Advertisement

ದೇಶದ ಹಣ ದೋಚಲು ಮೋದಿ ಪರೋಕ್ಷ ಸಹಕಾರ

07:00 AM Apr 04, 2018 | |

ಹೊನ್ನಾಳಿ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಭ್ರಷ್ಟಾಚಾರಿ. ರಾಜ್ಯದಲ್ಲಿ ಇವರದ್ದು ಅತ್ಯಂತ ಭ್ರಷ್ಟ
ಸರಕಾರವಾಗಿತ್ತು ಎಂಬುದನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೇ ಇತ್ತೀಚೆಗೆ ಕರ್ನಾಟಕಕ್ಕೆ ಬಂದಾಗ
ಹೇಳಿದ್ದಾರೆ. ಹೀಗಾಗಿ, ಬಿಜೆಪಿ ಬಗ್ಗೆ ನಾವೇನೂ ಹೇಳಬೇಕಾಗಿಲ್ಲ ಎಂದು ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದರು.

Advertisement

ನಗರದಲ್ಲಿ ಮಾತನಾಡಿ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಸರ್ಕಾರ ತಮ್ಮ ನಾಮಧೇಯ ಹೊಂದಿರುವ ಇತರ ಮೋದಿಗಳಿಗೆ ಹಣ ದೋಚಿಕೊಂಡು ಹೋಗಲು ಪರೋಕ್ಷವಾಗಿ ಸಹಾಯ ಮಾಡಿದ್ದಾರೆ. ಇದರಿಂದ ಭ್ರಷ್ಟಾಚಾರಕ್ಕೆ ಎಡೆ ಮಾಡಿ ಕೊಟ್ಟಿದ್ದಾರೆ ಎಂದು ಟಾಂಗ್‌ ಕೊಟ್ಟರು. ಭರ್ಜರಿ ರೋಡ್‌ ಶೋ: ರಾಹುಲ್‌ ಗಾಂಧಿ ಮಂಗಳವಾರ ಶಿವಮೊಗ್ಗ ಹಾಗೂ ಹೊನ್ನಾಳಿಯಲ್ಲಿ ಭರ್ಜರಿ ರೋಡ್‌ ಶೋ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನ ಇತರ ಮುಖಂಡರು ಸಾಥ್‌ ನೀಡಿದರು.

ಮಧ್ಯಾಹ್ನ 12ರ ಸುಮಾರಿಗೆ ಹೆಲಿಕಾಪ್ಟರ್‌ ಮೂಲಕ ಶಿವಮೊಗ್ಗಕ್ಕೆ ಆಗಮಿಸಿದ ರಾಹುಲ್‌, ಸುಡು ಬಿಸಿಲನ್ನೂ ಲೆಕ್ಕಿಸದೆ ಸರ್ಕ್ನೂಟ್‌ ಹೌಸ್‌ನಿಂದ ಬಿ.ಎಚ್‌.ರಸ್ತೆ ಮೂಲಕ ಗೋಪಿ ವೃತ್ತದವರೆಗೆ ರೋಡ್‌ ಶೋ ನಡೆಸಿದರು. ಮಧ್ಯಾಹ್ನ 4.30ಕ್ಕೆ ಹೊನ್ನಾಳಿಯಲ್ಲಿ ರಾಹುಲ್‌ ರೋಡ್‌ ಶೋ ನಡೆಯಿತು.

ಸಿದ್ಧಗಂಗಾ ಮಠಕ್ಕೆ ಇಂದು ರಾಹುಲ್‌ ಗಾಂಧಿ ಭೇಟಿ 
ತುಮಕೂರು: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಬುಧವಾರ ಶ್ರೀ ಕ್ಷೇತ್ರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯುವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಠ ಭೇಟಿ ಬಳಿಕ, ಕ್ಯಾಂತ್ಸಂದ್ರ ಸರ್ಕಲ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ಬಳಿಕ, ಭದ್ರಮ್ಮ ಸರ್ಕಲ್‌ನಿಂದ ರೋಡ್‌ ಶೋ, ಟೌನ್‌ಹಾಲ್‌ನಲ್ಲಿ ಸಾರ್ವಜನಿಕ ಸಭೆ, ಗೂಳೂರು, ನಾಗವಲ್ಲಿ, ಹೆಬ್ಬೂರುನಲ್ಲಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಕುಣಿಗಲ್‌ ಮೂಲಕ ಮಾಗಡಿಗೆ ತೆರಳುವರು ಎಂದರು.

500 ಕಾಂಗ್ರೆಸ್‌ ಬಾವುಟ ವಶ
ಶಿವಮೊಗ್ಗ: ರಾಹುಲ್‌ ರೋಡ್‌ ಶೋ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳ ಅನುಮತಿ ಪಡೆಯದ ಕಾರಣ ಕಾಂಗ್ರೆಸ್‌ ಪಕ್ಷದ
500ಕ್ಕೂ ಹೆಚ್ಚು ಬಾವುಟಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಗರದ ಅಮೀರ್‌ ಅಹ್ಮದ್‌ ವೃತ್ತದಲ್ಲಿ ಬಾವುಟಗಳನ್ನು  ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಳ್ಳಲಾಯಿತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next