Advertisement

ಗೆಲುವಿನ ಹಿಂದೆ ಮೋದಿಯ ಸತತ ಮಂಗಳೂರು ಭೇಟಿ

08:01 PM May 23, 2019 | Sriram |

ಮಹಾನಗರ: ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಎರಡು ಬಾರಿ ಮತ್ತು ಪ್ರಧಾನಿಯಾಗುವುದಕ್ಕೂ ಮುನ್ನ ಒಂದು ಬಾರಿ ನಗರದ ಕೇಂದ್ರ ಮೈದಾನದಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದು, ಸಂಸದ ನಳಿನ್‌ ಕುಮಾರ್‌ ಅವರ ಗೆಲುವಿಗೆ ಮೋದಿ ಅವರ ಈ ಸತತ ಮಂಗಳೂರು ಭೇಟಿಯೂ ಒಂದು ಕಾರಣ ಎಂದು ವಿಶ್ಲೇಷಿ ಸಲಾಗುತ್ತಿದೆ.

Advertisement

ಮಂಗಳೂರು ಭೇಟಿ ಸಂದರ್ಭಗಳಲ್ಲಿ ಮೋದಿ ಅವರು ತಮ್ಮ ನಿರರ್ಗಳ ಭಾಷಣದಿಂದ ಮತದಾರರ ಮನಗೆಲ್ಲುವ ಪ್ರಯತ್ನ ಮಾಡಿದ್ದರು. ಆ ಮೂಲಕ, ಜಿಲ್ಲೆಯಲ್ಲಿ ಮೋದಿ ಅಲೆಯೇ ಸೃಷ್ಟಿಯಾಗಲು ಕಾರಣವಾಯಿತು. ಅದೇ ಅಭಿಮಾನದಿಂದಾಗಿ ಈ ಬಾರಿಯ ಪ್ರಚಾರ ಸಭೆಗೂ ಮೋದಿ ಮಂಗಳೂರಿಗೆ ಆಗಮಿಸಿದಾಗ ಅವರ ಭಾಷಣ ಆಲಿಸುವುದಕ್ಕಾಗಿಯೇ ಸಾಗರೋಪಾದಿಯಲ್ಲಿ ಜನ ಕೇಂದ್ರ ಮೈದಾನ ಮತ್ತು ಮೈದಾನದ ಹೊರಗಡೆ ಸೇರಿದ್ದರು. ಪ್ರಚಾರ ಸಭೆಗೆ ಸುಮಾರು ಎರಡು ಲಕ್ಷ ಮಂದಿ ಆಗಮಿಸಿದ್ದರು.

ಮಂಗಳೂರಿಗರ ಪ್ರೀತಿಗೆ ಮೋದಿ ಫಿದಾ
ಮಂಗಳೂರಿನಲ್ಲಿ ಎ. 13ರಂದು ನಡೆದ ಬಿಜೆಪಿ ಸಮಾವೇಶದಲ್ಲಿ ಸಾರ್ವಜನಿಕರು ತೋರಿದ ಅಪಾರ ಪ್ರೀತಿಗೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಫಿದಾ ಆಗಿದ್ದರು. ಅಷ್ಟೇ ಅಲ್ಲದೆ, ಹಂಪನಕಟ್ಟೆಯಲ್ಲಿ ಕಾರಿನ ಬಾಗಿಲು ತೆಗೆದು ಜನರತ್ತ ಕೈ ಬೀಸಿ ಜನರ ಪ್ರೀತಿಗೆ ಸ್ಪಂದಿಸಿದ್ದರು.

ಹಂಪನಕಟ್ಟೆಯ ರಸ್ತೆ ಬದಿಯಲ್ಲಿ ಪ್ರಧಾನಿ ಬರುವಿಕೆಗಾಗಿ ಕಾದು ನಿಂತಿದ್ದ ಸಾವಿರಾರು ಜನರನ್ನು ಕಂಡು ಖುಷಿಪಟ್ಟ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ, ಹೊಸದಿಲ್ಲಿಯ ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿಯೂ ಮಂಗಳೂರಿನ ಜನರ ಪ್ರೀತಿಯ ಬಗ್ಗೆ ವಿಶೇಷ ಉಲ್ಲೇಖ ಮಾಡಿದ್ದರು.

