ನವದೆಹಲಿ: ದೇಶದಲ್ಲಿ ಉದ್ಯೋಗ ಸೃಷ್ಟಿ ಮತ್ತು ಅರ್ಥ ವ್ಯವಸ್ಥೆ ಪುನಶ್ಚೇತನದ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ಇದಕ್ಕಾಗಿ ಸಚಿವರ ಎರಡು ಉನ್ನತ ಮಟ್ಟದ ಸಮಿತಿ ರಚಿಸಿದ್ದಾರೆ. ಎರಡೂ ಸಮಿತಿಗಳ ನೇತೃತ್ವವನ್ನು ಖುದ್ದು ಪ್ರಧಾನಿಯವರೇ ವಹಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಮಾಹಿತಿಯಲ್ಲಿ ಉದ್ಯೋಗ ಸೃಷ್ಟಿಯಲ್ಲಿ ನಿರೀಕ್ಷಿತ ಸಾಧನೆ ಮಾಡಲು ಸಾಧ್ಯವಾಗದೇ ಇರುವುದು ಮತ್ತು 5 ವರ್ಷಗಳ ಕನಿಷ್ಠಕ್ಕೆ ದೇಶದ ಅರ್ಥ ವ್ಯವಸ್ಥೆ ಕುಸಿದಿರುವುದು ವರದಿಯಾಗಿತ್ತು. ಹೀಗಾಗಿ ಈ ಎರಡೂ ಕ್ಷೇತ್ರಗಳು ಚೇತರಿಸಿಕೊಳ್ಳುವಂತೆ ಮಾಡುವುದು ಈ ಕ್ಯಾಬಿನೆಟ್ ಸಮಿತಿಗಳ ರಚನೆಯ ಉದ್ದೇಶವಾಗಿದೆ. ಇದಕ್ಕಾಗಿ ಬಂಡವಾಳ ಹೂಡಿಕೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಂಪುಟ ಸಮಿತಿ ಹಾಗೂ ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದ ಸಮಿತಿಯನ್ನು ರಚಿಸಲಾಗಿದೆ.
ಯಾವ ಸಮಿತಿಯಲ್ಲಿ ಯಾರ್ಯಾರು?: ಕೇಂದ್ರ ಸಂಪುಟಕ್ಕಾಗಿನ ಬಂಡವಾಳ ಹೂಡಿಕೆ, ಬೆಳವಣಿಗೆಗಾಗಿ ಇರುವ ಸಮಿತಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಧ್ಯಮ ಮತ್ತು ಸಣ್ಣ ಪ್ರಮಾಣ ಉದ್ದಿಮೆ ಸಚಿವ ನಿತಿನ್ ಗಡ್ಕರಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಸದಸ್ಯರಾಗಿದ್ದಾರೆ.
ಉದ್ಯೋಗ ಸೃಷ್ಟಿ ಮತ್ತು ಕೌಶಲ್ಯಾಭಿವೃದ್ಧಿಗಾಗಿನ ಕೇಂದ್ರ ಸಂಪುಟ ಸಮಿತಿಗೂ ಪ್ರಧಾನಿಯವರೇ ಮುಖ್ಯಸ್ಥರಾಗಿದ್ದು, ಅದರಲ್ಲಿ ಹತ್ತು ಮಂದಿ ಸದಸ್ಯರಿದ್ದಾರೆ. ಅಮಿತ್ ಶಾ, ಪಿಯೂಷ್ ಗೋಯಲ್, ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ನರೇಂದ್ರ ಸಿಂಗ್ ತೋಮರ್, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರೀಯಾಲ್ ನಿಶಾಂಕ್, ಪೆಟ್ರೋಲಿಯಂ ಮತ್ತು ಉಕ್ಕು ಖಾತೆ ಸಚಿವ ಧರ್ಮೇಂದ್ರ ಪ್ರಧಾನ್, ಕೌಶಲ್ಯಾಭಿವೃದ್ಧಿ ಸಚಿವ ಡಾ.ಮಹೇಂದ್ರನಾಥ್ ಪಾಂಡೆ, ಸಹಾಯಕ ಸಚಿವರಾಗಿರುವ ಸಂತೋಷ್ ಕುಮಾರ್ ಗಂಗ್ವಾರ್ ಮತ್ತು ಹರ್‌ದೀಪ್ ಸಿಂಗ್‌ಪುರಿ ಇದ್ದಾರೆ.
