶ ಆರ್ಥಿಕ ತುರ್ತುಸ್ಥಿತಿಯತ್ತ ಸಾಗುತ್ತಿದೆ ಎಂಬ ಭೀತಿ ಈಗಿಲ್ಲ. ಯಾಕೆಂದರೆ, ದೇಶ ಆರ್ಥಿಕ ಪ್ರಗತಿಯತ್ತ ಸಾಗಿದೆ ಎಂದು ಆರ್ಥಿಕ ಸ್ಥಿತಿಗೆ ಶ್ರೇಣಿ ನೀಡುವ ಜಾಗತಿಕ ಸಂಸ್ಥೆ “ಮೂಡೀಸ್‌’ ವರದಿ ಮಾಡಿದೆ. ಅಲ್ಲದೆ, 14 ವರ್ಷ ಗಳ ಅನಂತರ ಇದೇ ಮೊದಲ ಬಾರಿಗೆ ಭಾರತದ ವಿತ್ತ ಶ್ರೇಣಿಯನ್ನು ಮೇಲ ಕ್ಕೇರಿಸಿದ್ದು, ಬಿಎಎ3 ಇಂದ ಬಿಎಎ2ಗೆ ಹೆಚ್ಚಿಸಿದೆ. ಅಲ್ಲದೆ ಆರ್ಥಿಕ ಮುನ್ನೋಟ ವನ್ನು “ಧನಾತ್ಮಕ’ ದಿಂದ “ಸ್ಥಿರ’ ಎಂಬುದಾಗಿ ದಾಖಲಿಸಿದೆ. ಸರಕಾರ ಕೈಗೊಂಡ ಹಲವು ಕ್ರಮಗಳಿಂದ ಆರ್ಥಿಕತೆ ಮುನ್ನೋಟ ಉತ್ತಮವಾಗಿದೆ ಎಂದು ಮೂಡೀಸ್‌ ಅಭಿಪ್ರಾಯಪಟ್ಟಿದೆ.

Advertisement

ವರದಿ ಬಹಿರಂಗಗೊಳ್ಳುತ್ತಿದ್ದಂತೆ ರೂಪಾಯಿ ಮೌಲ್ಯ ಹೆಚ್ಚಾಗಿದ್ದು, ಷೇರು ಪೇಟೆ ಸೆನ್ಸೆಕ್ಸ್‌ ಮತ್ತು ಬಾಂಡ್‌ ಮೌಲ್ಯವೂ ಏರಿಕೆ ಕಂಡಿದೆ. ಕಳೆದ ಕೆಲವು ದಿನಗಳಿಂದ ದೇಶದ ಆರ್ಥಿಕ ಸ್ಥಿತಿಗತಿ ಕುಸಿಯುತ್ತಿದೆ ಎಂಬ ಭೀತಿ ಮೂಡಿದ್ದ ಬೆನ್ನಲ್ಲೇ, ಮೂಡೀಸ್‌ ವರದಿ ವಿತ್ತವಲಯದಲ್ಲಿ ಅಚ್ಚರಿ ಹಾಗೂ ಅನಿರೀಕ್ಷಿತ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಆಡಳಿತಾರೂಢ ಬಿಜೆಪಿಗೆ ಇದು ಅತ್ಯಂತ ಮಹತ್ವದ್ದಾಗಿದ್ದು, ಇದೇ ಮಾನದಂಡವನ್ನಿಟ್ಟುಕೊಂಡು ವಿದೇಶಿ ಹೂಡಿಕೆಯನ್ನು ಸರಕಾರ ಆಕರ್ಷಿಸ ಬಹುದು.

ಅಲ್ಲದೆ ದೇಶದ ಆರ್ಥಿಕತೆ ಕುಸಿಯುತ್ತಿದೆ ಎಂದು ಆರೋಪಿಸುತ್ತಿರುವ ವಿಪಕ್ಷಗಳ ಬಾಯಿ ಮುಚ್ಚಿಸಲೂ ಈ ಮಾನದಂಡ ಸಾಕು. ಇತ್ತೀಚೆಗಷ್ಟೇ ಉದ್ದಿಮೆ ಸ್ನೇಹಿ ರಾಷ್ಟ್ರ ಎಂಬ ಪಟ್ಟಿಯಲ್ಲಿ ಭಾರತದ ಶ್ರೇಣಿ ಏರಿಕೆಯಾಗಿದ್ದು ಕೂಡ ಸರಕಾರದ ಕಡೆಗೆ ಧನಾತ್ಮಕ ಮನೋಭಾವ ಮೂಡಿಸಿತ್ತು.

