Advertisement

ನಿಮಗೆ ಮೋದಿಯೇ ಗ್ಯಾರಂಟಿ: ಕರ್ನಾಟಕದ ಕಾಂಗ್ರೆಸ್‌ ಗ್ಯಾರಂಟಿಗೆ ಪ್ರಧಾನಿ ತಿರುಗೇಟು

09:57 PM Jul 01, 2023 | Team Udayavani |

ನವದೆಹಲಿ/ಶಾದೋಲ್‌: “ದೇಶವಾಸಿಗಳೇ ಎಚ್ಚರಿಕೆಯಿಂದ ಇರಿ. ದೇಶ ವಿರೋಧಿ ಶಕ್ತಿಗಳ ಜತೆಗೆ ಪ್ರತಿಪಕ್ಷಗಳು ಇವೆ. ಸುಳ್ಳು ಭರವಸೆ ನೀಡುವವರ ಬಗ್ಗೆ ಎಚ್ಚರದಿಂದ ಇರಿ. ಆಯುಷ್ಮಾನ್‌ ಭಾರತ ಯೋಜನೆಯ ಅನ್ವಯ ನಿಮಗೆ 5 ಲಕ್ಷ ರೂ. ಮೌಲ್ಯದ ಆರೋಗ್ಯ ವಿಮೆ ಸಿಗುತ್ತದೆ. ಇದಕ್ಕೆ ನರೇಂದ್ರ ಮೋದಿಯೇ ಗ್ಯಾರಂಟಿ”

Advertisement

– ಹೀಗೆಂದು ಪ್ರಧಾನಿ ನರೇಂದ್ರ ಮೋದಿಯವರು ನವದೆಹಲಿ ಮತ್ತು ಮಧ್ಯಪ್ರದೇಶದ ಶಾದೋಲ್‌ನಲ್ಲಿ ಶನಿವಾರ ಆಯೋಸಲಾಗಿದ್ದ ಕಾರ್ಯಕ್ರಮಗಳಲ್ಲಿ ಮಾತನಾಡಿದ ವೇಳೆ ಪರೋಕ್ಷವಾಗಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಹಂತ ಹಂತವಾಗಿ ಜಾರಿಗೆ ತರುತ್ತಿರುವ ಪಂಚ ಗ್ಯಾರಂಟಿ, ಪ್ರತಿಪಕ್ಷಗಳ ವಿರುದ್ಧ ಅತ್ಯುಗ್ರ ಶಬ್ದಗಳಿಂದ ಟೀಕಿಸಿದ್ದಾರೆ.

ನವದೆಹಲಿಯಲ್ಲಿ ಆಯೋಜಿಸಲಾಗಿದ್ದ 17ನೇ ಬಾರತೀಯ ಸಹಕಾರ ಕಾಂಗ್ರೆಸ್‌ನಲ್ಲಿ ಮಾತನಾಡಿದ ಪ್ರಧಾನಿ “ಕೇಂದ್ರ ಸರ್ಕಾರ ಪ್ರತಿ ವರ್ಷ ಕೃಷಿ ಕ್ಷೇತ್ರಕ್ಕೆ 6.5 ಲಕ್ಷ ಕೋಟಿ ರೂ. ನೀಡುತ್ತದೆ. ಪ್ರತಿ ರೈತನಿಗೂ ವಾರ್ಷಿಕವಾಗಿ ಸಹಕಾರ ಕ್ಷೇತ್ರದಿಂದ 50 ಸಾವಿರ ರೂ. ಲಾಭವಾಗುತ್ತದೆ” ಎಂದರು. “ಮೋದಿ ಗ್ಯಾರಂಟಿ ನೀಡುವುದು ಎಂದರೆ ಅದು ಕೇವಲ ಮಾತಿನಲ್ಲಿ ಉಳಿಯುವುದಿಲ್ಲ” ಎಂದೂ ಹೇಳಿದ್ದಾರೆ. ರೈತರಿಗೆ ಕೇಂದ್ರ ರೈಸಗೊಬ್ಬರ ಸಬ್ಸಿಡಿ, ಆಹಾರ ಧಾನ್ಯಗಳನ್ನು ಶೇಖರಿಸಿ ಇಡಲು ವ್ಯವಸ್ಥೆ, ಪಿಎಂ-ಕಿಸಾನ್‌ ಯೋಜನೆಗಳನ್ನು ಜಾರಿ ಮಾಡಲಾಗಿದೆ ಎಂದರು. ಕೇಂದ್ರದಲ್ಲಿ ಇರುವ ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇಶದ ಪ್ರತಿ ರೈತನಿಗೆ ವಾರ್ಷಿಕವಾಗಿ 50 ಸಾವಿರ ರೂ. ಒಂದಲ್ಲ ಒಂದು ರೀತಿಯಲ್ಲಿ ನೆರವು ಸಿಗುತ್ತಿದೆ’ ಎಂದರು.