ಈ ಎರಡು ಉನ್ನತ ಮಟ್ಟದ ಸಮಿತಿಗಳ ರಚನೆಯಿಂದಾಗಿ ಎನ್‌ಡಿಎಯ ಎರಡನೇ ಅವಧಿಯಲ್ಲಿ ಉದ್ಯೋಗ ಸೃಷ್ಟಿ, ಕೌಶಲ್ಯಾಭಿವೃದ್ಧಿ ಮತ್ತು ಅರ್ಥ ವ್ಯವಸ್ಥೆ ಪುನಃಶ್ಚೇತನಕ್ಕೆ ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎನ್ನುವುದನ್ನು ಶೀಘ್ರಾತಿ ಶೀಘ್ರದಲ್ಲಿ ಕಂಡುಕೊಳ್ಳಬೇಕಾಗಿದೆ. ಜು.5ರಂದು ಮಂಡಿಸಲಾಗುವ ಕೇಂದ್ರ ಬಜೆಟ್‌ಗೆ ಮುನ್ನ ಈ ಅಂಶಗಳು ಅಂತಿಮಗೊಳ್ಳಬೇಕಾದ್ದು ಅನಿವಾರ್ಯ.
ಪ್ರಧಾನಿಯವರು ರಚನೆ ಮಾಡಿರುವ ಈ ಎರಡು ಸಮಿತಿಗಳು 2ನೇ ಅವಧಿಯ ಆಡಳಿತದ ಮೊದಲ ಉನ್ನತ ಮಟ್ಟದ ಸಮಿತಿಗಳಾಗಿವೆ. 2018-19ನೇ ಸಾಲಿನ ವಿತ್ತೀಯ ವರ್ಷದ ಜನವರಿಯಿಂದ ಮಾರ್ಚ್ ಅವಧಿಯಲ್ಲಿ ಶೇ.5.8ರ ದರದಲ್ಲಿ ಅರ್ಥ ವ್ಯವಸ್ಥೆ ಬೆಳವಣಿಗೆ ಸಾಧಿಸಿತ್ತು. ಇದು ನಿರೀಕ್ಷಿತ ಬೆಳವಣಿಗೆಗಿಂತ ಕಡಿಮೆಯಾಗಿದೆ. ಚೀನಾದ ಅರ್ಥ ವ್ಯವಸ್ಥೆ ಶೇ.6.4ರ ದರದಲ್ಲಿ ಬೆಳವಣಿಗೆ ಸಾಧಿಸಿತ್ತು.
ಇನ್ನು ಉದ್ಯೋಗ ಸೃಷ್ಟಿ ಸಂಬಂಧಿಸಿದಂತೆ ಕೇಂದ್ರದ ಸಾಂಖ್ಯೀಕ ಮತ್ತು ಯೋಜನೆ ಅನುಷ್ಠಾನ ಸಚಿವಾಲಯದ ದತ್ತಾಂಶ ಪ್ರಕಾರ 2017-18ನೇ ಸಾಲಿನಲ್ಲಿ ನಿರುದ್ಯೋಗ ಪ್ರಮಾಣ ಶೇ.6.1ರಷ್ಟು ಏರಿಕೆಯಾಗಿದೆ. ಇದು 45 ವರ್ಷಗಳಿಗೆ ಹೋಲಿಕೆ ಮಾಡಿದರೆ ಹೆಚ್ಚು ಎಂದು ದಾಖಲೆಗಳಿಂದ ಉಲ್ಲೇಖೀತವಾಗಿದೆ.