ಇನ್ಸ್‌ಟ್ರಾಗ್ರಾಂನಲ್ಲಿಯೂ “ಮಂಗಳೂರಿಗರ ಪ್ರೀತಿಗೆ ವಿನೀತನಾಗಿದ್ದೇನೆ (ಹಂಬಲ್ಡ್‌ ಬೈ ದ ಅಪೆಕ್ಷನ್‌)’ ಎಂದು ಉಲ್ಲೇಖೀಸಿ ಮಂಗಳೂರಿನಲ್ಲಿ ದಾರಿಯುದ್ದಕ್ಕೂ ಜನರು ನೆರೆದಿರುವ ವೀಡಿಯೋ ಹಾಕಿ “ಇದು ಮಂಗಳೂರಿಗರು ನನ್ನನ್ನು ಸ್ವಾಗತಿಸಿದ ರೀತಿ’ ಎಂದು ಬರೆದಿದ್ದರು. ಟ್ಟಿಟರ್‌ನಲ್ಲಿ “ಮಂಗಳೂರಿನ ರ್ಯಾಲಿಯಲ್ಲಿ ಉತ್ಸಾಹಭರಿತ ವಾತಾವರಣ’ ಎಂದು ಬರೆದು ಸಭೆಯ ವೀಡಿಯೋ ಅಪ್‌ಲೋಡ್‌ ಮಾಡಿದ್ದರು.

Advertisement

ಶೀಘ್ರ ಇನ್ನೊಮ್ಮೆ ಬರುತ್ತೇನೆ ಎಂದಿದ್ದ ಮೋದಿ
2019ರ ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಮೋದಿ ಭಾಷಣ ಆಲಿಸಲು ಅಭಿಮಾನಿಗಳು ಮರಗಳ ಮೇಲೆ ಹತ್ತಿದ್ದರು. ಇದನ್ನು ಗಮನಿಸಿದ್ದ ಮೋದಿಯವರು ಸಭಾಂಗಣಕ್ಕೆ ಆಗಮಿಸಿ ಭಾಷಣ ಆಲಿಸುವಂತೆ ವಿನಂತಿಸಿ ಕೊಂಡಿದ್ದರು. ಅಲ್ಲದೆ, ಅತೀ ಶೀಘ್ರದಲ್ಲಿ ಇನ್ನೊಮ್ಮೆ ಮಂಗಳೂರಿಗೆ ಬರುವುದಾಗಿ ಹೇಳಿದ್ದರು.

ತುಳು, ಕನ್ನಡದಲ್ಲಿ ಮಾತು
2014ರ ಲೋಕಸಭಾ ಚುನಾವಣೆಗೂ ಮುನ್ನ ಮತ್ತು ಪ್ರಧಾನಿಯಾದ ಬಳಿಕ 2018ರ ವಿಧಾನಸಭಾ ಚುನಾವಣೆ ವೇಳೆ ಮಂಗಳೂರಿಗೆ ಬಂದಿದ್ದಾಗ ತುಳುವಿನಲ್ಲಿ ಭಾಷಣ ಆರಂಭಿಸಿದ್ದ ಮೋದಿ, ಈ ಬಾರಿ ಕನ್ನಡದಲ್ಲಿ ಮಾತು ಆರಂಭಿಸಿದ್ದರು. “ಮಂಗಳೂರು ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಆತ್ಮೀಯ ನಾಗರಿಕ ಬಂಧುಗಳೇ ನಿಮಗೆಲ್ಲರಿಗೂ ಚೌಕೀದಾರ್‌ ನರೇಂದ್ರ ಮೋದಿಯ ನಮಸ್ಕಾರಗಳು’ ಎಂದು ಕನ್ನಡದಲ್ಲೇ ಮಾತು ಆರಂಭ ಮಾಡಿದ್ದು, ಸಮಸ್ತ ಜನರನ್ನು ಪುಳಕಿತರಾಗುವಂತೆ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next