“ಇದು ಮೋದಿಯ ಗ್ಯಾರಂಟಿ. ನಾನು ಏನು ಮಾಡಿದ್ದೇನೆಯೋ ಅದರ ಬಗ್ಗೆ ಮಾತ್ರ ಮಾತನಾಡುತ್ತೇನೆ, ವಾಗ್ಧಾನಗಳ ಬಗ್ಗೆ ಅಲ್ಲ” ಎಂದು ಕಾಂಗ್ರೆಸ್‌ ಅನ್ನು ಛೇಡಿಸಿದ್ದಾರೆ.

ಎಚ್ಚರಿಕೆಯಿಂದ ಇರಿ:
ಇದಾದ ಬಳಿಕ ಮಧ್ಯಪ್ರದೇಶದ ಶಾದೋಲ್‌ನಲ್ಲಿ ಕುಡುಗೋಲು-ಕಣರೋಗ ಸಿಕೆಲ್‌ ಸೆಲ್‌ ಅನಿಮಿಯಾ ನಿವಾರಣೆಗಾಗಿ ವಿಶೇಷ ಯೋಜನೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಕೌಟುಂಬಿಕ ರಾಜಕೀಯ ವ್ಯವಸ್ಥೆಯೇ ಆಧಾರವಾಗಿರುವ ಕಾಂಗ್ರೆಸ್‌ ಸೇರಿದಂತೆ ಕೆಲವು ಪ್ರತಿಪಕ್ಷಗಳು ನಕಲಿ ಗ್ಯಾರಂಟಿಗಳನ್ನು ನೀಡುವ ವಾಗ್ಧಾನ ಮಾಡಿ ನಿಮ್ಮ ಮುಂದೆ ಬರುತ್ತಿವೆ. ಈ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು. ರಾಜಕೀಯವಾಗಿ ಅವುಗಳ ಬಗ್ಗೆ ನಾಯಕರಿಗೇ ಖಾತರಿ ಇಲ್ಲದೇ ಇರುವಾಗ ಸುಳ್ಳು ವಾಗ್ಧಾನಗಳನ್ನು ನೀಡುತ್ತಿವೆ” ಎಂದರು. ಕೇಂದ್ರ ಸರ್ಕಾರದ ಆಯುಷ್ಮಾನ್‌ ಭಾರತ ಯೋಜನೆಯಡಿಯಲ್ಲಿ ಕುಟುಂಬಕ್ಕೆ 5 ಲಕ್ಷ ರೂ. ವರೆಗಿನ ಆರೋಗ್ಯ ಖರ್ಚು ಭರಿಸಲು ಸಾಧ್ಯವಾಗಲಿದೆ. ಇದಕ್ಕೆ ನರೇಂದ್ರ ಮೋದಿಯೇ ಗ್ಯಾರಂಟಿ ಎಂದು ಹೇಳಿದ್ದಾರೆ. ದೇಶದಲ್ಲಿ 2047ರ ಒಳಗಾಗಿ ಕುಡುಗೋಲು-ಕಣರೋಗವನ್ನು ನಿವಾರಿಸಲು ಕೇಂದ್ರ ಸರ್ಕಾರ ಗುರಿ ಹಾಕಿಕೊಂಡಿದೆ ಎಂದು ಇದೇ ಸಂದರ್ಭದಲ್ಲಿ ನುಡಿದರು.

Advertisement

2.5 ಲಕ್ಷ ಕೋಟಿ ರೂ. ವರ್ಗ
ನೇರ ನಗದು ವರ್ಗಾವಣೆ ವ್ಯವಸ್ಥೆ ಜಾರಿಗೆ ಬಂದ ಬಳಿಕ ಫ‌ಲಾನುಭವಿಗಳಿಗೆ ನಾಲ್ಕು ವರ್ಷಗಳಲ್ಲಿ ಪಿಎಂ- ಕಿಸಾನ್‌ ಯೋಜನೆಯ ಅನ್ವಯ 2.5 ಲಕ್ಷ ಕೋಟಿ ರೂ. ಮೊತ್ತವನ್ನು ಖಾತೆಗಳಿಗೆ ವರ್ಗಾಯಿಸಲಾಗಿದೆ. 2014ಕ್ಕಿಂತ ಮೊದಲು ಕೃಷಿಗೆ 90 ಸಾವಿರ ಕೋಟಿ ರೂ.ಗಳಿಗಿಂತಲೂ ಕಡಿಮೆ ಮೊತ್ತ ಮೀಸಲಾಗಿ ಇರಿಸಲಾಗುತ್ತಿತ್ತು ಎಂದಿದ್ದಾರೆ. ರೈತರಿಗೆ ಕಡಿಮೆ ಪ್ರಮಾಣದಲ್ಲಿ ಯೂರಿಯಾ ಸಿಗುತ್ತಿದೆ. ಬಾಂಗ್ಲಾದೇಶ, ಪಾಕಿಸ್ತಾನ, ಚೀನಾ, ಅಮೆರಿಕಗಳಿಗೆ ಹೋಲಿಕೆ ಮಾಡಿದರೆ ನಮ್ಮ ದೇಶದ ರೈತರಿಗೆ ಕಡಿಮೆ ಪ್ರಮಾಣದಲ್ಲಿ ರಸಗೊಬ್ಬರ ದೊರೆಯುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next