ಬ್ಯಾಂಕ್‌ ಪುನಶ್ಚೇತನ: ಮರುಪಾವತಿಯಾಗದ ಸಾಲದ ಸುಳಿಯಲ್ಲಿ ಸಿಲುಕಿರುವ ಬ್ಯಾಂಕ್‌ಗಳಿಗೆ ಪುನಶ್ಚೇತನ ನೀಡುವ ಸರಕಾರದ ಪ್ರಕ್ರಿಯೆ ಕೂಡ ಉತ್ತಮವಾಗಿದೆ. ಇದಕ್ಕೆ ಪೂರಕವಾಗಿ ದಿವಾಳಿ ನೀತಿಯನ್ನು ಸರಕಾರ ತಿದ್ದುಪಡಿ ಮಾಡಿದೆ. ಕಳೆದ ತಿಂಗಳು ಬ್ಯಾಂಕ್‌ಗಳಿಗೆ 2.11 ಲಕ್ಷ ಕೋಟಿ ರೂ. ಬಂಡವಾಳವನ್ನು ಸರಕಾರ ಒದಗಿಸಿದೆ.

ರೇಟಿಂಗ್ಸ್‌ನಿಂದ ಲಾಭವೇನು?
ಉತ್ತಮ ರೇಟಿಂಗ್‌ ಇದ್ದರೆ ದೇಶದ ಕಂಪೆನಿಗಳು ಮತ್ತು ಸರಕಾರಗಳು ಅಂತಾರಾಷ್ಟ್ರೀಯ ವಿತ್ತ ಮಾರುಕಟ್ಟೆಯಲ್ಲಿ ಸಾಲ ಪಡೆಯುವುದು ಹಾಗೂ ಬಂಡವಾಳ ಹೂಡಿಕೆ ಆಕರ್ಷಿಸುವುದು ಸುಲಭ. ಇನ್ನೊಂದೆಡೆ ವಿದೇಶಿ ಸಣ್ಣ ಹಾಗೂ ಮಧ್ಯಮ ಹೂಡಿಕೆದಾರರು ದೇಶದ ಸಾಮಾಜಿಕ ಮತ್ತು ಆರ್ಥಿಕ ವಾತಾವರಣವನ್ನು ಅಳೆಯಲು ಮೂಡೀಸ್‌ ರೇಟಿಂಗನ್ನೇ ಆಕರ್ಷಿಸುತ್ತವೆ. ಇದರಿಂದ ವಿದೇಶಿ ಹೂಡಿಕೆ ವಿವಿಧ ವಲಯಗಳಲ್ಲಿ ಅಪಾರ ಪ್ರಮಾಣದಲ್ಲಿ ಹರಿದು ಬರುತ್ತವೆ.

Advertisement

ಚೀನದ ರೇಟಿಂಗ್‌ ಇಳಿಕೆ: ಒಂದೆಡೆ, ಭಾರತದ ಶ್ರೇಯಾಂಕದಲ್ಲಿ ಏರಿಕೆ ಕಂಡುಬಂದಿದ್ದರೆ, ಚೀನದ ರೇಟಿಂಗ್ಸ್‌ ಇಳಿಕೆಯಾಗಿದೆ. ಕಳೆದ ಮೇ ತಿಂಗಳಲ್ಲಿ ಮೂಡೀಸ್‌ ಚೀನದ ರೇಟಿಂಗ್ಸ್‌ ಅನ್ನು ಎ1 ನಿಂದ ಎಎ3ಗೆ ಇಳಿಕೆ ಮಾಡಿತ್ತು. ಇದಕ್ಕೂ ಮೊದಲು ಸ್ಟಾಂಡರ್ಡ್‌ ಆಂಡ್‌ ಪೂರ್ಸ್‌ ಕೂಡ ತನ್ನ ರೇಟಿಂಗ್‌ ಇಳಿಕೆ ಮಾಡಿತ್ತು.

ಷೇರುಪೇಟೆಯಲ್ಲಿ ಸಂಚಲನ: ಮೂಡೀಸ್‌ ಭಾರತದ ಶ್ರೇಯಾಂಕ ಏರಿಕೆ ಮಾಡಿರುವುದು ಹೂಡಿಕೆದಾರರಲ್ಲಿ ಭರವಸೆ ಮೂಡಿಸಿದೆ. ಪರಿಣಾಮ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ ಶುಕ್ರವಾರ 236 ಅಂಕ ಏರಿಕೆ ಯಾಗಿ, ದಿನಾಂತ್ಯಕ್ಕೆ 33,342ರಲ್ಲಿ ಕೊನೆಗೊಂಡಿತು. ನಿಫ್ಟಿ 68 ಅಂಕ ಏರಿಕೆ ಕಂಡು, 10,283ರಲ್ಲಿ ವಹಿವಾಟು ಅಂತ್ಯಗೊಳಿಸಿತು. ಡಾಲರ್‌ ಎದುರು ರೂಪಾಯಿ ಮೌಲ್ಯವೂ 31 ಪೈಸೆ ಏರಿಕೆ ದಾಖಲಿಸಿ, 65.01ಕ್ಕೆ ತಲುಪಿತು.

Advertisement

Udayavani is now on Telegram. Click here to join our channel and stay updated with the latest news.

Next